ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ನೆಹರು ರವರ ಕುಟುಂಬವನ್ನು ಕೇಂದ್ರವಾಗಿರಿಸಿಕೊಂಡು ಕಳೆದೊಂದು ದಶಕಗಳಿಂದ ಸಾಕಷ್ಟು ಸುಳ್ಳು ಆಪಾಧನೆಗಳು, ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಆಡಳಿತರೂಡ ಸರ್ಕಾರಗಳು ಸಹ ಇಂತಹ ಅಪಪ್ರಚಾರ ಮಾಡುವವರ ಬೆನ್ನಿಗೆ ನಿಂತು ಬೆಂಬಲಿಸುತ್ತಿದೆ ಮತ್ತು ಈ ಕುಟುಂಬದ ಸದಸ್ಯರ ಮೇಲೆ ಜನರಲ್ಲಿ ದ್ವೇಷ ಬೆಳೆಯುವಂತೆ ನೋಡಿಕೊಳ್ಳುತ್ತಿವೆ. ಇತ್ತೀಚೆಗೆ ನೆಹರೂ ಕುಟುಂಬದವರು ಮೂಲತಃ ಮುಸ್ಲಿಂ ಸಮುದಾಯದವರು ಎಂಬ ಸುದ್ದಿಯನ್ನು ಎಲ್ಲೆಡೆ ಪ್ರಚಾರ ಪಡಿಸಲಾಗುತ್ತಿದೆ.
“ನೆಹರು ಅಜ್ಜ ಒಬ್ಬ ಪಾರ್ಸಿ ಜನಾಂಗದ ಖಾನ್. ಬ್ರಿಟಿಷರ ಧಾಳಿಯಿಂದ ತಪ್ಪಿಸಿಕೊಳ್ಳಲು ಗಂಗಾಧರ್ ನೆಹರು ಎಂಬ ಹಿಂದು ಹೆಸರಿನಿಂದ ತಲೆಮರೆಸಿಕೊಂಡಿದ್ದರು. ನೆಹರ್ ನದೀ ಪ್ರಾಂತ್ಯದಿಂದ ಬದ ಕಾರಣ ನೆಹರೂ ಎಂದು ಹೆಸರನ್ನು ಬದಲಾಯಿಸಿಕೊಂಡರಂತೆ. ಎಂಬ ಸುಳ್ಳನ್ನು ಹರಿಬಿಡಲಾಗಿದೆ.
ಈಗ, “ಹೆಸರು ಬದಲಾಯಿಸಿಕೊಳ್ಳುವುದು ಕಾಂಗ್ರೆಸ್‌ನವರ ರಕ್ತದಲ್ಲಿಯೇ ಬಂದಿದೆ. ಇಂದಿರಾ ಗಾಂಧಿಯ ಮೂಲ ಹೆಸರು ಇಂದಿರಾ ಫಿರೋಜ್ ಗಾಂಧಿ, ಸೋನಿಯ ಗಾಂಧಿಯವರ ಹೆಸರು ಆಂಟ್ಯೋನಿಯೋ ಮೈನೋ, ರಾಹುಲ್ ಗಾಂಧಿಯ ಹೆಸರು ರೌಲ್ ವಿನ್ಸಿ, ಮತ್ತು ಪ್ರಿಯಂಕ ಗಾಂಧಿಯ ಮೂಲ ಹೆಸರು ಬಿಯಾಂ ಕಾ ವಾದ್ರಾ.” ಎಂದು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಪಿ ಕರ್ನಾಟಕ ಸಹ ತನ್ನ ಅಧಿಕೃತ ಪುಟದಲ್ಲಿ ಈ ಸುಳ್ಳನ್ನು ಹಂಚಿಕೊಂಡಿದೆ.
ಫ್ಯಾಕ್ಟ್‌ಚೆಕ್: ಇಂದಿರಾ ಗಾಂಧಿಯವರ ಮೂಲ ಹೆಸರು ಇಂದಿರಾ ಪ್ರಿಯದರ್ಶಿನಿ ನೆಹರು ಎಂದು. ಫೀರೋಜ್ ಗಾಂಧಿಯವರನ್ನು ಮದುವೆಯಾದ ಬಳಿಕ ಇಂದಿರಾ ಗಾಂಧಿ ಎಂದಾಗಿದೆ. ಇಟಲಿ ಮೂಲದವರಾದ ಸೋನಿಯಾ ಗಾಂಧಿಯವರ ಮೂಲ ಹೆಸರು ಎಡ್ವಿಜ್ ಆಂಟೋನಿಯಾ ಅಲ್ಬಿನಾ ಮೈನೊ, ರಾಜೀವ್ ಗಾಂಧಿಯವರನ್ನು ಮದುವೆಯಾಗಿ ಭಾರತದಲ್ಲಿ ನೆಲಸಿದ ಬಳಿಕ ತಮ್ಮ ಹೆಸರನ್ನು ಬದಲಾಯಿಸಿಕೊಂಡರು.ಇನ್ನೂ ರಾಹುಲ್ ಗಾಂಧಿಯವರ ಹೆಸರು ರೌಲ್ ವಿನ್ಸಿ ಎಂಬುದಕ್ಕೆ ಯಾವುದೇ ಆಧಾರವಿಲ್ಲ. 2019ರ ಉತ್ತರ ಪ್ರದೇಶದ ಅಮೇಥಿಯಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದ ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ ಅವರು ಪಡೆದಿರುವ ಪದವಿಗಳ ವಿಷಯದ ಕುರಿತು ತೀವ್ರ ಚರ್ಚೆಗಳು ಜರುಗುವಾಗ 12 ಏಪ್ರಿಲ್ 2019ರಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಯವರು “ಬುದ್ದುವಿನ ಕೇಂಬ್ರಿಡ್ಜ್ ಪ್ರಮಾಣಪತ್ರದಲ್ಲಿ ಅವನ ಹೆಸರು ರೌಲ್ ವಿನ್ಸಿ ಎಂದಿದೆ. ಅವನು ಎಂಫಿಲ್ ಓದಿದ್ದಾನೆ ಮತ್ತು ರಾಷ್ಟ್ರೀಯ ಆರ್ಥಿಕ ಯೋಜನೆ ಮತ್ತು ನೀತಿಯಲ್ಲಿ ಅನುತ್ತೀರ್ಣರಾಗಿದ್ದಾನೆ” ಎಂದು ತಮ್ಮ ಟ್ವಿಟರ್(X) ಖಾತೆಯಲ್ಲಿ ಬರೆದುಕೊಂಡಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ರಾಹುಲ್ ಗಾಂಧಿ ಟೀಕಾಕಾರರು ಅವರನ್ನು ರಾಲ್ ವಿನ್ಸಿ ಎಂದು ಕರೆಯುತ್ತಿದ್ದಾರೆ.
ಆದರೆ ಸುಬ್ರಮಣ್ಯನ್ ಸ್ವಾಮಿ ಯವರು ಹಂಚಿಕೊಂಡಿರುವ ಎಂಫಿಲ್ ಪ್ರಮಾಣ ಪತ್ರವು 2008ರದ್ದಾಗಿದ್ದು, ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಎಂಫಿಲ್ ಮುಗಿಸಿರುವುದು 1995ರಲ್ಲಿ. ಆದ್ದರಿಂದ ಸುಬ್ರಮಣ್ಯನ್ ಸ್ವಾಮಿ ಸಹ ಜನರನ್ನು ತಪ್ಪುದಾರಿಗೆ ಎಳೆಯಲು ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದರು.
ಇನ್ನೂ ಪ್ರಿಯಾಂಕಾ ಗಾಂಧಿಯವರು ರಾಬರ್ಟ್ ವಾದ್ರಾರವರನ್ನು ಮದುವೆಯಾದ ನಂತರ ಪ್ರಿಯಾಂಕ ಗಾಂಧಿ ವಾದ್ರಾ ಎಂದಾಗಿದೆಯೇ ಹೊರತು ಬಿಯಾಂ ಕಾ ವಾದ್ರಾ ಎಂಬುದು ಸಂಪೂರ್ಣ ಸುಳ್ಳು. ಆದ್ದರಿಂದ ರಾಜಕೀಯ ಮುಖಂಡರ ಕುಟುಂಬಗಳ ಕುರಿತು ಯಾವುದೇ ಸುದ್ದಿಯನ್ನು ನಂಬುವ ಮತ್ತು ಅಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿ ಹಂಚಿಕೊಳ್ಳಿ.
ಇದನ್ನು ಓದಿ: Fact Check | ಮುಸ್ಲಿಂ ವ್ಯಕ್ತಿಯೊಬ್ಬ ಹಂದಿ ಮಾಂಸದ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು Prank ವಿಡಿಯೋವಾಗಿದೆ
ವಿಡಿಯೋ ನೋಡಿ: Fact Check | ಕೆಳಗೆ ಬಿದ್ದ ಆಹಾರವನ್ನು 5 ಸೆಕೆಂಡ್‌ಗಳ ಒಳಗೆ ತೆಗೆದು ಸೇವಿಸಿದರೂ ಅಪಾಯ ತಪ್ಪಿದ್ದಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ