“ವಾಟ್ಸ್‌ಆಪ್‌ನಲ್ಲಿ ರವಾನಿಸುವ ಗುಡ್ ಮಾರ್ನಿಂಗ್ ( ಶುಭೋದಯ ) ಸಂದೇಶಗಳ ಮೇಲೆ ಕೇಂದ್ರ ಸರ್ಕಾರ 18% GST ವಿಧಿಸಲು ಮುಂದಾಗಿದೆ. ಈ ಕುರಿತು ಪ್ರಖ್ಯಾತ ABP ನ್ಯೂಸ್ ಚಾನಲ್ ವರದಿ ಮಾಡಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ತಮ್ಮ ವೈಯಕ್ತಿಕ ಖಾತೆಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಈ ಸುದ್ದಿ ಎಬಿಪಿ ಸುದ್ದಿ ಸಂಸ್ಥೆಯಲ್ಲಿ ಬಂದಿರುವುದರಿಂದ ಬಹುತೇಕರು ಇದು ನಿಜವಿರಬಹುದು ಎಂದು ನಂಬಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಇದೇ ರೀತಿಯ ಸುಳ್ಳು ಸುದ್ದಿಯನ್ನು ನವಭಾರತ್ ಟೈಮ್ಸ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಬೆಳಗಿನ ಗುಡ್ ಮಾರ್ನಿಂಗ್ ಮೆಸೆಜ್ ಕಳುಹಿಸುವುದರಿಂದ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗುತ್ತಿದೆ. ಸರ್ಕಾರ ಇದಕ್ಕೆ ಜಿಎಸ್‌ಟಿ ವಿಧಿಸಿದರೆ ಸಾಕಷ್ಟು ಮಂದಿ ಗುಡ್ ಮಾರ್ನಿಂಗ್ ಮೆಸೆಜ್ ಕಳುಹಿಸುವುದಿಲ್ಲ. ಹಾಗಾಗಿ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ.
ಪ್ಯಾಕ್ಟ್‌ಚೆಕ್
ABP ನ್ಯೂಸ್ ಚಾನಲ್ ವರದಿಯ ವಿಡಿಯೋವನ್ನು ಕನ್ನಡ ಫ್ಯಾಕ್ಟ್‌ಚೆಕ್ ತಂಡ ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆಯನ್ನ ನಡೆಸಿತ್ತು. ಈ ವೇಳೆ ಎಬಿಪಿ ಸುದ್ದಿ ಸಂಸ್ಥೆ ಮಾಡಿದ್ದ ವಿಡಿಯೋವಿನ ಪೂರ್ಣ ಆವೃತ್ತಿ ಯುಟ್ಯೂಬ್‌ನಲ್ಲಿ ಲಭ್ಯವಾಗಿದೆ. ಈ ವಿಡಿಯೋವನ್ನು ಸಂಪೂರ್ಣವಾಗಿ ಗಮನಿಸಿದಾಗ ಇದು ಫ್ಯಾಕ್ಟ್‌ಚೆಕ್ ವಿಡಿಯೋವಾಗಿದೆ.
ಅಸಲಿಗೆ ಎಬಿಪಿ ಕೂಡ ಇಲ್ಲಿ ನವಭಾರತ್ ಟೈಮ್ಸ್ ಎಂಬ ಪತ್ರಿಕೆಯೊಂದು ಪ್ರಕಟಿಸಿದ ಸುಳ್ಳು ಸುದ್ದಿಯ ಕುರಿತು ವರದಿಯನ್ನ ಮಾಡಿದೆ. ಈ ವರದಿಯನ್ನು 20 ಮಾರ್ಚ್ 2018ರಲ್ಲೇ ಪ್ರಕಟಿಸಿದೆ. ಆದರೆ ಇದೇ ವಿಡಿಯೋವನ್ನು ಕಟ್ ಮಾಡಿ ಎಡಿಟ್ ಮಾಡಿರುವ ಕಿಡಿಗೇಡಿಗಳು ಎಬಿಪಿ ಸುದ್ದಿ ಸಂಸ್ಥೆ ಗುಡ್ ಮಾರ್ನಿಂಗ್ ಮೆಸೆಜ್‌ಗೆ ಕೇಂದ್ರ ಸರ್ಕಾರ 18% ತೆರಿಗೆ ವಿಧಿಸಿರುವ ವರದಿ ಮಾಡಿದೆ ಎಂದು ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದಾರೆ.
ಇನ್ನು ಇದೇ ರೀತಿಯ ಸುಳ್ಳು ಸುದ್ದಿಯೊಂದು 2021ರಲ್ಲಿಯೂ ಕೂಡ ಹಬ್ಬಲಾಗಿತ್ತು ಆಗ ಆಂಗ್ಲ ಭಾಷೆಯ ಫ್ಯಾಕ್ಟ್‌ಚೆಕ್ ತಂಡವಾದ ಫ್ಯಾಕ್ಟ್‌ಲೀ ಇದೊಂದು ಸುಳ್ಳು ಸುದ್ದಿ ಎಂಬುದನ್ನು ಬಯಲಿಗೆಳೆದಿತ್ತು. ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಭೀತಾಗಿದೆ.
ಇದನ್ನೂ ಓದಿ : Fact Check | ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬುದು ದೇವೇಗೌಡರ ಹೇಳಿಕೆಯೇ ಹೊರತು ಸಿದ್ದರಾಮಯ್ಯನವರದ್ದಲ್ಲ
ಈ ವಿಡಿಯೋ ನೋಡಿ : Fact Check | ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬುದು ದೇವೇಗೌಡರ ಹೇಳಿಕೆಯೇ ಹೊರತು ಸಿದ್ದರಾಮಯ್ಯನವರದ್ದಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.