ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ, ಯುವತಿಯೊಬ್ಬಳನ್ನು ಪೊಲೀಸರು ಕಾರಿನಲ್ಲಿ ಕರೆದೊಯ್ಯುವುದನ್ನು ಕಾಣಬಹುದು. ಇದನ್ನು ಬಳಸಿಕೊಂಡು ಹಲವರು ಬುರ್ಖಾ ಧರಿಸಿಕೊಂಡು ಹಿಂದೂ ಮಹಿಳೆಯೊಬ್ಬಳು ಅದರಲ್ಲೂ ಬಿಜೆಪಿ ಕಾರ್ಯಕರ್ತೆಯಾದ ಈಕೆ ಮುಸಲ್ಮಾನರ ಪ್ರತಿಭಟನೆಗೆ ಬಂದು ಗಲಭೆ ಎಬ್ಬಿಸಲು ಪ್ರಯತ್ನಿಸಿದ್ದಾಳೆ, ಆ ಮೂಲಕ ಮುಸಲ್ಮಾನರೇ ಗಲಭೆ ಮಾಡುತ್ತಾರೆ ಎಂದು ಬಿಂಬಿಸುವ ಯತ್ನ ಈಗೆಯದ್ದಾಗಿತ್ತು ಎಂದು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ಕೂಡ ಮಹಿಳೆಯನ್ನು ಪೊಲೀಸರು ಕರೆದುಕೊಂಡು ಹೋಗುವುದು ಕಂಡು ಬರುತ್ತಿರುವುದರಿಂದ ಹಲವರು ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ವಿಡಿಯೋ ಕೂಡ ಕೋಮು ಆಯಾಮದೊಂದಿಗೆ ರಾಜಕೀಯ ಕೆಸರೆರಚಾಟಕ್ಕೆ ಕೂಡ ಕಾರಣವಾಗಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆಯನ್ನು ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಎಬಿಪಿ ನ್ಯೂಸ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಫೆಬ್ರವರಿ 5, 2020 ರಂದು ಅಪ್ಲೋಡ್ ಮಾಡಲಾದ ವಿಡಿಯೋ ಕಂಡು ಬಂದಿದೆ. ಮಾಹಿತಿಯ ಪ್ರಕಾರ, ವೀಡಿಯೊದಲ್ಲಿ ಕಾಣುವ ಮಹಿಳೆಯ ಹೆಸರು ಗುಂಜಾ ಕಪೂರ್, ಅವರು ಯೂಟ್ಯೂಬರ್. ಗುಂಜಾ ಕಪೂರ್ ಬುರ್ಖಾ ಧರಿಸಿ ಸಿಎಎ ಪ್ರತಿಭಟನಾ ಸ್ಥಳದ ವೀಡಿಯೊಗಳನ್ನು ಮಾಡಿ ಪ್ರತಿಭಟನಾಕಾರರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ದೈನಿಕ್ ಜಾಗರಣ್ ವೆಬ್ಸೈಟ್ನಲ್ಲಿ ಫೆಬ್ರವರಿ 5, 2020 ರಂದು ಪ್ರಕಟವಾದ ವರದಿ ಕಂಡು ಬಂದಿದೆ. ಇದರಲ್ಲಿ “ಶಾಹೀನ್ ಬಾಗ್ನಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಗುಪ್ತ ಕ್ಯಾಮೆರಾ ಹಿಡಿದುಕೊಂಡು ತಲುಪಿದ್ದರು. ಆ ಮಹಿಳೆ ಪ್ರದರ್ಶನದ ಬಗ್ಗೆ ಜನರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಇದು ಜನರಿಗೆ ಆ ಮಹಿಳೆಯ ಮೇಲೆ ಅನುಮಾನ ಮೂಡಿಸಿತು. ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದರು. ವರದಿಯ ಪ್ರಕಾರ ಆ ಮಹಿಳೆಯ ಹೆಸರು ಗುಂಜಾ ಕಪೂರ್, ಅವರು ಯೂಟ್ಯೂಬ್ನಲ್ಲಿ ಚಾನೆಲ್ ನಡೆಸುತ್ತಿದ್ದಾರೆ.” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ, ಇತ್ತೀಚೆಗೆ ಮುಸಲ್ಮಾನರು ಪ್ರತಿಭಟನೆ ನಡೆಸುವಾಗ ಗಲಭೆ ಹರಡಲು ಬುರ್ಖಾ ಧರಿಸಿ ಶಾಹೀನ್ ಬಾಗ್ ತಲುಪಿದ “ಮೋದಿ ಭಕ್ತೆ” ಸಿಕ್ಕಿ ಬಿದ್ದಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ 2020ರ ಸಿಎಎ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | PM ಇಂಟರ್ನ್ಶಿಪ್ ಯೋಜನೆಯ ಹೆಸರಿನಲ್ಲಿ ನಕಲಿ ಲಿಂಕ್ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

