ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ ಸ್ಕಾರ್ಫ್ ಧರಿಸಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಧೋನಿ ಬಿಜೆಪಿ ಸೇರುತ್ತಿದ್ದಾರೆ ಎಂದು ಹಲವರು ಪೋಸ್ಟ್ ಮಾಡುತ್ತಿದ್ದಾರೆ. ವೈರಲ್ ಆಗಿರುವ ಈ ಫೋಟೋದಲ್ಲಿ ಧೋನಿ ಮತ್ತು ಮೋದಿ ಇಬ್ಬರೂ ಬಿಜೆಪಿಯ ಚಿಹ್ನೆಯನ್ನು ಹೋಲುವ ಬಿಳಿ ಕಮಲದ ಕೇಸರಿ ಸ್ಕಾರ್ಫ್ಗಳನ್ನು ಧರಿಸಿ, ‘ಭಾರತೀಯ ಜನತಾ ಪಕ್ಷ’ ಎಂದು ಬರೆದಿರುವ ಕೇಸರಿ ಬ್ಯಾನರ್ ಮುಂದೆ ನಿಂತಿರುವುದು ಕಂಡು ಬಂದಿದೆ. ಹೀಗಾಗಿ ಫೋಟೋ ಕೂಡ ವೈರಲ್ ಆಗಿದೆ.

ವೈರಲ್ ಫೋಟೋ ನಿಜವಾದ ಫೋಟೋವಿನಂತೆ ಭಾಸವಾಗಿರುವುದರಿಂದ ಹಲವರು ಎಂ.ಎಸ್ ಧೋನಿ ಬಿಜೆಪಿ ಸೇರುತ್ತಿರುವುದು ಖಚಿತವಾಗಿದೆ, ಕ್ರಿಕೆಟಿಗ ಗೌತಮ್ ಗಂಭೀರ್ ನಂತರ ಧೋನಿ ಸೇರ್ಪಡೆ ಬಿಜೆಪಿಗೆ ಅತಿ ದೊಡ್ಡ ಲಾಭವನ್ನು ತಂದು ಕೊಡಲಿದೆ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವೈರಲ್ ಫೋಟೋ ಕುರಿತು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Mahendra Singh Dhoni announces his mid-season retirement from IPL and enters politics by joining BJP
Looks like he might be India's next Prime Minister. pic.twitter.com/ByKOcfgUJ1
— 𝐾𝑢𝑠ℎ (@aryansingh2466) April 1, 2025
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಅಪ್ಲೋಡ್ ಮಾಡಿ ಹುಡುಕಾಟವನ್ನು ನಡೆಸಿದೆವು. ಆದರೆ ನಮಗೆ ಈ ಫೋಟೋ ಕುರಿತು ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ.

ಈ ಕಾರಣದಿಂದಾಗಿ ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಕ್ರಿಕೆಟಿಗ ಧೋನಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಅಧಿಕೃತ ವರದಿಗಳಿಗಾಗಿ ಹುಡುಕಾಟವನ್ನು ನಡೆಸಿದೆವು, ಆದರೆ ಈ ಕುರಿತು ಯಾವುದೇ ವರದಿಗಳು ಪ್ರಕಟವಾಗಿಲ್ಲ. ಇದು ಧೋನಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿಲ್ಲ ಎಂಬುದನ್ನು ಖಚಿತಪಡಿಸಿದೆ.

ಹೀಗಾಗಿ ನಾವು ವೈರಲ್ ಫೋಟೋವನ್ನು AI ಚಿತ್ರಗಳು ಮತ್ತು ವಿಡಿಯೋಗಳನ್ನು ಪತ್ತೆ ಹಚ್ಚುವ ಹೈವ್ ಮಾಡ್ರೆಷನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆವು. ಈ ವೇಳೆ ವೈರಲ್ ಫೋಟೋ ಶೇಕಡ 98.1 ರಷ್ಟು AIನಿಂದ ನಿರ್ಮಿಸಿರುವ ಸಾಧ್ಯತೆಯ ಫಲಿತಾಂಶವನ್ನು ನೀಡಿದೆ. ಇದರ ಜೊತೆಗೆ AI Or NOT ವೆಬ್ಸೈಟ್ನಲ್ಲಿ ಕೂಡ ವೈರಲ್ ಫೋಟೋವನ್ನು ಪರಿಶೀಲನೆ ನಡೆಸಿದಾಗ ಈ ಫೋಟೋ ಸಂಪೂರ್ಣವಾಗಿ AIನಿಂದ ನಿರ್ಮಿಸಿರುವ ಸಾಧ್ಯತೆ ಇದೆ ಎಂಬುದನ್ನು ಖಚಿತಪಡಿಸಿದೆ.


ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಕ್ರಿಕೆಟಿಗ ಎಂ.ಎಸ್ ಧೋನಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂಬುದು ಸುಳ್ಳು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಂ.ಎಸ್ ಧೋನಿ ಅವರು ಬಿಜೆಪಿಯ ಸ್ಕಾರ್ಫ್ ಧರಿಸಿರುವ ಫೋಟೋ AI ನಿಂದ ನಿರ್ಮಿಸಲಾಗಿದೆ. ಈ ಕಾರಣದಿಂದ ವೈರಲ್ ಫೋಟೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ದಾಳಿ ಎಂದು ಬಾಂಗ್ಲಾದೇಶದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

