ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಂತರ ಕ್ಷೇತ್ರಕ್ಕೆ ಯಾರು ಸಂಸದರಾಗಬಹುದು ಎಂಬುದು ತೀವ್ರ ಚರ್ಚೆಗೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ಸಿನಿಂದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ತಮ್ಮ ಮತ್ತು ಹಾಲಿ ಸಂಸದ ಡಿ. ಕೆ ಸುರೇಶ್ ಅವರು ಕಣಕ್ಕಿಳಿದರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಪರವಾಗಿ ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಅವರು ಕಣಕ್ಕಿಳಿಯಲಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯನವರು ಭಾಷಣವೊಂದರಲ್ಲಿ ಅಮಿತ್ ಶಾ ಒಬ್ಬ ಗೂಂಡಾ ಮತ್ತು ರೌಡಿ ಅವರು ಗುಜಾರಾತಿನಲ್ಲಿ ನರಮೇಧಗಳಿಗೆ ಕಾರಣವಾಗಿದ್ದಾರೆ ಎಂದು ಟೀಕಿಸಿದ್ದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಡಿ. ಕೆ ಸುರೇಶ್ ಅವರ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಅದರಲ್ಲಿ, “ಡಿ.ಕೆ ಸುರೇಶ್ ಅವರು ತಮ್ಮ ಪ್ರಚಾರದ ವೇಳೆ “ಏಯ್ ಪೊಲೀಸ್, ಎತ್ತಂಗಡಿ ಆಗ್ತೀಯಾ” ಎಂದು ದಮ್ಕಿ ಹಾಕಿದ್ದಾರೆ. ಕರ್ತವ್ಯ ನಿರತ ಪೋಲಿಸ್ ಅಧಿಕಾರಿಗಳ ಪರಿಸ್ಥಿತಿಯೇ ಹೀಗಾದರೆ ಇನ್ನಾ ಬೆಂಗಳೂರು ಗ್ರಾಮಾಂತರ ಜನರೇ ನಿಮ್ಮ ಪರಿಸ್ಥಿತಿ ಏನು, ನೀವೇ ನಿರ್ಧರಿಸಿ..?” ಎಂದು ಸಂದೇಶದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋವನ್ನು ಬಿಜೆಪಿ ವಿರೋದ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಮತ್ತು ಬಿಜೆಪಿ ಕಾರ್ಯಕರ್ತರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್: ಸಧ್ಯ ವೈರಲ್ ಆಗುತ್ತಿರುವ ಡಿ.ಕೆ ಸುರೇಶ್ ಅವರ ವಿಡಿಯೋ ಇತ್ತೀಚಿನದಾಗಿರದೆ ಮೇ 6, 2023ರ ವಿಧಾನ ಸಭೆ ಚುನಾವಣೆಗೆ ಸಂಬಂದಿಸಿದ್ದಾಗಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಬಳಿ ಪ್ರಚಾರ ನಡೆಸುವ ವೇಳೆಯಲ್ಲಿ ಈ ಘಟನೆ ಜರುಗಿದೆ. ಬೊಮ್ಮನ ಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಡಿ. ಉಮಾಪತಿ ಶ್ರೀನಿವಾಸಗೌಡ ಅವರ ಪರವಾಗಿ ಪ್ರಚಾರ ಮಾಡುವ ವೇಳೆ ವಾಹನ ನಿಲ್ಲಿಸುವುದರ ಕುರಿತು ತಡೆ ಒಡ್ಡಿದ ಪೋಲೀಸರನ್ನು ಕರೆದು ಏಕವಚನದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನು ಓನ್ ಇಂಡಿಯಾ ಕನ್ನಡ ಮಾಧ್ಯಮದವರು 7 ಮೇ 2023ರಂದು ಯೂಟೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ನಡೆದ ಸಂದರ್ಭದಲ್ಲಿ ಸಹ ಸಾರ್ವಜನಿಕರು ಡಿ.ಕೆ ಸುರೇಶ್ ಅವರ ಈ ನಡವಳಿಕೆಯನ್ನು ಖಂಡಿಸಿದ್ದರು. ಈಗ ಡಿ.ಕೆ ಸುರೇಶ್ ಅವರ ವಿರುದ್ದವಾಗಿ ಅಪಪ್ರಚಾರ ಮಾಡಲು ಈ ವಿಡಿಯೋವನ್ನು ಹರಿಬಿಡಲಾಗಿದೆ.
ಆದ್ದರಿಂದ ಡಿ.ಕೆ ಸುರೇಶ್ ಪೋಲೀಸರಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಇತ್ತೀಚಿನದಾಗಿರದೆ ಹಳೆಯ ವಿಡಿಯೋ ಆಗಿದೆ.
ಇದನ್ನು ಓದಿ: ಯೋಗ ತರಬೇತುದಾರ ಸುಹೇಲ್ ಅನ್ಸಾರಿ 5 ಹಿಂದೂ ಮಹಿಳೆಯರುನ್ನು ಇಸ್ಲಾಂಗೆ ಮದುವೆ ಮಾಡಿಸಿದ್ದಾನೆ ಎಂಬುದಕ್ಕೆ ಆಧಾರಗಳಿಲ್ಲ
ವಿಡಿಯೋ ನೋಡಿ: ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.