ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 32 ಲಕ್ಷ ಕೋಟಿ ಸಾಲ ಮಾಡಿದೆ ಎಂದು ಬಿಜೆಪಿ ಸರ್ವಜ್ಞನಗರ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ಇನ್ಸ್ಟಾಗ್ರಾಮ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ದಿ ಫೈಲ್ ವೆಬ್‌ಸೈಟ್‌ನ ವರದಿಯ ಸ್ಕ್ರೀನ್ ಶಾಟ್ ಬಳಸಿರುವುದು ಕಂಡುಬಂದಿದೆ. ಅದರ ಆಧಾರದಲ್ಲಿ ಹುಡುಕಿದಾಗ ದಿ ಫೈಲ್ ನಲ್ಲಿ ಫೆಬ್ರವರಿ 14ರಂದು ಪ್ರಕಟವಾದ ನಿರಂತರ ಏರಿಕೆ: ಎಂಟೇ ತಿಂಗಳಲ್ಲಿ 32,289.99 ಕೋಟಿ ರು ಸಾರ್ವಜನಿಕ ಸಾಲ ಎಂಬ ವರದಿ ದೊರಕಿದೆ. ಅದರಲ್ಲಿ 2023ರ ಫೆಬ್ರವರಿ ಅಂತ್ಯಕ್ಕೆ ರಾಜ್ಯ ಸರ್ಕಾರದ ಸಾಲವು 262 ಕೋಟಿ ರೂ ಇತ್ತು. 2024ರ ಡಿಸೆಂಬರ್ ಅಂತ್ಯಕ್ಕೆ 32,289.99 ಕೋಟಿ ರೂ ಗೆ ತಲುಪಿದೆ ಎಂದು ಬರೆಯಲಾಗಿದೆ. ಅದರಲ್ಲಿಯೂ ಸಹ ಇಸವಿಯನ್ನು 2023ರ ಬದಲಿಗೆ 2024ಕ್ಕೆ ಎಂದು ತಪ್ಪಾಗಿ ಬರೆಯಲಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ 32,289 ಕೋಟಿ ರೂಗಳನ್ನು ಬಿಜೆಪಿಯು 32 ಲಕ್ಷ ಕೋಟಿ ಎಂದು ತಿರುಚಿದೆ. ಆ ಮೂಲಕ ಜನರನ್ನು ದಿಕ್ಕು ತಪ್ಪಿಸಿದೆ.
ರಾಜ್ಯದ ಒಟ್ಟು ಸಾಲ ಎಷ್ಟು?
ಆರ್‌ಬಿಐ ಪ್ರಕಟಿಸಿದ ಅಧಿಕೃತ ವರದಿಯ ಪ್ರಕಾರ ರಾಜ್ಯದ ಸಾಲ ಇಂತಿದೆ.
2013ರಲ್ಲಿ ಜಗದೀಶ್ ಶೆಟ್ದರ್ ಮುಖ್ಯಮಂತ್ರಿ ಆಗಿದ್ದ ಅವಧಿಯ ಕೊನೆಗೆ ಕರ್ನಾಟಕ ರಾಜ್ಯದ ಮೇಲಿದ್ದ ಒಟ್ಟು ಸಾಲ – 1,12,666 ಕೋಟಿ ರೂಪಾಯಿಗಳು
2018ರಲ್ಲಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಕೊನೆಯಲ್ಲಿ ಕರ್ನಾಟಕ ರಾಜ್ಯದ ಮೇಲಿದ್ದ ಒಟ್ಟು ಸಾಲ – 2,45,950 ಕೋಟಿ ರೂಪಾಯಿಗಳು.
ಅಂದರೆ ಸಿದ್ದರಾಮಯ್ಯನವರು 5 ವರ್ಷದಲ್ಲಿ ರಾಜ್ಯದ ಯೋಜನೆಗಳಿಗಾಗಿ ತಮ್ಮ ಅವಧಿಯಲ್ಲಿ 1,33,284 ಕೋಟಿ ರೂ ಸಾಲ ಮಾಡಿದ್ದರು.
2023ರಲ್ಲಿ ಬಸವರಾಜ ಬೊಮ್ಮಾಯಿಯವರು ಅಧಿಕಾರದಿಂದ ಕೆಳಗಿಳಿದ ಸಂದರ್ಭದಲ್ಲಿ ರಾಜ್ಯದ ಮೇಲಿದ್ದ ಒಟ್ಟು ಸಾಲ 5,35,156.7 ಕೋಟಿ ರೂಪಾಯಿ
ಅಂದರೆ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ಒಟ್ಟು 5 ವರ್ಷದಲ್ಲಿ (2018-23) ಮಾಡಿದ ಸಾಲ 2,48,828 ಕೋಟಿ ರೂ.
2024 ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಸಾಲ ಮಾಡುವುದಾಗಿ ಘೋಷಿಸಿರುವ ಮೊತ್ತ 1,05,246 ಕೋಟಿ ರೂಗಳು. ಅಲ್ಲಿಗೆ ರಾಜ್ಯದ ಒಟ್ಟು ಸಾಲ 6.4 ಲಕ್ಷ ಕೋಟಿಗಳಾಷ್ಟಾಗುತ್ತದೆ.
ಹಾಗಾಗಿ ರಾಜ್ಯದ ಮೇಲೆ 32 ಲಕ್ಷ ಕೋಟಿ ಸಾಲವಿದೆ ಎಂಬುದು ಸುಳ್ಳು.
(ಕೊನೆಯ ಕಾಲಂ ಕರ್ನಾಟಕದ ಸಾಲದ ಕುರಿತಾಗಿದೆ)
ಇದನ್ನೂ ಓದಿ; Fact Check: ದೇವಸ್ಥಾನದ ಹಣ ವಕ್ಫ್, ಕ್ರಿಶ್ಚಿಯನ್‌ಗೆ ದಾನ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಸುವರ್ಣ ನ್ಯೂಸ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.