Fact Check: ಮಹಾತ್ಮಾ ಗಾಂಧೀಜಿಯವರು ಮುಸ್ಲಿಂ ಎಂಬುದು ಸಂಪೂರ್ಣ ಸುಳ್ಳು

ಮಹಾತ್ಮ ಗಾಂಧೀಜಿಯವರ ಕುರಿತು ಹಲವಾರು ಸುಳ್ಳು ಸುದ್ದಿಗಳು ದಿನಂಪ್ರತಿ ಹರಿದಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಕೆಲವು ಕೋಮುವಾದಿ, ಬಲಪಂಥೀಯರು ಗಾಂಧೀಜಿಯವರ ಇತಿಹಾಸವನ್ನು ತಿರುಚುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಹಲವಾರು ಸುಳ್ಳುಗಳನ್ನು ನಮ್ಮ ತಂಡ ಹೀಗಾಗಲೇ ಸತ್ಯಶೋಧನೆಯನ್ನು ನಡೆಸಿದ್ದು ನೀವದನ್ನು ಇಲ್ಲಿ ಓದಬಹುದಾಗಿದೆ.

ಪ್ರಸ್ತುತ, ಗಾಂಧೀಜಿ ಒಬ್ಬ ಮುಸ್ಲಿಂ ಆಗಿದ್ದರು. ಗಾಂಧೀಜಿಯವರ ತಂದೆ ಕರಮಚಂದ್ ಅವರು ಮುಸ್ಲಿಂ ಭೂಮಾಲೀಕರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಣ ಕದ್ದು ಮೂರು ವರ್ಷ ತಲೆಮರೆಸಿಕೊಂಡರು. ಆಗ ಆ ಮುಸ್ಲಿಂ ಭೂಮಾಲಿಕರು ಕರಮಚಂದ್ ಅವರ ನಾಲ್ಕನೇ ಹೆಂಡತಿ ಪುತ್ಲೀಭಾಯಿಯನ್ನು ಕರೆದೊಯ್ದು ತಮ್ಮ ಹೆಂಡತಿಯನ್ನಾಗಿ ಮಾಡಿಕೊಂಡಿದ್ದರು. ಹಾಗೆಯೇ ಭಗತ್ ಸಿಂಗ್ ಮತ್ತು ಇತರ ದೇಶಭಕ್ತರನ್ನು ಗಲ್ಲಿಗೇರಿಸಿದಾಗ, ಗಾಂಧಿ ಅವರನ್ನು ಗಲ್ಲಿಗೇರಿಸದಂತೆ ಮನವಿಗೆ ಸಹಿ ಹಾಕಲು ನಿರಾಕರಿಸಿದರು. ಮತ್ತು  ಟರ್ಕಿಯಲ್ಲಿ ಮುಸ್ಲಿಂ ಖಿಲಾಫತ್ ಚಳವಳಿಯನ್ನು ಬೆಂಬಲಿಸಿದ್ದರು, ಇದರಿಂದಾಗಿ ಡಾ. ಹೆಗ್ಡೆವಾರ್ ಅವರು ಗಾಂಧಿ ಮತ್ತು ಆರ್.ಎಸ್.ಎಸ್. ಸ್ಥಾಪಿಸಲಾಯಿತು..! ಎಂದು ಪ್ರತಿಪಾದಿಸಿದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಫ್ಯಾಕ್ಟ್‌ಚೆಕ್: ಗಾಂಧೀಜಿಯವರ ತಂದೆ ಕರಮಚಂದ್ ಗಾಂಧಿ ಅವರು ಪೋರಬಂದರ್‌ನ ರಾಜಮನೆತನದ ರಾಜಸಭೆಯಲ್ಲಿ ಅಧಿಕಾರಿಯಾಗಿದ್ದರು. ಕರಮಚಂದ್ ಅವರ ಮೊದಲ ಮತ್ತು ಎರಡನೇ ಪತ್ನಿ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಕ್ಷಣ ಸಾವನ್ನಪ್ಪಿದ್ದಾರೆ. ಮೂರನೇ ಪತ್ನಿ ಸಾವನಪ್ಪಿದ ನಂತರ ಅವರು 1857 ರಲ್ಲಿ ಪುತಲಿಬಾಯಿ ಗಾಂಧಿ ಅವರನ್ನು 4ನೇ ವಿವಾಹವಾದರು. ಆದ್ದರಿಂದ ಕರಮಚಂದ್ ಅವರು ಮುಸ್ಲಿಂ ಭೂಮಾಲೀಕರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಕಲ್ಪಿತ ಸುದ್ದಿಯೇ ಹೊರತು ನಿಜವಲ್ಲ.

ಇನ್ನೂ ನೆಹರು ಮತ್ತು ಇಂದಿರಾ ಗಾಂಧಿ ಸಹ ಮುಸ್ಲಿಂ ಎಂಬುದಕ್ಕೆ ಸಹ ಯಾವುದೇ ಆಧಾರವಿಲ್ಲ. ಈ ಸುದ್ದಿಯನ್ನು ಹಲವಾರು ದಿನಗಳಿಂದ ಹರಿಬಿಡಲಾಗಿದ್ದು ಈಗಾಗಲೇ “ಜವಹರಲಾಲ್ ನೆಹರೂರವರ ಕುರಿತ ಸರಣಿ ಸುಳ್ಳುಗಳು” ಎಂಬ ಲೇಖನದಲ್ಲಿ ಇದರ ಸತ್ಯಾಸತ್ಯೆತೆಯನ್ನು ಪರಿಶೀಲಿಸಲಾಗಿದೆ. ಅದನ್ನು ನೀವು ಇಲ್ಲಿ ನೋಡಬಹುದು.

ಇನ್ನೂ ಗಾಂಧಿಯವರ ಕುಟುಂಬವು ಹಿಂದೂ ಧರ್ಮದೊಳಗಿನ ಪ್ರಮುಖ ಪಂಥಗಳಲ್ಲಿ ಒಂದಾದ ವೈಷ್ಣವ ಧರ್ಮವನ್ನು ಅನುಸರಿಸುತ್ತಿದ್ದರು. ಮಹಾತ್ಮ ಗಾಂಧಿಯವರು ಸರ್ವ ಧರ್ಮಗಳ ಕುರಿತು ಸಹಿಷ್ಣು ಭಾವನೆಯನ್ನು ಹೊಂದಿದ್ದರು. ಭಗವತ್ಗೀತೆ, ಬೈಬಲ್, ಕುರಾನ್ ಎಲ್ಲಾ ಧರ್ಮಗ್ರಂಥಗಳನ್ನು ಓದಿದ ಪರಿಣಾಮ ಅವರ ಆಧ್ಯಾತ್ಮಿಕ ಯೋಚನೆಗಳ ಮೇಲೆ ಪ್ರಭಾವ ಬೀರಿದ್ದವು.ಪುತ್ಲಿಬಾಯಿ ಮೂಲತಃ ಪ್ರಣಾಮಿ ಪಂಥಕ್ಕೆ ಸೇರಿದವರು. ಈ ಪ್ರಣಾಮಿ ಪಂಥವು ಹಿಂದೂ ವೇಷದಲ್ಲಿರುವ ಇಸ್ಲಾಮಿಕ್ ಸಂಘಟನೆ ಎಂದು ಆರೋಪಿಸಲಾಗಿದೆ. ಆದರೆ ಪ್ರಣಾಮಿ ಪಂಥ್ ಎಂದೂ ಕರೆಯಲ್ಪಡುವ ಹಿಂದೂ ಪಂಥವು ಕೃಷ್ಣನನ್ನು ಪರಮ ದೇವರೆಂದು ಪೂಜಿಸುತ್ತದೆ. ಇದು ಮಹಾಮತಿ ಪ್ರಣನಾಥ್ ಮತ್ತು ದೇವಚಂದ್ರ ಅವರ ಬೋಧನೆಗಳು ಮತ್ತು ಅವರ ಪವಿತ್ರ ಪುಸ್ತಕವಾದ ತಾರ್ತಮ್ ಸಾಗರ್ ಅನ್ನು ಆಧರಿಸಿದೆ. ಮತ್ತು ಪ್ರಣಾಮಿ ಪಂಥವು ಕಬೀರಪಂಥಿ, ದಾದುಪಂಥಿಗಳು ಮತ್ತು ಸಿಖ್ಖರಂತೆಯೇ ಸಂತ ಪರಂಪರೆಗೆ ಸೇರಿದೆ. ಆದ್ದರಿಂದ ಪ್ರಣಾಮಿ ಪಂಥ ಹಿಂದೂ ವೇಷದಲ್ಲಿರುವ ಇಸ್ಲಾಮಿಕ್ ಸಂಘಟನೆ ಎಂದು ಹೇಳಿರುವ ಬಲಪಂಥೀಯ ಬರಹಗಾರ ದಿವಾಂಗತ ಪ್ರೋ. ಕೆ.ಎಸ್ ನಾರಾಯಣಾಚಾರ್ಯರ ಪ್ರತಿಪಾದನೆ ತಪ್ಪಾಗಿದೆ. 

ಇನ್ನೂ ಭಗತ್ ಸಿಂಗ್ ಮತ್ತು ಇತರ ದೇಶಭಕ್ತರನ್ನು ಗಲ್ಲಿಗೇರಿಸಿದಾಗ, ಗಾಂಧಿ ಅವರನ್ನು ಗಲ್ಲಿಗೇರಿಸದಂತೆ ಮನವಿಗೆ ಸಹಿ ಹಾಕಲು ನಿರಾಕರಿಸಿದರು ಎಂದು ಆರೋಪಿಸಲಾಗಿದೆ. ಈ ಹಿಂದೆ ಇದೇ ಆರೋಪವನ್ನು ಗಾಂಧಿ ಮತ್ತು ನೆಹರು ಇಬ್ಬರ ಮೇಲೂ ಹೊರಿಸಲಾಗಿತ್ತು. ಆದರೆ ಗಾಂಧೀಜಿಯವರು ಭಗತ್ ಸಿಂಗ್ ಆವರ ಮರಣ ದಂಡನೆಯನ್ನು ರದ್ದುಪಡಿಸುವಂತೆ ಕೋರಿ ಅಂದಿನ ವೈಸ್‌ರಾಯ್ ಲಾರ್ಡ್ ಇರ್ವಿನ್ ಅವರಿಗೆ ಪತ್ರ ಬರೆದಿದ್ದರು. 

ಗಾಂಧೀಜಿಯವರು ಪಾಕಿಸ್ತಾನಕ್ಕೆ 55 ಕೋಟಿ ಕೊಡಲು ಉಪವಾಸ ಸತ್ಯಗ್ರಹ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಲಾಗಿದೆ ಆದರೆ ಸತ್ಯವೇನೆಂದರೆ ಆಸ್ತಿ ಮತ್ತು ಹೊಣೆಗಾರಿಕೆಗಳ ವಿಭಜನೆಯ ನಿಯಮಗಳ ಅಡಿಯಲ್ಲಿ ಪಾಕಿಸ್ತಾನಕ್ಕೆ ಪಾವತಿಸಬೇಕಾದ ಬಾಕಿಯ ಎರಡನೇ ಕಂತಿಗೆ 55 ಕೋಟಿ ರೂ.ಗಳನ್ನು ವಿಭಜನೆಯ ನಂತರ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಪಾವತಿಸಬೇಕಾದ 75 ಕೋಟಿಯಲ್ಲಿ ಮೊದಲ ಕಂತಿನ ರೂ. 20 ಕೋಟಿಯನ್ನು ಭಾರತ ಸರ್ಕಾರ ಬಿಡುಗಡೆ ಮಾಡಿತು. ಆದರೆ ಎರಡನೇ ಕಂತನ್ನು ಪಾವತಿಸುವ ಮೊದಲು ಪಾಕಿಸ್ತಾನಿ ಸೇನೆಯ ರಹಸ್ಯ ಬೆಂಬಲದೊಂದಿಗೆ ಸ್ವಯಂ-ಘೋಷಿತ ವಿಮೋಚಕರಿಂದ ಕಾಶ್ಮೀರದ ಆಕ್ರಮಣವು ನಡೆಯಿತು. ಭಾರತ ಸರ್ಕಾರ ಅದನ್ನು ತಡೆಹಿಡಿಯಲು ನಿರ್ಧರಿಸಿತು. ಲಾರ್ಡ್ ಮೌಂಟ್ ಬ್ಯಾಟನ್ ಇದು ಪರಸ್ಪರ ಒಪ್ಪಿದ ಷರತ್ತುಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟರು ಮತ್ತು ಅವರು ಅದನ್ನು ಗಾಂಧೀಜಿಯವರ ಗಮನಕ್ಕೆ ತಂದರು. ಗಾಂಧೀಜಿಯವರು ವೈಸರಾಯ್ ಅವರ ದೃಷ್ಟಿಕೋನವನ್ನು ತಕ್ಷಣವೇ ಒಪ್ಪಿದರು. ಆದಾಗ್ಯೂ, ಈ ವಿಷಯದಲ್ಲಿ ಅವರ ನಿಲುವನ್ನು ಅವರು ಕೈಗೊಂಡ ಉಪವಾಸದೊಂದಿಗೆ ಜೋಡಿಸುವುದು, ಉದ್ದೇಶಪೂರ್ವಕ ಮಿಶ್ರಣ ಮತ್ತು ಸಮಕಾಲೀನ ಇತಿಹಾಸದ ಸತ್ಯಗಳನ್ನು ವಿರೂಪಗೊಳಿಸುವುದಾಗಿದೆ.

ಗಾಂಧೀಜಿ ಪಾಕಿಸ್ತಾನಕ್ಕೆ 55 ಕೋಟಿ ಕೊಡಲು ಉಪವಾಸ ಸತ್ಯಗ್ರಹ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಯಿಸಿರುವ ಡಾ.ಸುಶೀಲ ನಾಯರ್ ಅವರು ತಮ್ಮ ಪ್ರಬಂಧವೊಂದರಲ್ಲಿ  “ಭಾರತ ಸರ್ಕಾರದ ಮೇಲೆ ನೈತಿಕ ಒತ್ತಡವನ್ನು ಪಶ್ಚಾತ್ತಾಪ ಪಡುವಂತೆ ಮಾಡಲು ಗಾಂಧೀಜಿ ಉಪವಾಸ ಮಾಡಿದ್ದರ ಬಗ್ಗೆ ಹೇಳಿದ್ದಾರೆ. ಜೊತೆಗೆ 55 ಕೋಟಿ ಕೊಡುವ ನಿರ್ಧಾರ ಗಾಂಧೀಜಿ ನೀಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನು ಓದಿ: Fact Check: ಗಾಂಧಿ ಮತ್ತು ನೆಹರು ತೋರಿದ ನಿಷ್ಕ್ರೀಯತೆಯು ಭಗತ್ ಸಿಂಗ್ ಅವರ ಸಾವಿಗೆ ಕಾರಣವಾಯಿತು ಎಂಬುದು ಸುಳ್ಳು


ವಿಡಿಯೋ ನೋಡಿ: ಗಾಂಧೀಜಿಯವರು ಬ್ರಿಟೀಷರಿಂದ ತಿಂಗಳಿಗೆ 100 ರೂ. ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *