ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2024ರ ಬಜೆಟ್ ಕುರಿತಾಗಿ ಈಗ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಿಜೆಪಿ ನಾಯಕರು ಈ ಬಾರಿಯ ಬಜೆಟ್ ಅತ್ಯಂತ ಕೆಟ್ಟ ಬಜೆಟ್, ಇದರಿಂದ ರಾಜ್ಯದ ಅಭಿವೃದ್ಧಿ ಶೂನ್ಯ ಎಂದು ಆರೋಪಿಸುತ್ತಿದ್ದರೆ, ಇನ್ನೂ ಹಲವರು ಎಲ್ಲಾ ಕ್ಷೇತ್ರಗಳಿಗೂ ಬಜೆಟ್ ಹಣವನ್ನು ಸಮರ್ಪಕವಾಗಿ ಬಳಸಿದ್ದಾರೆ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಆದರೆ “ದೇವಸ್ಥಾನದ 500 ಕೋಟಿಯಲ್ಲಿ 330 ಕೋಟಿ ರೂ ವಕ್ಫ್, ಕ್ರಿಶ್ಚಿಯನ್‌ಗೆ ದಾನ, ಬಜೆಟ್ ವಿರುದ್ಡ ಆಕ್ರೋಶ! ಎಂಬ ತಲೆಬರಹದೊಂದಿಗೆ ಕನ್ನಡದ ಸುವರ್ಣ ನ್ಯೂಸ್ ವರದಿ ಮಾಡಿದ್ದು ಕರ್ನಾಟಕದ ದೇವಸ್ಥಾನದ ಆದಾಯಗಳನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಅಭಿವೃದ್ದಿಗೆ ಬಳಸಲಾಗುತ್ತಿದೆ ಎಂದು ದೂರಿದ್ದಾರೆ.
ಫ್ಯಾಕ್ಟ್‌ಚೆಕ್: ಕರ್ನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ ಅಥವಾ ಮುಜರಾಯಿ ಇಲಾಖೆಯ ಅಡಿಯಲ್ಲಿ ಸುಮಾರು 34,563 ದೇವಾಲಯಗಳಿವೆ. ಅವುಗಳ ಆದಾಯದ ಮೇಲೆ ಕೆಟಗರಿ ‘ಎ’,’ಬಿ’,’ಸಿ’ ಎಂದು ಗುರುತಿಸಲಾಗುತ್ತದೆ.
25 ಲಕ್ಷ ರೂ.ಗಳಿಗಿಂತ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿರುವ 205 ದೇವಾಲಯಗಳನ್ನು ಕೆಟಗರಿ ‘ಎ’ ಅಡಿಯಲ್ಲಿ ಬರುತ್ತವೆ ಮತ್ತು 5 ಲಕ್ಷದಿಂದ 25 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವ 139 ದೇವಾಲಯಗಳು ಕೆಟಗರಿ ’ಬಿ’ ಅಡಿಯಲ್ಲಿ ಬರುತ್ತವೆ. ಇವುಗಳಲ್ಲಿ ಎ ಕೆಟಗರಿ ದೇವಾಲಯಗಳು ಕೇವಲ 10% ಹಣವನ್ನು ಮಾತ್ರ ಸರ್ಕಾರಕ್ಕೆ ಕಟ್ಟುತ್ತವೆ ಮತ್ತು ‘ಬಿ’ ಕೆಟಗರಿ ದೇವಾಲಯಗಳು 5% ಹಣವನ್ನು ಮಾತ್ರ ಸರ್ಕಾರಕ್ಕೆ ಕಟ್ಟುತ್ತವೆ, ಉಳಿದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ತಾವೇ ಬಳಸಿಕೊಳ್ಳುತ್ತವೆ.
ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಸುಮರು 34,000ಕ್ಕೂ ಹೆಚ್ಚು ದೇವಾಲಯಗಳು ಕೆಟಗರಿ ’ಸಿ’ ಅಡಿಯಲ್ಲಿ ಬರುತ್ತವೆ. ಈ ದೇವಾಲಯಗಳು ಯಾವುದೇ ಹಣವನ್ನು ಸರ್ಕಾರಕ್ಕೆ ಕಟ್ಟುತ್ತಿಲ್ಲ. ಅಲ್ಲಿ ಕಡಿಮೆ ಹಣ ಸಂಗ್ರಹವಾಗುತ್ತಿದ್ದು ಅದನ್ನು ತಮ್ಮ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುತ್ತಿವೆ. ಜೊತೆಗೆ ಸರ್ಕಾರ ಸಹ ಈ ದೇವಾಲಯಗಳಿಗೆ ಅನುದಾನ ನೀಡುತ್ತಿದೆ.
ಈ ಕುರಿತು ಹಿಂದಿನ ಬೊಮ್ಮಾಯಿ ಸರ್ಕಾರದಲ್ಲಿ ಮುಜರಾಯಿ ಇಲಾಖೆ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿಯವರು ಸ್ಪಷ್ಟನೆ ನೀಡಿರುವುದನ್ನು ಇಲ್ಲಿ ನೋಡಬಹುದು.
ಅಂದರೆ ಎ ಮತ್ತು ಬಿ ಈ ಎರಡೂ ಕೆಟಗರಿಯ ಒಟ್ಟು 344 ದೇವಾಲಯಗಳು ಮಾತ್ರ ಸರ್ಕಾರಕ್ಕೆ ಕ್ರಮವಾಗಿ 10% ಮತ್ತು 5% ಹಣ ಪಾವತಿಸುತ್ತಿವೆ. ಆ ಹಣವನ್ನು ಸರ್ಕಾರ ಬೇರೆ ಧರ್ಮದ ಯಾವುದೇ ದೇವಾಲಯಗಳ ಅಭಿವೃದ್ಧಿಗೆ ಒಂದು ರೂ ಸಹ ಬಳಸುವುದಿಲ್ಲ. ಇನ್ನು ದೇವಾಲಯಗಳಲ್ಲಿ ಉಳಿದ ಹಣವನ್ನು ಸಾಮಾನ್ಯ ಸಂಗ್ರಹಣಾ ನಿಧಿ ಎಂದು ದೇವಾಲಯದ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ. ಆಯುಕ್ತರು ಈ ಖಾತೆಯನ್ನು ನಿರ್ವಹಿಸುತ್ತಾರೆ. ಈ ಹಣವನ್ನು ಉಪಯೋಗಿಸುವಲ್ಲಿಯೂ ಕಾಯಿದೆಯಲ್ಲಿರುವ ಸೆಕ್ಷನ್ 17, ನಿಯಮ 18 ಹಾಗೂ 19 ನಿಯಮಾವಳಿಗಳೇ ಅನ್ವಯವಾಗುತ್ತದೆ.
ಆದ್ದರಿಂದ ದೇವಸ್ಥಾನದ ಹಣವನ್ನು ಬೇರೆ ಯಾವ ಧರ್ಮದವರ ಅಭಿವೃದ್ಧಿ ಕಾರ್ಯಗಳಿಗೂ ಬಳಸಲು ಬರುವುದಿಲ್ಲ. ತಾವು ಹಂಚಿಕೊಂಡಿರುವ ಸುಳ್ಳನ್ನು ಜನರು ಟೀಕಸಿದ ಬಳಿಕ ಸುವರ್ಣ ನ್ಯೂಸ್ ತನ್ನ ವರದಿಯನ್ನು ಪೇಸ್‌ಬುಕ್ ಖಾತೆಯಿಂದ ತೆಗೆದು ಹಾಕಿದೆ ಮತ್ತು ಸುದ್ದಿಯ ತಲೆಬರಹವನ್ನು”ಅಲ್ಪಸಂಖ್ಯಾತರ ಒಲೈಸಲು ಪ್ರಯತ್ನ, ಸಿದ್ದರಾಮಯ್ಯ ಬಜೆಟ್ ವಿರುದ್ಧ ಆಕ್ರೋಶ!” ಎಂದು ಬದಲಾಯಿಸಿದೆ. ಈ ಸುಳ್ಳನ್ನು ಮೊದಲು ಹಂಚಿಕೊಂಡವರು CNN News 18 ಸುದ್ದಿ ವಾಹಿನಿಯ ಸಂಪಾದಕರಾದ ರಾಹುಲ್ ಶಿವಶಂಕರ್ ಅವರು, ನಂತರ ಸಂಸದ ತೇಜಸ್ವಿ ಸೂರ್ಯ ಅವರು ರಾಹುಲ್ ಶಿವಶಂಕರ್ ಅವರ ಟ್ವೀಟ್ ಅನ್ನು ಕೇಂದ್ರವಾಗಿರಿಸಿಕೊಂಡು ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ರಾಹುಲ್ ಶಿವಶಂಕರ್ ಅವರು ತಮ್ಮ ಸುದ್ದಿ ವಾಹಿನಿಯಲ್ಲಿ ಕೂಡ ಈ ಕುರಿತು ಡಿಬೆಟ್ ನಡೆಸಿ ರಾಜ್ಯ ಸರ್ಕಾರದ ಬಜೆಟ್ ವಿಚಾರವಾಗಿ “ಹಿಂದು ದೇವಸ್ಥಾನಗಳ ಹಣವನ್ನು ಮುಸ್ಲಿಂ, ಕ್ರಿಶ್ಚಿಯನ್ನರಿಗೆ ನೀಡಲಾಗುತ್ತಿದೆ” ಎಂದು ತಪ್ಪು ಮಾಹಿತಿಗಳನ್ನು ಬಿತ್ತರಿಸಿದ್ದಾರೆ.
ಈ ರೀತಿ ಧರ್ಮಾಧಾರಿತ ತಪ್ಪು ಮಾಹಿತಿ ಬಿತ್ತರಿಸುವುದರಿಂದ ಕರ್ನಾಟಕ ಸೇರಿದಂತೆ ದೇಶದ ಕೋಮು ಸೌಹಾರ್ಧಕ್ಕೆ ದಕ್ಕೆ ಉಂಟಾಗಿ ಧರ್ಮ-ಧರ್ಮಗಳ ನಡುವೆ ದ್ವೇಷ ಬೆಳೆಯಲು ಕಾರಣವಾಗುತ್ತದೆ. ಆದ್ದರಿಂದ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಬಿತ್ತರಿಸುವವರಿಗೆ ಕಠೀಣ ಕ್ರಮ ತೆಗೆದುಕೊಳ್ಳುವಂತೆ ನಮ್ಮ ಕಾನೂನು ವ್ಯವಸ್ಥೆಯೂ ಬಲಗೊಳ್ಳಬೇಕಿದೆ.
ಇದನ್ನು ಓದಿ: Fact Check: ಶಕ್ತಿ ಯೋಜನೆ ಬಂದ್ ಎಂದು ಸುಳ್ಳು ಹರಡಿದ ಜಸ್ಟ್ ಕನ್ನಡ ಸುದ್ದಿ ಮಾಧ್ಯಮ
ವಿಡಿಯೋ ನೋಡಿ: ಫೆ. 14 ಪ್ರೇಮಿಗಳ ದಿನದಂದು ಭಗತ್ ಸಿಂಗ್ ಮತ್ತು ಸಂಗಡಿಗರನ್ನು ಗಲ್ಲಿಗೇರಿಸಲಾಯಿತು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.