Fact Check: ತೆಲಂಗಾಣದಲ್ಲಿ ಮುಸ್ಲಿಮರು ಹನುಮಂತನ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ ಎಂಬುದು ಸುಳ್ಳು

ಕಳೆದ ಐದಾರು ವರ್ಷಗಳಿಂದ ಅನೇಕ ಕಡೆ ಹನುಮಂತನ ವಿಗ್ರಹವನ್ನು ಮುಸ್ಲಿಮರು ಹೊಡೆದು ಹಾಕಿದ್ದಾರೆ ಅಥವಾ ಅಪಮಾನ ಎಸಗಿದ್ದಾರೆ ಎಂದು ಸುಳ್ಳು ಹಬ್ಬಿಸಿ ಕೋಮುಗಲಭೆಗೆ ಪ್ರಚೋದನೆ ನೀಡಲಾಗಿತ್ತು. ನಂತರ ಇಂತಹ ಆರೋಪ ಸುಳ್ಳು ಎಂದು ಪತ್ತೆ ಆದ ನಂತರ ಇದರ ಸುದ್ದಿಯನ್ನು ಕೈಬಿಟ್ಟಿದ್ದರು. ಅಂತಹ ಕೆಲವು ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈಗ ಅದೇ ರೀತಿ, “ನಿನ್ನೆ ಕಾಂಗ್ರೆಸ್ ಪಕ್ಷದ ಸಿಎಂ ರೇವಂತ್ ರೆಡ್ಡಿ ಆಯೋಜಿಸಿದ್ದ ಇಫ್ತಾರ್ ಕೂಟದ ನಂತರ ಅಲ್ಲಿನ ಮುಸಲ್ಮಾನ ಸಮಾಜದವರು ಹನುಮಾನ್ ಮೂರ್ತಿ ಧ್ವಂಸ ಮಾಡಿದ್ದಾರೆ. ಪುಕ್ಸಟ್ಟೆಗಾಗಿ ಮಾರಿಕೊಂಡ ನಿಮ್ಮ ಮತದ ಪರಿಣಾಮಗಳನ್ನು ಅನುಭವಿಸಿ! ಚಿಪ್ಪಲಪಲ್ಲಿ ಪ್ರಕೃತಿ ಆಶ್ರಮ, ಕಂದುಕೂರು ಮಂಡಲ, ರಂಗಾರೆಡ್ಡಿ ಜಿಲ್ಲೆ, ತೆಲಂಗಾಣ” ಎಂಬ ಸಂದೇಶದೊಂದಿಗೆ ಒಡೆದು ಹೋದ ಹನುಮಂತನ ಚಿತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್‌: ಈ ಕುರಿತು ಹುಡುಕಿದಾಗ, ವೈರಲ್ ಚಿತ್ರದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಶೀರ್ಷಿಕೆಯಲ್ಲಿ, ಇದನ್ನು ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದ ಘಟನೆ ಎಂದು ವಿವರಿಸಲಾಗಿದೆ. ರಂಗಾರೆಡ್ಡಿ ಜಿಲ್ಲೆಯ ಕಂದುಕೂರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮೊಹಮ್ಮದ್ ಮಕ್ಬೂಲ್ ಜಾನಿ ಅವರನ್ನು ವಿಚಾರಿಸಲಾಗಿ “ಚಿಪ್ಪಲಪಲ್ಲಿ ಗ್ರಾಮದ ಪ್ರಕೃತಿ ಕುಟೀರ ಆಶ್ರಮದಲ್ಲಿ ಹನುಮಾನ್ ವಿಗ್ರಹವನ್ನು ಧ್ವಂಸಗೊಳಿಸಿದ ಬಗ್ಗೆ ಬಜರಂಗದಳದ ಕೆಲವರು ನಮಗೆ ದೂರು ನೀಡಿದ್ದರು. ಕಳೆದ 14 ವರ್ಷಗಳಿಂದ ಈ ಆಶ್ರಮವನ್ನು ಶ್ರೀನಿವಾಸ ರಾಜು ನಡೆಸುತ್ತಿದ್ದಾರೆ. ಪ್ರತಿಮೆಯಲ್ಲಿನ ಬಿರುಕು ಬಂದ ಕಾರಣ, ಅದನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ.”

“ಇದರಲ್ಲಿ ಯಾವುದೇ ರೀತಿಯ ವಿವಾದವಿಲ್ಲ, ಅಥವಾ ಇತರ ಧರ್ಮಗಳಿಗೆ ಸಂಬಂಧಿಸಿದ ಏನೂ ಇಲ್ಲ” ಎಂದು ಮೊಹಮ್ಮದ್ ಮಕ್ಬೂಲ್ ಜಾನಿ ಅವರು ತಿಳಿಸಿದ್ದಾರೆ.

ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಚಿಪ್ಪಾಲಪಲ್ಲಿಯ ಪ್ರಕೃತಿ ಕುಟೀರ ಆಶ್ರಮದ ಮಾಲೀಕ ಶ್ರೀನಿವಾಸ ರಾಜು ಅವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದಾಗ. ” ನವೀಕರಣ ಪಡಿಸಲು ಪ್ರತಿಮೆಯನ್ನು ನೆಲಸಮಗೊಳಿಸಲಾಗುತ್ತಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶದೊಂದಿಗೆ ವೈರಲ್ ಆಗುತ್ತಿರುವುದನ್ನು ತಿಳಿಸಿದಾಗ, ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ ರಾಜು,”ರಾಜಕೀಯ ಮಾಡುವವರು ಪ್ರತಿಮೆಯ ಚಿತ್ರವನ್ನು ತೆಗೆದುಕೊಂಡು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಮೂರ್ತಿಯನ್ನು ಹೊಸದಾಗಿ ನಿರ್ಮಿಸಲು ಹಳೆಯ ವಿಗ್ರಹ ಒಡೆಯಲಾಗುತ್ತಿದೆ ಅಷ್ಟೇ” ಎಂದು ಹೇಳಿದ್ದಾರೆ.

ಆದ್ದರಿಂದ ಸಿಎಂ ರೇವಂತ್ ರೆಡ್ಡಿ ಆಯೋಜಿಸಿದ್ದ ಇಫ್ತಾರ್ ಕೂಟದ ನಂತರ ಅಲ್ಲಿನ ಮುಸಲ್ಮಾನ ಸಮಾಜದವರು ಹನುಮಾನ್ ಮೂರ್ತಿ ಧ್ವಂಸ ಮಾಡಿದ್ದಾರೆ ಎಂಬುದು ಸುಳ್ಳು ಪ್ರತಿಪಾದನೆಯಾಗಿದೆ.


ಇದನ್ನು ಓದಿ: Fact Check | ಕೆನಡಾದಲ್ಲಿರುವ ಹನುಮಂತನ ವಿಗ್ರಹದ ಸುತ್ತಮುತ್ತ ಮಲದ ರಾಶಿ ಕಂಡು ಬಂದಿದೆ ಎಂಬ ವರದಿ ನಕಲಿ


ವಿಡಿಯೋ ನೋಡಿ: Fact Check | ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬುದು ದೇವೇಗೌಡರ ಹೇಳಿಕೆಯೇ ಹೊರತು ಸಿದ್ದರಾಮಯ್ಯನವರದ್ದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *