Fact Check | ಲಿಕ್ಕರ್ ಹಗರಣಕ್ಕೆ ಮನೀಷ್‌ ಸಿಸೋಡಿಯ ಕಾರಣವೆಂದು ಅರವಿಂದ್‌ ಕೇಜ್ರಿವಾಲ್‌ ಹೇಳಿಲ್ಲ

“ಈ ವರದಿ ನೋಡಿ.. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಾದಾತ್ಮಕ ಮದ್ಯ ನೀತಿಯ ಹೊಣೆಯನ್ನು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಮೇಲೆ ಹೊರಿಸಿದ್ದಾರೆ. ಇದೀಗ ಆಮ್‌ ಆದ್ಮಿ ಪಕ್ಷದ ಅಸಲಿ ಮುಖ ಹೊರ ಬಂದಿದೆ. ಪಕ್ಷದ ಒಳಗಿರುವ ಒಡಕು ಹೊರ ಬಂದಿದ್ದು, ಆಪ್‌ ಪಕ್ಷದ ನಾಯಕ ಹಾಗು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತಮ್ಮ ಪಕ್ಷದಿಂದಲೇ ತಪ್ಪಾಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.” ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅದರಲ್ಲೂ ಪ್ರಮುಖವಾಗಿ ನ್ಯೂಸ್‌ 18 ಇಂಡಿಯಾದ ಬುಲೆಟಿನ್‌ನ ಕ್ಲಿಪ್ ಅನ್ನು ಉಲ್ಲೇಖಿಸಿ ಸಾಕಷ್ಟು ಮಂದಿ ಇದೇ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದು. ಕೆಲ ಮಾಧ್ಯಮಗಳು ಮತ್ತು ಅದರ ವರದಿಗಾರರು ಕೂಡ ಅರವಿಂದ್‌ ಕೇಜ್ರಿವಾಲ್‌ ಅವರು ಲಿಕ್ಕರ್‌ ಹರಗಣಕ್ಕೆ ಮನಿಶ್‌ ಸಿಸೋಡಿಯ ಅವರೇ ಕಾರಣಕರ್ತರು ಎಂದು ಹೇಳಿರುದ್ದಾರೆ ಎಂದು ವರದಿ ಮಾಡಿರುವುದರಿಂದ ಬಹುತೇಕರು ಇದು ನಿಜವಾದ ಸುದ್ದಿ ಎಂದು ಭಾವಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಇದೇ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ನಿಜವೇ ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಂತೆಯೇ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ಹಲವು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ಕೂಡ ನಡೆಸಲಾಯಿತು. ಈ ವೇಳೆ ನಮಗೆ ಎಕ್ಸ್‌ನಲ್ಲಿ ( ಈ ಹಿಂದಿನ ಟ್ವಿಟರ್‌) ಈ ಪ್ರಕರಣದ ಕುರಿತು ಬಾರ್ ಆಂಡ್‌ ಬೆಂಚ್‌ನಲ್ಲಿ ಕಾನೂನು ವರದಿ ಪೋಸ್ಟ್ ಮಾಡಿದ ನ್ಯಾಯಾಲಯದ ಪ್ರಕ್ರಿಯೆಗಳ ಕುರಿತು ಮಾಹಿತಿ ಲಭ್ಯವಾಗಿದೆ.

ಅದರಲ್ಲಿ ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ನೀಡುವಂತೆ ಕೋರಿ ಸಿಬಿಐ ಪರ ವಾದ ಮಂಡಿಸುತ್ತಿರುವಾಗ, ಜೂನ್ 26 ರಂದು ಮಧ್ಯಾಹ್ನ 12:38 ಕ್ಕೆ ವಕೀಲ ಡಿ.ಪಿ ಸಿಂಗ್, ಅವರು “ನಮಗೆ ಕೇಜ್ರಿವಾಲ್‌ ಅವರ ಕಸ್ಟಡಿ ವಿಚಾರಣೆ ಅಗತ್ಯವಿದೆ.. ಅವರಿಗೆ ವಿಜಯ್ ನಾಯರ್ ಅವರು ತಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿದ್ದರು ಎಂಬುದರ ಅರಿವೇ ಇಲ್ಲ.. ಕೇಜ್ರಿವಾಲ್‌ ಅವರು ವಿಜಯ್‌ ನಾಯರ್‌ನನ್ನು  ಅತಿಶಿ ಮರ್ಲೆನಾ ಮತ್ತು ಸೌರಬ್ ಭಾರದ್ವಾಜ್ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಈ ಮೂಲಕ ಅವರು ಮನೀಶ್ ಸಿಸೋಡಿಯಾ ಮೇಲೆ ಈ ಹಗರಣದ ಸಂಪೂರ್ಣ ಹೊಣೆಯನ್ನು ಹಾಕಿದ್ದಾರೆ ಮತ್ತು ಅಬಕಾರಿ ನೀತಿಯ ಬಗ್ಗೆ ತನಗೆ  ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ” ಎಂಬುದು ತಿಳಿದು ಬಂದಿದೆ.

ಈ ಹೇಳಿಕೆಯನ್ನು ವಾದ ಮಂಡಿಸುವ ಸಂದರ್ಭದಲ್ಲಿ ಡಿ.ಪಿ ಸಿಂಗ್‌ ಅವರು ಹೇಳಿದ್ದಾಗಿದೆ. ಈ ಹೇಳಿಕೆಯನ್ನೇ ಆಧಾರವಾಗಿಸಿ ಬಹುತೇಕ ಮಾಧ್ಯಮಗಳು ಆತುರದಲ್ಲಿ ವರದಿಯನ್ನು ಮಾಡಿವೆ. ಆದರೆ ಒಂದುವರೆ ಗಂಟೆಗಳ ನಂತರ ಅರವಿಂದ್‌ ಕೇಜ್ರಿವಾಲ್‌ ಅವರು ಡಿ.ಪಿ ಸಿಂಗ್‌ ಅವರ ಹೇಳಿಕಯನ್ನು ನಿರಾಕರಿಸಿದ್ದು, “ಮನೀಷ್ ಸಿಸೋಡಿಯಾ ತಪ್ಪಿತಸ್ಥ ಎಂದು ಸೂಚಿಸುವ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮನೀಶ್ ಸಿಸೋಡಿಯಾ ನಿರಪರಾಧಿ, ಎಎಪಿ ನಿರಪರಾಧಿ, ನಾನು ನಿರಪರಾಧಿ. ಮಾಧ್ಯಮಗಳ ಮುಂದೆ ನಮ್ಮನ್ನು ಕಳಂಕಿತರನ್ನಾಗಿಸುವುದು ಇವರ ಸಂಪೂರ್ಣ ಯೋಜನೆಯಾಗಿದೆ,” ಎಂದರು.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣ ಮತ್ತು ಸುದ್ದಿವಾಹಿನಿಗಳು ಹೇಳಿದಂತೆ ಅರವಿಂದ್‌ ಕೇಜ್ರಿವಾಲ್‌ ಅವರು ಲಿಕ್ಕರ್‌ ಹಗರಣಕ್ಕೆ ಮನೀಶ್ ಸಿಸೋಡಿಯಾ ಅವರೇ ಹೊಣೆಗಾರರು ಎಂದು ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು. ಮತ್ತು ಈ ಕುರಿತು ನ್ಯಾಯಾಲಯದಲ್ಲೇ ಅರವಿಂದ್‌ ಕೇಜ್ರಿವಾಲ್‌ ಅವರು ಹೇಳಿಕೆ ನೀಡಿದ್ದು ಮನೀಶ್‌ ಸಿಸೋಡಿಯಾ ಅವರು ನಿರಾಪರಾಧಿ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ: Fact Check: ರಾಷ್ಟ್ರಗೀತೆ ವೇಳೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಾಜರಿದ್ದರು, ತಡವಾಗಿ ಆಗಮಿಸಿದರು ಎಂಬ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *