Fact Check : ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಿಯಾಂಕ ಗಾಂಧಿ ದೇವಸ್ಥಾನ ಸುತ್ತುತ್ತಿದ್ದಾರೆಂದು ಹಳೆ ಫೋಟೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಗಾಂಧಿ ಕೆಂಪು ಸೀರೆ ಧರಿಸಿ ದೇವಾಸ್ಥಾನದ ಗಂಟೆ ಬಾರಿಸುತ್ತಿರುವ ಫೋಟೋವೊಂದು ವ್ಯಾಪಕವಾಗ ಹಂಚಿಕೊಳ್ಳಲಾಗುತ್ತಿದೆ. ಆದರೆ ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋದಲ್ಲಿ ಸಾಕಷ್ಟು ಮಂದಿ ಪ್ರಿಯಾಂಕ ಗಾಂಧಿ ಚುನಾವಣ ಪ್ರಚಾರಕ್ಕಾಗಿ ದೇವಸ್ಥಾನಕ್ಕೆ ತೆರಳುವ ನಾಟಕ ಮಾಡುತ್ತಿದ್ದಾರೆ ಎಂದು ಬರೆದುಕೊಳ್ಳುತ್ತಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವ್ಯಕ್ತಿಯೊಬ್ಬ, “ರಾಜಸ್ತಾನ, ಮಧ್ಯಪ್ರದೇಶ, ಚತ್ತೀಸ್‌ಘಡದಲ್ಲಿ ಚುನಾವಣೆ ಬರುತ್ತಿದೆ. ಅಜ್ಜಿಯ ಸೀರೆ ಪೆಟ್ಟಿಗೆಯಿಂದ ಆಚೆ ಬಂದಿದೆ. ಆದರೆ ನೀವು ಈ ಚುನಾವಣೆಯಲ್ಲಿ ಯಾವ ಲಾಭವನ್ನು ಪಡೆಯಲೂ ಸಾಧ್ಯವಿಲ್ಲ” ಎಂಬ ಅರ್ಥದಲ್ಲಿ ಪ್ರಿಯಾಂಕ ಗಾಂಧಿಯವ ಫೋಟೋಗೆ ತಲೆಬರಹವನ್ನ ನೀಡಿ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಈ ಕುರಿತು ಆನ್‌ಲೈನ್‌ ಸುದ್ದಿಸಂಸ್ಥೆ ನ್ಯೂಸ್‌ ಮೀಟರ್‌ ಫ್ಯಾಕ್ಟ್‌ಚೆಕ್‌ ನಡೆಸಿದ್ದು ಈ ವೈರಲ್‌ ಫೋಟೋದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿ ಅಸಲಿ ವಿಚಾರವನ್ನು ಬಹಿರಂಗ ಪಡಿಸಿದೆ. ಆ ವರದಿಯ ಪ್ರಕಾರ ಫ್ಯಾಕ್ಟ್‌ಚೆಕ್‌ ನಡೆಸಿದಾಗ ಪ್ರಿಯಾಂಕ ಗಾಂಧಿ ಅವರ ವೈರಲ್‌ ಫೋಟೋ‌ 12 ಏಪ್ರಿಲ್ 2009ರಂದು ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.

2009ರ ಚುನಾವಣೆಯ ಸಂದರ್ಭದಲ್ಲಿ ತಮ್ಮ ಸಹೋದರ ರಾಹುಲ್‌ ಗಾಂಧಿ ಅವರೊಂದಿಗೆ ಅಮೇಥಿಯ ದುರ್ಗಾ ದೇವಾಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭ ಪ್ರಿಯಾಂಕ ಗಾಂಧಿ ಅವರು ಈ ಫೋಟೋವನ್ನು ತೆಗೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ ಇದೇ ರೀತಿಯ ಹಲವು ಫೋಟೋಗಳನ್ನು 2009ರಲ್ಲೇ ಹಂಚಿಕೊಂಡಿರುವುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ.

ಈ ಎಲ್ಲಾ ಪುರವೆಗಳನ್ನು ಗಮನಿಸಿದಾಗ ಪ್ರಿಯಾಂಕ ಗಾಂಧಿ ಅವರು ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮ್ಮ ಅಜ್ಜಿ ಇಂದಿರಾ ಗಾಂಧಿಯವರ ಸೀರೆ ಧರಿಸಿ ದೇಶ ಸುತ್ತಲು ಆರಂಭಿಸುತ್ತಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : 2021ರ UPSC ಪರೀಕ್ಷೆಯ ಟಾಪರ್ ಶ್ರುತಿ ಶರ್ಮಾ ಸುರೇಶ್ ಚವ್ಹಾಣ್ ಅವರ ಪುತ್ರಿಯಲ್ಲ 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *