Fact Check | ಕೆನಡಾದಲ್ಲಿರುವ ಹನುಮಂತನ ವಿಗ್ರಹದ ಸುತ್ತಮುತ್ತ ಮಲದ ರಾಶಿ ಕಂಡು ಬಂದಿದೆ ಎಂಬ ವರದಿ ನಕಲಿ

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವರು ಹನುಮಾನ್ ಪ್ರತಿಮೆಯ ಸುತ್ತಲೂ ಮಾನವ ಮಲದ ರಾಶಿಗಳು ಕಂಡುಬಂದಿವೆ ಎಂಬ ಶೀರ್ಷಿಕೆಯಲ್ಲಿ ‘ಟೊರೊಂಟೊ ಸನ್’ ಸುದ್ದಿ ಪ್ರಕಟಿಸಿದೆ ಎಂದು ವರದಿಯ ಸ್ಕ್ರೀನ್‌ಶಾಟ್‌ನೊಂದಿಗೆ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವರದಿಯನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್‌ ಕೂಡ ಮಾಡುತ್ತಿದ್ದಾರೆ.

ಇನ್ನು ‘ಟೊರೊಂಟೊ ಸನ್’ ವರದಿಯ ಫೋಟೋವನ್ನು ಗಮನಿಸಿದಾಗ ಇದರಲ್ಲಿನ ಅಕ್ಷರಗಳು ಅಸ್ಪಷ್ಟವಾಗಿ ಸ್ವಲ್ಪ ಬದಲಾವಣೆಯೊಂದಿಗೆ ಕಂಡು ಬಂದಿದ್ದು, ಶೀರ್ಷಿಕೆ ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ಈ ಪೋಸ್ಟ್‌ನಲ್ಲಿರುವ ಹಾಗೆ ನಿಜಕ್ಕೂ ಬ್ರಾಂಪಸ್ಟ್‌ನಲ್ಲಿರುವ ಹಿಂದೂ ದೇವಾಲಯಕ್ಕೆ ಸಂಬಂಧಿಸಿದೆಯೇ ಅಥವಾ ನಕಲಿಯೇ ಎಂದು ಪರಿಶೀಲಿಸಿ ನೋಡಿದಾಗ ಅಸಲಿ ವಿಚಾರ ಹೊರ ಬಂದಿದೆ.

ಫ್ಯಾಕ್ಟ್‌ಚೆಕ್‌

ವೈರಲ್ ಆಗಿರುವ ವರದಿಯ ಪೋಸ್ಟ್‌ ಅನ್ನು ರಿವರ್ಸ್ ಇಮೇಜಿನಲ್ಲಿ ಪರಿಶೀಲನೆ ನಡೆಸಿದಾಗ ಈ ಶೀರ್ಷಿಕೆಗೆ ಸಂಬಂಧಿಸಿದ ಹಾಗೆ ಹೋಲಿಕೆಯಾಗುವ ಯಾವುದೇ ವರದಿಗಳು ಕಂಡು ಬಂದಿಲ್ಲ. ಆದರೆ 15 ಡಿಸೆಂಬರ್ 2023 ರಂದು ಕೆನಡಾ ಮಾಧ್ಯಮ ಔಟ್ಲೆಟ್, ಟೊರೊಂಟೊ ಸನ್ ಪ್ರಕಟಿಸಿದ ಮತ್ತೊಂದು ವರದಿ ಕಂಡುಬಂದಿದೆ. ಅದರಲ್ಲಿರುವ ವರದಿಗೂ ವೈರಲ್‌ ಪೋಸ್ಟ್‌ಗೂ ಅಜಗಜಾಂತರ ವ್ಯತ್ಯಾಸವಿದೆ.

ವೈರಲ್ ಪೋಸ್ಟ್ ನಲ್ಲಿ ಕಂಡುಬಂದ ಲೇಖಕ ಡಿನೆಟ್ ವಿಲ್ ಬೋರ್ಡ್ ಅವರ ಹೆಸರು ಈ ಲೇಖನದಲ್ಲೂ ಕಂಡುಬಂದಿದೆ. ಈ ಲೇಖನವನ್ನು ಮೇಲ್ನೋಟದಲ್ಲಿ ಗಮನಿಸಿದಾಗ ವೈರಲ್ ಪೋಸ್ಟ್ ಸುಳ್ಳು ಎಂಬುದು ಬಹಿರಂಗವಾಗಿದೆ. ಇನ್ನು ಮೂಲ ಸುದ್ದಿಯ ಶೀರ್ಷಿಕೆಯಲ್ಲಿ “ಬ್ರಾಂಪ್ಟನ್‌ನಲ್ಲಿ ಹಿಂದೂ ದೇವರ ಬೃಹತ್ ಪ್ರತಿಮೆ” ಎಂದು ಬರೆಯಲಾಗಿದೆ.

ಟೊರೊಂಟೊ ಸನ್ ವೆಬ್‌ಸೈಟ್‌ನಲ್ಲಿ ವೈರಲ್ ಸುದ್ದಿ ವರದಿ ಮತ್ತು ನಿಜವಾದ ಸುದ್ದಿ ವರದಿಯ ಸ್ಕ್ರೀನ್‌ಶಾಟ್ ನಡುವೆ ಹೋಲಿಕೆ ಮಾಡಿ ನೋಡಿದಾಗ ವೈರಲ್‌ ವರದಿಯೂ ಎಡಿಟ್‌ ಮಾಡಿದ್ದು ಎಂಬುದು ತಿಳಿದುಬಂದಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ಸುದ್ದಿ ವರದಿಯ ಪ್ರಕಾರ, 55 ಅಡಿ ಹನುಮಾನ್ ಪ್ರತಿಮೆಯನ್ನು ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ 23 ಏಪ್ರಿಲ್ 2024 ರಂದು ಹನುಮಾನ್ ಜಯಂತಿಯೊಂದಿಗೆ ಔಪಚಾರಿಕವಾಗಿ ಅನಾವರಣಗೊಳಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಟೊರೊಂಟೊ ಸನ್ ವೆಬ್ಸೈಟ್ ನಲ್ಲಿ ಪ್ರಕಟವಾಗಿರುವ ಮೂಲ ಸುದ್ದಿಯಲ್ಲಿ ಹನುಮಂತನ ವಿಗ್ರಹದ ಸುತ್ತಮುತ್ತ ಮಾನವನ ಮಲದ ರಾಶಿ ಇದೆ ಎಂಬುದು ಸುಳ್ಳಿನಿಂದ ಕೂಡಿದೆ ಮತ್ತು ನಿಜವಾದ ವರದಿಯಲ್ಲಿ ಹಿಂದೂ ಮಂದಿರದ ಬಳಿ ನಿರ್ಮಾಣವಾಗುತ್ತಿರುವ ಬೃಹತ್ ಹನುಮಂತನ ವಿಗ್ರಹ ಎಂದು ಉಲ್ಲೇಖವಾಗಿದೆ. ಹಾಗಾಗಿ ಸುಳ್ಳು ಪೋಸ್ಟ್‌ಗಳನ್ನು ನಂಬುವ ಅಥವಾ ಶೇರ್‌ ಮಾಡುವ ಮೊದಲು ಒಮ್ಮೆ ಪರಿಶೀಲಿಸಿ.


ಈ ಸುದ್ದಿಯನ್ನು ಓದಿ : ರಾಹುಲ್ ಗಾಂಧಿ ಹೆಸರು ರೌಲ್ ವಿನ್ಸಿ ಮತ್ತು ಪ್ರಿಯಂಕಾ ಗಾಂಧಿಯ ಮೂಲ ಹೆಸರು ಬಿಯಾಂ ಕಾ ವಾದ್ರಾ ಎಂಬುದು ಸುಳ್ಳು


ವಿಡಿಯೋ ನೋಡಿ : ರಾಹುಲ್ ಗಾಂಧಿ ಹೆಸರು ರೌಲ್ ವಿನ್ಸಿ ಮತ್ತು ಪ್ರಿಯಂಕಾ ಗಾಂಧಿಯ ಮೂಲ ಹೆಸರು ಬಿಯಾಂ ಕಾ ವಾದ್ರಾ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *