Fact Check: ಪಾಕಿಸ್ತಾನದಲ್ಲಿ ಕೇವಲ 20 ಹಿಂದೂ ದೇವಾಲಯಗಳು ಉಳಿದಿವೆ ಎಂಬುದು ಸುಳ್ಳು

ಭಾರತದಲ್ಲಿ ಹಿಂದು ಮುಸ್ಲಿಂ ಚರ್ಚೆ ಎದುರಾದಾಗಲೆಲ್ಲ ಪಾಕಿಸ್ತಾನವನ್ನು ಎಳೆದು ತರುವುದು ಸಾಮಾನ್ಯ ಸಂಗತಿಯಾಗಿದೆ. ದೇಶದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಪಾಕಿಸ್ತಾನದ ಜೊತೆಗೆ ಹೋಲಿಕೆ ಮಾಡಿಕೊಂಡು ಹೆಮ್ಮೆ ಪಡುವುದು ಭಾರತೀಯರ ಅಭ್ಯಾಸಗಳಲ್ಲೊಂದು. ಅಭಿವೃದ್ಧಿಯ ವಿಷಯದಲ್ಲಿಯೂ ಅಷ್ಟೇ ಪಾಕಿಸ್ತಾನಕ್ಕಿಂತ ನಾವು ಮುಂದೆ ಇದ್ದೇವೆ ಎಂದು ಹೆಮ್ಮೆ ಪಡುವುದರ ಜೊತೆಗೆ ತಮಗೆ ಆಗದವರನ್ನು ಪಾಕಿಸ್ತಾನಿ ಎನ್ನುವುದು ಅಥವಾ ಪಾಕಿಸ್ತಾನಕ್ಕೆ ಕಳಿಸಬೇಕು ಎಂದು ಬಳಸುತ್ತಿರುತ್ತೇವೆ.

ಇಷ್ಟಲ್ಲದೇ ಈಗ ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ದ ಸೇಡು ತಿರಿಸಿಕೊಳ್ಳಲು ಕೆಲವು ಬಲಪಂಥೀಯ ಮೂಲಭೂತವಾದಿಗಳು ಭಾರತೀಯ ಮುಸ್ಲೀಮರನ್ನು ತೆಗಳುವ, ಹಲ್ಲೆ ನಡೆಸುವ ಪರಿಪಾಟಲು ಶುರುಮಾಡಿದ್ದಾರೆ. ಇದರ ಭಾಗವಾಗಿ ಈಗ, “ಪಾಕಿಸ್ತಾನದಲ್ಲಿ 1947ರಲ್ಲಿ 4580 ದೇವಾಲಯಗಳಿದ್ದವು, ಪ್ರಸ್ತುತ 2024ರಲ್ಲಿ ಕೇವಲ 20 ದೇವಾಲಯಗಳಿವೆ. ಭಾರತದಲ್ಲಿ 1947ರಲ್ಲಿ 88 ಮಸೀದಿಗಳು ಇದ್ದವು, ಈಗ 2024ರಲ್ಲಿ 6 ಲಕ್ಷ ಮಸೀದಿಗಳು ಇವೆ.” ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಫ್ಯಾಕ್ಟ್‌ಚೆಕ್: ಈ ಅಂಕಿ ಅಂಶಗಳಿಗೆ ಯಾವುದೇ ಆಧಾರಗಳಿಲ್ಲ. ಸ್ವಾತಂತ್ರಪೂರ್ವದಲ್ಲಿ ಪಾಕಿಸ್ತಾನದಲ್ಲಿದ್ದ ದೇವಾಲಯಗಳ ಕುರಿತು ಯಾವುದೇ ಸಮಿಕ್ಷೆಗಳು ನಡೆದಿಲ್ಲ. ಪಾಕಿಸ್ತಾನದ ಪ್ರತೀ ಜಿಲ್ಲೆಯಲ್ಲೂ ದೇವಾಲಯಗಳಿದ್ದು ಕರಾಚಿ ಒಂದರಲ್ಲೆ 30ಕ್ಕೂ ಹೆಚ್ಚು ದೇವಾಲಯಗಳಿವೆ ಎಂದು ವಿಕಿಪಿಡಿಯಾದಲ್ಲಿ ನೋಡಬಹುದು. ಆದರೆ ಭಾರತ-ಪಾಕಿಸ್ತಾನ ಇಬ್ಬಾಗದ ನಂತರ ದೇವಸ್ಥಾನಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿವೆ. ಮತ್ತು ಕೆಲವು ಮೂಲಭೂತವಾದಿ ಮುಸ್ಲೀಮರು ಅಲ್ಲಿನ ಬಹುತೇಕ ದೇವಾಲಯಗಳನ್ನು ಹಾಳು ಮಾಡುವ, ದೇವರುಗಳ ವಿಗ್ರಹಗಳಿಗೆ ಹಾನಿ ಮಾಡುವ ದುಷ್ಕ್ರುತ್ಯಗಳು ಎಸಗಿದ್ದಾರೆ. ಆಲ್ ಪಾಕಿಸ್ತಾನ್ ಹಿಂದೂ ರೈಟ್ಸ್ ಮೂವ್‌ಮೆಂಟ್‌ನ ಸಮೀಕ್ಷೆಯ ಪ್ರಕಾರ, “1947 ರಲ್ಲಿ ಭಾರತ ಮತ್ತು ಪಾಕಿಸ್ತಾನ ಬೇರ್ಪಟ್ಟಾಗ, ಪಾಕಿಸ್ತಾನದ ಭಾಗದಲ್ಲಿ 428 ದೇವಾಲಯಗಳಿದ್ದವು. ಆದರೆ 1990 ರ ನಂತರ, ಈ 408 ದೇವಾಲಯಗಳನ್ನು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಕಚೇರಿಗಳು, ಸರ್ಕಾರಿ ಶಾಲೆಗಳು ಅಥವಾ ಮದರಸಾಗಳಾಗಿ ಪರಿವರ್ತಿಸಲಾಯಿತು. ಈ ಸಮೀಕ್ಷೆಯ ಪ್ರಕಾರ, 1.35 ಲಕ್ಷ ಎಕರೆ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳ ಭೂಮಿಯನ್ನು ಸರ್ಕಾರವು ಇವಾಕ್ಯೂ ಪ್ರಾಪರ್ಟಿ ಟ್ರಸ್ಟ್ ಬೋರ್ಡ್‌ಗೆ ಗುತ್ತಿಗೆಗೆ ನೀಡಿದೆ. ಅವುಗಳಲ್ಲಿ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಧಾರ್ಮಿಕ ಸ್ಥಳಗಳ ಭೂಮಿ ಇತ್ತು” ಎಂದಿದೆ. ಆದರೆ ತನ್ನ ಸಮೀಕ್ಷೆಯಲ್ಲಿ ಕೇವಲ 20 ದೇವಸ್ಥಾನಗಳು ಮಾತ್ರ ಪೂಜೆಗೆ ಒಳಪಡುತ್ತಿವೆ ಎಂದಿರುವುದು ಅರ್ಧ ಸತ್ಯದಿಂದ ಕೂಡಿದ ಸಂಗತಿಯಾಗಿದೆ. 

ಪಾಕಿಸ್ತಾನದಲ್ಲಿ ಹಿಂದೆ ಸಿಂದೂ ಪ್ರಾಂತ್ಯದಲ್ಲಿ ಅತಿ ಹೆಚ್ಚು ಹಿಂದು ಮತ್ತು ಸಿಖ್ಖರು ನೆಲೆಸಿದ್ದರು. ಈಗ ಸಧ್ಯ ಉಮರ್ ಕೋಟ್‌ ಜಿಲ್ಲೆಯಲ್ಲಿ ಹೆಚ್ಚಿನ ಹಿಂದುಗಳು ನೆಲೆಗೊಂಡಿದ್ದಾರೆ. ಕೇವಲ 2.14% ಇರುವ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿರುತ್ತವೆ. ಪಾಕಿಸ್ತಾನದ ಸಂವಿಧಾನದಲ್ಲಿ ಸಹ ಯಾವುದೇ ವ್ಯಕ್ತಿಯ ಭಾಷೆ, ಧರ್ಮ, ಜಾತಿಯ ಆಧಾರದ ಮೇಲೆ ದೌರ್ಜನ್ಯ ಎಸಗುವಂತಿಲ್ಲ ಎಂಬ ಕಾನೂನು ಇದೆ. ಆದರೆ ಇಸ್ಲಾಂ ಅನ್ನು ರಾಷ್ಟ್ರೀಯ ಧರ್ಮವನ್ನಾಗಿ ಘೋಷಿಸಿರುವ ಪರಿಣಾಮ ಇಸ್ಲಾಂ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಪಾಕಿಸ್ತಾನದ ಬಹುತೇಕ ಹಿಂದುಗಳು ಸೂಫಿ ಸಂತರನ್ನು ಆರಾಧಿಸುತ್ತಾರೆ. ಪಾಕಿಸ್ತಾನದಲ್ಲಿರುವ ಪ್ರಮುಖ ಹಿಂದೂ ದೇವಾಲಯಗಳೆಂದರೆ ಶ್ರೀ ಹಿಂಗ್ಲಾಜ್ ಮಾತಾ ದೇವಸ್ಥಾನ, ಇದರ ವಾರ್ಷಿಕ ಹಿಂಗ್ಲಾಜ್ ಯಾತ್ರೆಯು ಪಾಕಿಸ್ತಾನದ ಅತಿದೊಡ್ಡ ಹಿಂದೂ ತೀರ್ಥಯಾತ್ರೆಯಾಗಿದೆ, ಇದರಲ್ಲಿ 2, 50,000 ಕ್ಕೂ ಹೆಚ್ಚು ಯಾತ್ರಿಕರು ಭಾಗವಹಿಸುತ್ತಾರೆ, ಶ್ರೀ ರಾಮ್‌ದೇವ್ ಪಿರ್ ದೇವಸ್ಥಾನ (ಈ ದೇವಾಲಯದಲ್ಲಿ ವಾರ್ಷಿಕ ರಾಮದೇವಪಿರ್ ಮೇಳ ಪಾಕಿಸ್ತಾನದಲ್ಲಿ ಎರಡನೇ ಅತಿ ದೊಡ್ಡ ಹಿಂದೂ ತೀರ್ಥಯಾತ್ರೆ ಜರುಗುತ್ತದೆ). ಉಮರ್ಕೋಟ್ ಶಿವ ಮಂದಿರ (ಪಾಕಿಸ್ತಾನದ ಅತಿದೊಡ್ಡ ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿರುವ ವಾರ್ಷಿಕ ಶಿವರಾತ್ರಿ ಹಬ್ಬಕ್ಕೆ ಹೆಸರುವಾಸಿಯಾಗಿದೆ, ಮತ್ತು ಚುರಿಯೊ ಜಬಲ್ ದುರ್ಗಾ ಮಾತಾ ದೇವಸ್ಥಾನ (200,000 ಯಾತ್ರಿಕರು ಪಾಲ್ಗೊಳ್ಳುವ ಶಿವರಾತ್ರಿ ಆಚರಣೆಗಳಿಗೆ ಪ್ರಸಿದ್ಧವಾಗಿದೆ).

ಇನ್ನೂ ಭಾರತದಲ್ಲಿ ಸ್ವಾತಂತ್ರ್ಯ ಬರುವ ಮೊದಲು ಕೇವಲ 80 ಮಸೀದಿಗಳಿದ್ದವು ಎಂಬುದಕ್ಕೆ ಯಾವುದೇ ಸಮಿಕ್ಷೆಯ ಆಧಾರಗಳಿಲ್ಲ. ಮತ್ತು ಪ್ರಸ್ತುತ ಭಾರತದಲ್ಲಿ 3 ಲಕ್ಷಕ್ಕಿಂತಲೂ ಹೆಚ್ಚು ಮಸೀದಿಗಳಿವೇ ಹೊರತು 6 ಲಕ್ಷಗಳಲ್ಲ.

ಆದ್ದರಿಂದ ಹರಿದಾಡುತ್ತಿರುವ ಪೋಸ್ಟರ್‌ನಲ್ಲಿರುವ ಮಾಹಿತಿ ತಪ್ಪಾಗಿದೆ. ಮತ್ತು ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತಿಯಾಗಿ ಭಾರತೀಯ ಮುಸಲ್ಮಾನರ ಮೇಲೆ ಸೇಡು ತಿರಿಸಿಕೊಳ್ಳುವ ಬಲಪಂಥೀಯ, ಹಿಂದು ಸಂಘಟನೆಗಳ ಯೋಚನೆ ಬಾಲಿಷವಾಗಿದೆ. ಏಕೆಂದರೆ ಇದರಿಂದ ಹಿಂದುಗಳು ಅಲ್ವಸಂಖ್ಯಾತರಾಗಿರುವ ಇತರ ರಾಷ್ಟ್ರಗಳಲ್ಲಿ ಹಿಂದುಗಳ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ಅವರ ಶೋಷಣೆಗೆ ನಾವೇ ಪ್ರಚೋದನೆ ನೀಡಿದಂತಾಗುತ್ತದೆ. ಆದ್ದರಿಂದ ಭಾರತದಲ್ಲಿ ಹಿಂದು-ಮುಸ್ಲಿಂ ಧರ್ಮದ ಜನರ ನಡುವಿರುವ ಸೇಡು, ಶಂಕೆಗಳು ದೂರವಾಗಿ ಪರಸ್ಪರ ಸೌಹಾರ್ದದತೆಯಿಂದ ಬಾಳುವ ಅಗತ್ಯವಿದೆ.


ಇದನ್ನು ಓದಿ: ಕಾಂಗ್ರೆಸ್ ಸರ್ಕಾರದ 32 ಸಾವಿರ ಕೋಟಿ ರೂ ಸಾಲವನ್ನು 32 ಲಕ್ಷ ಕೋಟಿ ರೂ ಎಂದು ತಿರುಚಿದ ಬಿಜೆಪಿ


ವಿಡಿಯೋ ನೋಡಿ: ದೇವಸ್ಥಾನದ ಹಣ ವಕ್ಫ್, ಕ್ರಿಶ್ಚಿಯನ್‌ಗೆ ದಾನ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಸುವರ್ಣ ನ್ಯೂಸ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *