Fact Check: ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಿದೆ ಎಂಬುದು ಸುಳ್ಳು

4 trillion Economy

ಇತ್ತೀಚೆಗೆ ದೇಶದ ಆರ್ಥಿಕತೆಯ ಮೇಲೆ, ಜಿಡಿಪಿ ದತ್ತಾಂಶದ ಮೇಲೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೋವಿಡ್‌ ಅಲೆಯ ನಂತರದಲ್ಲಿ ನಿಧಾನವಾಗಿ ನಮ್ಮ ಭಾರತದ ಆರ್ಥಿಕತೆ ಸುಧಾರಿಸುತ್ತಿದೆ. ಆದರೆ ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇತ್ತೀಚೆಗೆ ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಿದೆ ಮತ್ತು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಜಿಡಿಪಿ ವರದಿ ಹೇಳಿದೆ. ಇದರ ಎಲ್ಲಾ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ಲೈವ್ ಜಿಡಿಪಿ ಅಂಕಿಅಂಶಗಳ ಪ್ರಕಾರ, ಭಾರತವು ಶನಿವಾರದಂದು ಮೈಲಿಗಲ್ಲನ್ನು ಸಾಧಿಸಿದೆ. ರಾತ್ರಿ 10.30ಕ್ಕೆ ದೇಶದ ಆರ್ಥಿಕತೆಯು ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್‌ಗಳನ್ನು ದಾಟಿದೆ. ಎಂಬ ಸುದ್ದಿಯನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಾಜಿ ಸಚಿವ ಸಿಟಿ ರವಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ತಮ್ಮ X ಖಾತೆಯಲ್ಲಿ ಮೋದಿಯವರಿಗೆ ಧನ್ಯವಾದ ತಿಳಿಸಿ ಪೋಸ್ಟ್‌ ಮಾಡಿದ್ದಾರೆ. ಇನ್ನೂ ಕನ್ನಡ ಪ್ರಭ, ಟಿವಿ 9, ಜೀ ನ್ಯೂಸ್, ಕನ್ನಡ ದುನಿಯಾ ಸೇರಿದಂತೆ ಹಲವಾರು ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿವೆ. 

 

ಫ್ಯಾಕ್ಟ್‌ಚೆಕ್: ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ(Ministry of Statistics and Program Implementation)ದ ಅಡಿಯಲ್ಲಿ ಬರುವ ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ (ಎನ್ಎಸ್ಒ) ಜಿಡಿಪಿ ದತ್ತಾಂಶವನ್ನು ಅಧಿಕೃತವಾಗಿ ಸಂಗ್ರಹಿಸಿ ಪ್ರಕಟಿಸುತ್ತದೆ. ಅದಾಗಲಿ ಅಥವಾ ಸರ್ಕಾರವಾಗಲೀ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿನ ಲೈವ್ ಜಿಡಿಪಿ ಚಿತ್ರದ ಆಧಾರದಲ್ಲಿ ಈ ಸುಳ್ಳು ಸುದ್ದಿ ಹರಡಲಾಗಿದೆ. ನವೆಂಬರ್ 30 ರಂದು ಜಿಡಿಪಿ ದರ ಘೋಷಣೆಯಾಗಲಿದ್ದು, ಸದ್ಯ ಭಾರತದ ಆರ್ಥಿಕತೆ 3.45 ಟ್ರಿಲಿಯನ್ ಡಾಲರ್ ನಷ್ಟಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.

ಕ್ಯಾಪಿಟಲ್ಮೈಂಡ್(Capitalmind) ಸಿಇಒ ದೀಪಕ್ ಶೆಣೈ ಕೂಡ ಈ ಕುರಿತ ವೈರಲ್ ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ಶೆಣೈ ಅವರ ಪ್ರಕಾರ, ಭಾರತದ ಜಿಡಿಪಿ ಇನ್ನೂ 4 ಟ್ರಿಲಿಯನ್ ಡಾಲರ್ ತಲುಪಿಲ್ಲ. “ನಾವು ಜೂನ್ ವೇಳೆಗೆ ಸುಮಾರು 3.38 ಟ್ರಿಲಿಯನ್ ಡಾಲರ್ ಮತ್ತು ಈಗ 3.45 ಟ್ರಿಲಿಯನ್ ಡಾಲರ್ ಆಗಿದ್ದೇವೆ” ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತೀದಿನದ ಶೇರ್ ಏರಿಳಿತದ ಫೀಡ್ ನೋಡಿದಂತೆ, ಜಿಡಿಪಿ ಅಂಕಿಅಂಶಗಳನ್ನು ಲೈವ್ ಸಾಮಾಜಿಕ ಮಾಧ್ಯಮ ಫೀಡ್‌ನಲ್ಲಿ ನೈಜ-ಸಮಯದ ಅಂಕಿಅಂಶಗಳಾಗಿ ನೋಡಲಾಗುವುದಿಲ್ಲ. ಜಿಡಿಪಿ ಬೆಳವಣಿಗೆಯನ್ನು ಆ ರೀತಿಯಲ್ಲಿ ಸೆರೆಹಿಡಿಯಲು ಸಾಧ್ಯವಿಲ್ಲದ ಕಾರಣ ಅಂತಹ ಅಂದಾಜು ದೋಷಪೂರಿತವಾಗಿರುತ್ತದೆ.

MoSPI  ಪ್ರಕಾರ, “ಜಿಡಿಪಿಯ ತ್ರೈಮಾಸಿಕ ಅಂದಾಜುಗಳು ಸೂಚಕ ಆಧಾರಿತವಾಗಿವೆ ಮತ್ತು ಬೆಂಚ್ಮಾರ್ಕ್-ಇಂಡಿಕೇಟರ್ ವಿಧಾನವನ್ನು ಬಳಸಿಕೊಂಡು ಸಂಗ್ರಹಿಸಲಾಗುತ್ತದೆ, ಅಂದರೆ, ಬೆಂಚ್ಮಾರ್ಕ್ ವರ್ಷ ಎಂದು ಉಲ್ಲೇಖಿಸಲಾದ ಹಿಂದಿನ ವರ್ಷಕ್ಕೆ ಲಭ್ಯವಿರುವ ತ್ರೈಮಾಸಿಕ ಅಂದಾಜುಗಳನ್ನು ಕ್ಷೇತ್ರಗಳ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುವ ಸಂಬಂಧಿತ ಸೂಚಕಗಳನ್ನು ಬಳಸಿಕೊಂಡು ವಿಸ್ತರಿಸಲಾಗುತ್ತದೆ. ವಿವಿಧ ಸಚಿವಾಲಯಗಳು / ಇಲಾಖೆಗಳು / ಖಾಸಗಿ ಏಜೆನ್ಸಿಗಳಿಂದ ಪಡೆದ ದತ್ತಾಂಶವು ಈ ಅಂದಾಜುಗಳ ಸಂಕಲನದಲ್ಲಿ ಅಮೂಲ್ಯವಾದ ಒಳಹರಿವುಗಳಾಗಿ ಕಾರ್ಯನಿರ್ವಹಿಸುತ್ತದೆ. (i) ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ), (ii) ಈ ಕಂಪನಿಗಳಿಗೆ ಲಭ್ಯವಿರುವ ತ್ರೈಮಾಸಿಕ ಹಣಕಾಸು ಫಲಿತಾಂಶಗಳ ಆಧಾರದ ಮೇಲೆ ಖಾಸಗಿ ಕಾರ್ಪೊರೇಟ್ ವಲಯದಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಆರ್ಥಿಕ ಕಾರ್ಯಕ್ಷಮತೆ, (iii) 2023-24ರ ಬೆಳೆ ಉತ್ಪಾದನಾ ಗುರಿಗಳು (iv) 2023-24ರ ಪ್ರಮುಖ ಜಾನುವಾರು ಉತ್ಪನ್ನಗಳ ಉತ್ಪಾದನಾ ಗುರಿಗಳು, (v) ಮೀನು ಉತ್ಪಾದನೆ, (vi) ಸಿಮೆಂಟ್ ಮತ್ತು ಉಕ್ಕಿನ ಉತ್ಪಾದನೆ / ಬಳಕೆ, (vii) ರೈಲ್ವೆಗಾಗಿ ನಿವ್ವಳ ಟನ್ ಕಿಲೋಮೀಟರ್ ಮತ್ತು ಪ್ರಯಾಣಿಕರ ಕಿಲೋಮೀಟರ್, (viii) ನಾಗರಿಕ ವಿಮಾನಯಾನ ನಿರ್ವಹಿಸುವ ಪ್ರಯಾಣಿಕರ ಮತ್ತು ಸರಕು ಸಾಗಣೆ, (ix) ಪ್ರಮುಖ ಮತ್ತು ಸಣ್ಣ ಸಮುದ್ರ ಬಂದರುಗಳಲ್ಲಿ ನಿರ್ವಹಿಸಲಾದ ಸರಕು ಸಾಗಣೆ, (x) ವಾಣಿಜ್ಯ ವಾಹನಗಳ ಮಾರಾಟ, (xi) ಬ್ಯಾಂಕ್ ಠೇವಣಿಗಳು ಮತ್ತು ಸಾಲಗಳು, (xii) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾತೆಗಳು, ಇತ್ಯಾದಿ. ಗಳಂತಹ ಸೂಚಕಗಳನ್ನು ಬಳಸಿಕೊಂಡು ವಲಯವಾರು ಅಂದಾಜುಗಳನ್ನು ಸಂಗ್ರಹಿಸಲಾಗುತ್ತದೆ.

ಇನ್ನೂ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆ ಎಂಬುದು ಸುಳ್ಳು. ಅಮೆರಿಕ, ಚೀನಾ, ಜರ್ಮನಿ ಮತ್ತು ಜಪಾನ್ ನಂತರ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. 2027ರ ವೇಳೆಗೆ ಭಾರತವು ಮೂರನೇ ಅಥವಾ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹಲವಾರು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಿದೆ ಎಂಬುದು ಸುಳ್ಳು.


ಇದನ್ನು ಓದಿ: Fact Check : “ಭಾರತ ಮಾತೆ ಯಾರು?” ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆಂದು ಎಡಿಟ್ ವಿಡಿಯೋ ಹಂಚಿಕೊಂಡ ಬಿಜೆಪಿ


ವಿಡಿಯೋ ನೋಡಿ: ಜಾರ್ಖಂಡ್ ಪೊಲೀಸರ ಅಣಕು ಡ್ರಿಲ್ ವಿಡಿಯೋ ಸುಳ್ಳು ಹೇಳಿಕೆಗಳೊಂದಿಗೆ ವೈರಲ್ ಆಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *