ದೇವಸ್ಥಾನದ ಅರ್ಚಕನನ್ನು ಥಳಿಸಿದ ವ್ಯಕ್ತಿ ಮುಸ್ಲಿಂ ಅಲ್ಲ ಹಿಂದೂ: ಈ ಘಟನೆ 3 ವರ್ಷ ಹಿಂದಿನದು

ಅರ್ಚಕನನ್ನು

ಇದು ರಾಜಸ್ಥಾನದ ಸ್ಥಿತಿ, ನೀವು ಇನ್ನೂ ಕಾಂಗ್ರೆಸ್‌ಗೆ ಮತ ಹಾಕುತ್ತೀರಾ? ಹಿಂದೂ ದೇವಾಲಯದ ಅರ್ಚಕನಿಗೆ ಮತಾಂಧ ಮುಸಲ್ಮಾನನೊಬ್ಬ ಥಳಿಸಿದ ವೀಡಿಯೋ. ಇದನ್ನು ಎಲ್ಲಾ ಗ್ರೂಪ್‌ಗಳಲ್ಲಿ ಶೇರ್ ಮಾಡಿ ತಪ್ಪಿತಸ್ಥನನ್ನು ಗುರುತಿಸಿ ಆತನನ್ನು ಬಂಧಿಸಲು ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ ಆತ್ಮೀಯ ಹಿಂದೂಗಳೇ.. ಎಂಬ ಶೀರ್ಷಿಕೆಯಡಿಯಲ್ಲಿ ಯುವಕನೊಬ್ಬ ಬ್ಯಾಟ್‌ನಿಂದ ಅರ್ಚಕನಿಗೆ ಹೊಡೆಯುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬಿಜೆಪಿ ಬೆಂಬಲಿಗರೆ ಇದನ್ನು ವೈರಲ್ ಮಾಡುತ್ತಿದ್ದು, ಆ ಮೂಲಕ ಕಟ್ಟರ್ ಮುಸ್ಲಿಂ ಯುವಕ ದೇವಸ್ಥಾನದ ಅರ್ಚಕನಿಗೆ ಥಳಿಸಿದ್ದಾನೆ ಎಂದು ಪ್ರತಿಪಾದಿಸಲಾಗುತ್ತಿದೆ.

ಫ್ಯಾಕ್ಟ್ ಚೆಕ್:

ಈ ಕುರಿತು ಹುಡುಕಿದಾಗ ಇದು ನವೆಂಬರ್ 6, 2020 ರಂದು ಪ್ರಕಟವಾದ ದೈನಿಕ್ ಭಾಸ್ಕರ್ ವರದಿ ಲಭ್ಯವಾಗಿದೆ. ಹರಿಯಾಣದ ಫತೇಹಾಬಾದ್ ಜಿಲ್ಲೆಯ ಧಾಬಿ ಕಲಾನ್ ಗ್ರಾಮದ ಯುವಕರು ದೇವಸ್ಥಾನದಲ್ಲಿ ಕ್ರಿಕೆಟ್ ಬ್ಯಾಟ್‌ಗಳನ್ನು ಇಡಲು ಮುಂದಾದಾಗ ಅದಕ್ಕೆ ಅವಕಾಶ ಕೊಡದ ದೇವಸ್ಥಾನದ ಅರ್ಚಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ, ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮತ್ತೊಂದು ಹಿಂದಿ ಪತ್ರಿಕೆ ದೈನಿಕ್ ಜಾಗರಣ್ ಸಹ ಅದೇ ರೀತಿಯಾಗಿ ವರದಿ ಮಾಡಿದ್ದು, “ಯುವಕರು ಪೂಜಾರಿ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಗಲಾಟೆ ಕೇಳಿದ ಸುತ್ತಮುತ್ತಲಿನವರು ಪೂಜಾರಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ನಾಲ್ವರು ಆರೋಪಿ ಯುವಕರನ್ನು (ಅಮಿತ್, ಕೃಷ್ಣ, ಪ್ರದೀಪ್, ರಾಕೇಶ್) ಬಂಧಿಸಲಾಗಿದೆ” ಎಂದಿದೆ. ಆರೋಪಿಗಳು ಹಿಂದೂ ಸಮುದಾಯದವರೆ ಹೊರತು ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ ಎಂಬುದು ಇದರಿಂದ ದೃಢಪಟ್ಟಿದೆ.

ಮೂವರು ಆರೋಪಿಗಳ (ಅಮಿತ್, ಕೃಷ್ಣ, ಪ್ರದೀಪ್) ವಿರುದ್ಧದ ಹರಿಯಾಣ ಪೊಲೀಸರು ನವೆಂಬರ್ 3, 2020 ರಂದು ದಾಖಲಿಸಿದ ಎಫ್‌ಐಆರ್‌ ಅನ್ನು ಇಲ್ಲಿ ನೋಡಬಹುದು.

ಆಲ್ಟ್ ನ್ಯೂಸ್ ಭಟ್ಟು ಕಲಾನ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿರುವ, ಈ ಕುರಿತು ದೂರು ದಾಖಲಿಸಿರುವ ನಿಹಾಲ್ ಸಿಂಗ್ ಅವರೊಂದಿಗೆ ಮಾತನಾಡಿದೆ. ಸಬ್ ಇನ್ಸ್ ಪೆಕ್ಟರ್ ಮಹೇಂದ್ರ ಸಿಂಗ್ ಅವರಿಂದ ತನಿಖೆ ನಡೆಸಲಾಗುತ್ತಿದ್ದು, ನಂತರ ಅವರನ್ನು ಬೇರೆ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆಲ್ಟ್‌ ನ್ಯೂಸ್ ಮಹೇಂದ್ರ ಸಿಂಗ್ ಅವರನ್ನು ಸಂಪರ್ಕಿಸಿದಾಗ, ‘ದೇವಸ್ಥಾನದಲ್ಲಿ ಬ್ಯಾಟ್ ಇಡಲು ನಿರಾಕರಿಸಿದ್ದಕ್ಕಾಗಿ ಅರ್ಚಕರನ್ನು ಯುವಕರು ಥಳಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ವೀಡಿಯೊಗೆ ಸಂಬಂಧಿಸಿದ ಕೆಲವು ಹಳೆಯ ವರದಿಗಳನ್ನು ಸಹ ಕಂಡುಬಂದಿವೆ. ಅರ್ಚಕ ಮೊಬೈಲ್‌ನಲ್ಲಿ ಹಳ್ಳಿಯ ಹುಡುಗಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಜನರು ಅರ್ಚಕನನ್ನು ಥಳಿಸಿದ್ದಾರೆ ಎಂದು ನವೆಂಬರ್ 3, 2020 ರಂದು ನಡೆದ ಘಟನೆಯನ್ನು ನ್ಯೂಸ್ 18 ವರದಿ ಮಾಡಿದೆ. ಅದನ್ನು ಇಲ್ಲಿ ನೋಡಬಹುದು.

ಖಬ್ರೇನ್ ಅಭಿ ತಕ್ ಹೆಸರಿನ ಯೂಟ್ಯೂಬ್ ಚಾನೆಲ್ ಕೂಡ ಘಟನೆಯ ಕುರಿತು ನವೆಂಬರ್ 4, 2020 ರಂದು ವೀಡಿಯೊ ವರದಿ ಬಿತ್ತರಿಸಿದೆ. ಇದರಲ್ಲಿ ಅರ್ಚಕ ಬಾಲಕಿಯೊಂದಿಗೆ ಫೋನ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವರದಿಯಲ್ಲಿ ಡಿಎಸ್‌ಪಿ ಶುಭಾಶ್‌ಚಂದ್ರ ಅವರು ಈ ವಿಷಯ ಪ್ರಸ್ತಾಪಿಸಿ ಆಡಿಯೋ ವೈರಲ್‌ ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ.

ಆದರೆ ಯಾವ ಮಾಧ್ಯಮಗಳು ಸಹ ಈ ಪ್ರಕರಣದ ಆರೋಪಿಗಳು ಮುಸ್ಲಿಂ ಸಮುದಾಯದವರು ಎಂದು ಉಲ್ಲೇಖಿಸಿಲ್ಲ. ಹಾಗಾಗಿ ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ. ಇನ್ನು ವಿಡಯೋ ಮೂರು ವರ್ಷ ಹಳೆಯದು ಮತ್ತು ಹರಿಯಾಣದ್ದು. ಆದರೂ ಸದ್ಯ ರಾಜಸ್ಥಾನ ವಿಧಾನಸಭಾ ಚುನಾವಣೆ ಇರುವುದರಿಂದ ಅಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಹರಡಲಾಗುತ್ತಿದೆ.


ಇದನ್ನೂ ಓದಿ; Fact Check : ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಿಯಾಂಕ ಗಾಂಧಿ ದೇವಸ್ಥಾನ ಸುತ್ತುತ್ತಿದ್ದಾರೆಂದು ಹಳೆ ಫೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *