Fact Check: ರೈತ ಹೋರಾಟದಲ್ಲಿ ಮುಸ್ಲಿಮರು ಎಂದು ಸಿದ್ದು ಮೂಸೆವಾಲಾ ಹತ್ಯೆ ಸಂದರ್ಭದ ವಿಡಿಯೋ ಹಂಚಿಕೆ

ರೈತ ಹೋರಾಟ

ಕನಿಷ್ಠ ಬೆಂಬಲ ಬೆಲೆ (MSP), ಲಖಿಂಪುರಿ ಖೇರಿ ಹಿಂಸಾಚಾರದಲ್ಲಿ ನ್ಯಾಯ, ಮತ್ತು ರೈತರ ಸಾಲ ಮನ್ನಾ ಖಾತ್ರಿಪಡಿಸುವ ಕಾನೂನಿಗೆ ಒತ್ತಾಯಿಸಿ ದೆಹಲಿ ಚಲೋ ಪ್ರತಿಭಟನೆಯ ಭಾಗವಾಗಿ 200 ಕ್ಕೂ ಹೆಚ್ಚು ಸಂಘಟನೆಗಳ ರೈತರು ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಪ್ರಕಾರ, ರೈತರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ಎಂಎಸ್‌ಪಿಗಾಗಿ ಐದು ವರ್ಷಗಳ ಯೋಜನೆಯನ್ನು ಕೇಂದ್ರವು ಪ್ರಸ್ತಾಪಿಸಿದೆ, ನಂತರ ಪ್ರತಿಭಟನೆಯನ್ನು ಫೆಬ್ರವರಿ 21 ರವರೆಗೆ ತಡೆಹಿಡಿಯಲಾಗಿದೆ.

ಆದರೆ ರೈತರ ಹೋರಾಟವನ್ನು ಜರಿಯುವ ಸಲುವಾಗಿ ಸಾಕಷ್ಟು ಪಿತೂರಿಗಳನ್ನು ನಡೆಸಲಾಗುತ್ತಿದ್ದು ರೈತ ಹೋರಾಟದಲ್ಲಿ ಮದ್ಯ ಹಂಚಲಾಗುತ್ತಿದೆ ಎಂದು ಸಹ ಆರೋಪಿಸಲಾಗಿತ್ತು. ಈಗ, ” ಖಾಲಿಸ್ತಾನಿ ಆಂದೋಲದ ನೈಜತೆ. ರೈತರ ವೇಷದಲ್ಲಿ ಮುಸಲ್ಮಾನರಿದ್ದಾರೆ! ಬಯಲಾದ ಷಡ್ಯಂತ್ರ ನೋಡಿ!” ಎಂಬ ವಿಡಿಯೋವೊಂದನ್ನು ರಾಷ್ಟ್ರಧರ್ಮ ಜಾಗೃತಿ ಎಂಬ ಬಲಪಂಥೀಯ ಖಾತೆಯಿಂದ ಹಂಚಿಕೊಳ್ಳಲಾಗಿದೆ.

 

ಬಿಜೆಪಿ ತೆಲಂಗಾಣ ಪಕ್ಷದ ಸದಸ್ಯ ಸತೀಶ್ ಚಂದ್ರ ಅವರು “ದಿ ರಿಯಾಲಿಟಿ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ

ಫ್ಯಾಕ್ಟ್‌ಚೆಕ್: ಇದು ಪಂಜಾಬಿನ ಖ್ಯಾತ ರ್ಯಾಪರ್(Rapper) ಸಿದ್ದು ಮೂಸೆವಾಲಾ ಹತ್ಯೆ ನಡೆದ ಸಂದರ್ಭದ ವಿಡಿಯೋ ಆಗಿದೆ. ಮೂಸೆವಾಲಾ ಅವರ ಅಂತಿಮ ಯಾತ್ರೆಗೆ, ಸರ್ದಾರಿಯನ್ ಟ್ರಸ್ಟ್ ನಡೆಸಿದ ಪಗಡೆ(ಪೇಟ) ಧರಿಸುವ ತರಬೇತಿ ಶಿಬಿರದಲ್ಲಿ ಮುಸ್ಲಿಂ ಮತ್ತು ಹಿಂದೂಗಳು ಭಾಗವಹಿಸಿ ಪೇಟವನ್ನು ಧರಿಸುವ ವಿಡಿಯೋ ಇದಾಗಿದೆ.

ಸರ್ದಾರಿಯ ಟ್ರಸ್ಟ್‌ ಪಂಜಾಬ್ ಎಂಬ ಖಾತೆಯಿಂದ ಜೂನ್ 10, 2022ರಲ್ಲಿಯೇ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹರಿದಾಡುತ್ತಿರುವ ವಿಡಿಯೋದಲ್ಲಿ ಪಂಜಾಬಿ ಭಾಷೆಯಲ್ಲಿ ಅಕ್ಷರಗಳು ಇರುವುದನ್ನು ನೀವು ಕಾಣಬಹುದು. ಇದನ್ನು ಗೂಗಲ್ ಟ್ರಾನ್ಸ್‌ಲೆಟ್‌ ಮೂಲಕ ಅನುವಾದಿಸಿದಾಗ “ಪಗಡೆ ತರಬೇತಿ ಶಿಬಿರ. ವೀರ್ ಸಿಧು ಮೂಸ್ ವಾಲಾ ಅವರ ಅಂತಿಮ ಪ್ರಾರ್ಥನೆಯಲ್ಲಿ” ಎಂದು ಬರೆಯಲಾಗಿದೆ. ಇನ್ನೂ ಮುಸ್ಲಿಂ ವ್ಯಕ್ತಿಯ ಹಿಂದೆ ಸಿದ್ದು ಮೂಸೆವಾಲಾ ಅವರ ಪೋಟೋ ಇರುವುದನ್ನು ನೀವು ಗಮನಿಸಬಹುದು.

ನಾವು ಹುಡುಕಿದಾಗ ಸರ್ದಾರಿಯನ್ ಟ್ರಸ್ಟ್‌ನ ಫೇಸ್‌ಬುಕ್ ಪುಟದಿಂದ ಸಿಧು ಮೂಸೆವಾಲಾ ಅವರ ಅಭಿಮಾನಿಗಳಿಗೆ ಪಗಡೆ(ಪೇಟ)ಯನ್ನು ಧರಿಸಿ ಅವರ ಅಂತ್ಯಕ್ರಿಯೆಗೆ ಭಾಗವಹಿಸಲು ವಿನಂತಿಸುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

 

ಆದ್ದರಿಂದ ಈ ವಿಡಿಯೋವಿಗೂ ರೈತ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ. ಇಂತಹ ವಿಡಿಯೋಗಳನ್ನು ಜನರ ಮನಸ್ಸಿನಲ್ಲಿ ರೈತ ಹೋರಾಟದ ಕುರಿತು ಕೆಟ್ಟ ಭಾವನೆ ಬೆಳೆಸುವ ಸಲುವಾಗಿ ಅಷ್ಟೇ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: Fact Check: ರೈತ ಹೋರಾಟದಲ್ಲಿ ಮದ್ಯ ಹಂಚಲಾಗುತ್ತಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ರಾಜಸ್ಥಾನದ ಪಡಿತರ ಚೀಲಗಳ ಮೇಲೆ ಮೋದಿ ಫೋಟೋ ಮುದ್ರಿಸಲು 13 ಕೋಟಿ ರೂ ಖರ್ಚು ಮಾಡಿರುವುದು ನಿಜ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *