ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಅಮೆರಿಕ ಬೇಟಿಯ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಭಾರತದಲ್ಲಿ ಇವಿಎಂ ವಂಚನೆಯ ಮೂಲಕ ಮೋದಿ ಚುನಾವಣೆಯನ್ನು ಗೆದ್ದಿದ್ದಾರೆ ಎಂದು ಹೇಳಿದ್ದಾರೆ” ಎಂಬ ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಇವಿಎಂ ವಿಚಾರ ಚರ್ಚೆಯಲ್ಲಿರುವ ಹೊತ್ತಿನಲ್ಲಿ ಈ ಪೋಸ್ಟ್ ಕೂಡ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ.

ಇನ್ನು ವೈರಲ್ ಪೋಸ್ಟ್ ಅನ್ನು ನೋಡಿದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದು, “ಅಮೆರಿಕದ ಅಧ್ಯಕ್ಷರಿಗೆ ಕೂಡ ಭಾರತದಲ್ಲಿ ಪ್ರಧಾನಿ ಮೋದಿ ಅವರು ಇವಿಎಂ ವಂಚನೆಯ ಮೂಲಕ ಗೆದ್ದಿದ್ದಾರೆ ಎಂಬುದು ತಿಳಿದಿದೆ. ಹಾಗಾಗಿ ಈ ಕುರಿತು ತನಿಖೆ ಆಗಬೇಕು” ಎಂದೆಲ್ಲ ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯ ಸಂದರ್ಭದ ವಿಡಿಯೋಗಳನ್ನು ಗಮನಿಸಿದ್ದೇವೆ, ಇಲ್ಲಿ ಟ್ರಂಪ್ ಅವರು ಪ್ರಧಾನಿ ಮೋದಿ ಅವರ ಭೇಟಿಯ ವೇಳೆ ಮೋದಿ ವಿರುದ್ಧ ಹೇಳಿಕೆ ನೀಡಿರುವ ಒಂದೇ ಒಂದು ದೃಷ್ಯಗಳು ಕಂಡು ಬಂದಿಲ್ಲ.
ಇನ್ನು ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರ ಜಂಟಿ ಸುದ್ದಿಗೋಷ್ಠಿಯನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಆದರೆ ಇಲ್ಲಿಯೂ ಕೂಡ ಟ್ರಂಪ್ ಅವರು ಪ್ರಧಾನಿ ಮೋದಿ ಅವರ ಚುನಾವಣೆ ಗೆಲುವಿನ ಕುರಿತು ಯಾವುದೇ ಹೇಳಿಕೆ ನೀಡಿರುವುದು ಕಂಡುಬಂದಿಲ್ಲ. ಈ ಭೇಟಿಯ ವೇಳೆ ಭಾರತ ಮತ್ತು ಅಮೆರಿಕದ ನಡುವೆ ಇಂಧನ, ಶಿಕ್ಷಣ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಇನ್ನು 13 ಫೆಬ್ರವರಿ 2025 ರಂದು ನಡೆದ ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜಂಟಿ ಪತ್ರಿಕಾಗೋಷ್ಠಿಯ ಹೇಳಿಕೆಯನ್ನು ಅಮೆರಿಕದ ವೈಟ್ ಹೌಸ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಗೊಳಿಸಿದೆ. ಇದನ್ನು ಕೂಡ ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ಇದರಲ್ಲಿ ಎಲ್ಲಿಯೂ ಕೂಡ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಅವರ ಚುನಾವಣೆ ಗೆಲುವಿನ ಕುರಿತು ಮಾತನಾಡಿರುವುದು ಕಂಡುಬಂದಿಲ್ಲ. ಹೀಗಾಗಿ ವೈರಲ್ ಪೋಸ್ಟ್ ಜನರ ದಾರಿ ತಪ್ಪಿಸಲು ಹಂಚಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಲೋಕಸಭೆ ಚುನಾವಣೆಯಲ್ಲಿ ಇವಿಎಂ ವಂಚನೆಯ ಮೂಲಕ ಬಹುದೊಡ್ಡ ಗೆಲುವನ್ನು ಸಾಧಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳಾಗಿದೆ. ಈ ಕುರಿತು ಹಲವು ರೀತಿಯಲ್ಲಿ ಪರಿಶೀಲನೆ ನಡೆಸಿದಾಗ, ಯಾವುದೇ ಅಧಿಕೃತ ವರದಿಗಳಾಗಲಿ, ವಿದೇಶಾಂಗ ಇಲಾಖೆಯ ಯಾವುದೇ ಪ್ರಕಟಣೆಗಳಾಗಲಿ ಅಥವಾ ಟ್ರಂಪ್ ಅವರ ಅಧಿಕೃತ ಕಚೇರಿಯಿಂದಾಗಲಿ ಮಾಹಿತಿಗಳು ದೊರೆತಿಲ್ಲ ಮತ್ತು ಒಂದು ವೇಳೆ ಟ್ರಂಪ್ ಅವರು ಈ ರೀತಿಯ ಹೇಳಿಕೆ ನೀಡಿದ್ದರೆ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದರೆ ಆ ರೀತಿಯ ವರದಿಗಳು ಕಂಡುಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check | ಮುಸ್ಲಿಂ ಯುವತಿ ತನ್ನ ಚಿಕ್ಕಪ್ಪನನ್ನೇ ಮದುಯಾಗಿದ್ದಾಳೆ ಎಂದು ನಾಟಕೀಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

