Fact Check | ಅಯೋಧ್ಯೆಯ ರಾಮಮಂದಿರದ ಅಧಿಕಾರಿಗಳು ದಲಿತ ಬಾಲಕನಿಗೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಅಯೋಧ್ಯೆಯಲ್ಲಿ ದಲಿತ ಬಾಲಕನ ಮೇಲೆ ರಾಮಮಂದಿರದ ಅಧಿಕಾರಿಗಳು ಹೇಗೆ ಹಲ್ಲೆ ನಡೆಸುತ್ತಿದ್ದಾರೆಂದು. ಇದು ನಿಜಕ್ಕೂ ಆಘಾತಕಾರಿ.” ಎಂದು ವ್ಯಕ್ತಿಯೊಬ್ಬ ಬಾಲಕನನ್ನು ಥಳಿಸುತ್ತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಾನಾ ಬರಹಗಳೊಂದಿಗೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ

ಈ ವಿಡಿಯೋದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಇಬ್ಬರು ವ್ಯಕ್ತಿಗಳು ಸಮವಸ್ತ್ರ ಧರಿಸಿದ ಬಾಲಕನೊಬ್ಬನನ್ನು ರಸ್ತೆಯ ಮೇಲೆಯೇ ಮನಸ್ಸೋ ಇಚ್ಛೆ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಇದೇ ವಿಡಿಯೋದಲ್ಲಿ ಹಲವು ವಿದ್ಯಾರ್ಥಿಗಳಿರುವುದು, ಕೆಲವು ಬಾಲಕಿಯರು ಸಾಂಸ್ಕೃತಿಕ ಉಡುಗೆಗಳನ್ನು ತೊಟ್ಟು ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅದೇ ಸ್ಥಳದಲ್ಲಿ ಸಾಂಸ್ಕೃತಿಕ ಉಡುಗೆಗಳನ್ನು ಧರಿಸಿ ಸಂಗೀತ ಪರಿಕರಗಳನ್ನು ಉಪಯೋಗಿಸುತ್ತಿರುವುದು ಕಂಡು ಬಂದಿದೆ.

ಫ್ಯಾಕ್ಟ್‌ಚೆಕ್‌

ಈ ವಿಡಿಯೋ ವ್ಯಾಪಕವಾಗಿ ವೈರಲ್‌ ಆಗುತ್ತಿದ್ದಂತೆ ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ವೈರಲ್ ವಿಡಿಯೋವಿನ ಕೆಲ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ನ್ಯೂಸ್ 24 ಎಂಬ ಸುದ್ದಿವಾಹಿನಿಯೊಂದು ಇದೇ ಡಿಸೆಂಬರ್ 24ರಂದು ಹರಿಯಾಣದ ಫರೀದಾಬಾದ್ ನಲ್ಲಿ ಶಿಕ್ಷಕರಿಬ್ಬರು ವಿದ್ಯಾರ್ಥಿಯೊಬ್ಬನನ್ನು ಗೀತಾ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಮನಸ್ಸೋ ಇಚ್ಚೆ ಥಳಿಸಿದ್ದಾರೆ ಎಂದು ಸುದ್ದಿಯನ್ನು ಪ್ರಸಾರ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಇದೇ ಕೀ ವರ್ಡ್‌ಗಳನ್ನ ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದಾಗ ಇದೇ ರೀತಿಯ ಹಲವು ವರದಿಗಳು ಕಂಡುಬಂದಿವೆ. ಈ ವರದಿಗಳ ಪ್ರಕಾರ ಗೀತಾ ಜಯಂತಿಯ ಸಂದರ್ಭದಲ್ಲಿ ಹೈ ಸ್ಕೂಲ್ ವಿದ್ಯಾರ್ಥಿಯೊಬ್ಬ ಮಹಿಳಾ ವಿದ್ಯಾರ್ಥಿಗಳ ಮೇಲೆ ಹೂಗಳನ್ನು ಎಸೆದಿದ್ದ ಎಂದು ಆರೋಪಿಸಲಾಗಿತ್ತು. ಹೀಗಾಗಿ ಈತನಿಗೆ ಶಿಕ್ಷಕರು ಥಳಿಸಿದ್ದಾರೆ ಎಂದು ಆ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಕುರಿತು ದೈನಿಕ್ ಭಾಸ್ಕರ್ ವರದಿಯಲ್ಲಿ ಈ ಘಟನೆ ಡಿಸೆಂಬರ್ 22 ರಂದು ನಡೆದಿದ್ದು ಹಲ್ಲೆ ನಡೆಸಿದ ಇಬ್ಬರು ಶಿಕ್ಷಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತು ಫರಿದಾಬಾದ್ ಸೆಂಟ್ರಲ್ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ದೈನಿಕ್ ಭಾಸ್ಕರ್ ವರದಿಯಲ್ಲಾಗಲಿ ಅಥವಾ ಬೇರೆ ಯಾವುದೇ ವರದಿಯಲ್ಲಾಗಲಿ, ಬಾಲಕ ದಲಿತ ಸಮುದಾಯಕ್ಕೆ ಸೇರಿದವನು ಎಂಬುದು ಉಲ್ಲೇಖವಾಗಿಲ್ಲ.

ಮತ್ತೊಂದು ಕಡೆ ಈ ಘಟನೆಯ ಕುರಿತು ಆಯೋಧ್ಯೆ ಪೊಲೀಸರು ಕೂಡ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು ಅದರಲ್ಲಿ ಈ ವಿಡಿಯೋದಲ್ಲಿನ ಘಟನೆಯ ಕುರಿತು ವಿವರಣೆಯನ್ನು ನೀಡಿದ್ದು ಈ ಘಟನೆಗೂ ಅಯೋಧ್ಯೆಯ ರಾಮಮಂದಿರದ ಅಧಿಕಾರಿಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.


ಈ ಸುದ್ದಿಯನ್ನು ಓದಿ : Fact Check | ಅಮುಲ್ ಸಂಸ್ಥೆ ‘ಶರಮ್’ ಹೆಸರಿನ ಹೊಸ ಆಹಾರ ಉತ್ಪನ್ನವನ್ನು ಬಿಡುಗಡೆ ಮಾಡಿಲ್ಲ


ವಿಡಿಯೋ ನೋಡಿ : ಆಲೂಗೆಡ್ಡೆಯಿಂದ ಚಿನ್ನ ತೆಗೆಯಬಹುದೆಂಬ ಹೇಳಿಕೆ ರಾಹುಲ್ ಗಾಂಧಿಯವರದ್ದಲ್ಲ: ಮೋದಿ ಕುರಿತು ಹೇಳಿದ್ದು!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *