Fact Check | ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬುದು ದೇವೇಗೌಡರ ಹೇಳಿಕೆಯೇ ಹೊರತು ಸಿದ್ದರಾಮಯ್ಯನವರದ್ದಲ್ಲ

“ತಾರಿಖು ನೆನಪಿಡಿ ಮೋದಿ ಅವರು ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಎಲ್ಲರಿಗೂ ಶೇರ್‌ ಮಾಡಿ” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯನವರ ಧ್ವನಿಯಲ್ಲೇ ಈ ಮಾತು ಹೇಳಿರುವುದು ಸ್ಪಷ್ಟವಾಗಿದೆ.

ಆದರೆ ವಿಡಿಯೋವಿನ ಪ್ರಾರಂಭ ಮತ್ತು ವಿಡಿಯೋದ ಕೊನೆಯು ಒಂದೇ ರೀತಿಯಲ್ಲಿರದೆ ಮಧ್ಯದಲ್ಲಿ ಪ್ರಸಾರವಾದ ರೀತಿಯಲ್ಲಿರುವುದು ಅನುಮಾನವನ್ನು ಹುಟ್ಟಿಸುತ್ತಿದೆ. ಆದರೂ ಸಾಕಷ್ಟು ಮಂದಿ ಈ ಹೇಳಿಕೆಯನ್ನು ಸಿದ್ದರಾಮಯ್ಯನವರೇ ನೀಡಿದ್ದಾರೆ ಎಂದು ನಂಬಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದಾಗ 24 ಮಾರ್ಚ್‌ 2024 ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕರಟಗೊಂಡ ವಿಡಿಯೋವೊಂದು ಕಂಡು ಬಂದಿದೆ. ಅದರಲ್ಲಿ ” ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೇವೇಗೌರು ಈಗ.. ಸಿಎಂ ವ್ಯಂಗ್ಯ ” ಎಂಬ ಶೀರ್ಷಿಕೆಯಲ್ಲಿ ವರದಿಯೊಂದು ಕಂಡು ಬಂದಿತು.

ಇದರ ಜೊತೆಗೆ ದೃಶ್ಯ ಮಾಧ್ಯಮಗಳ ವರದಿಗಾಗಿ ಪರಿಶೀಲನೆ ನಡೆಸಿದಾಗ ಪವರ್‌ ಟಿವಿ ಯುಟ್ಯುಬ್‌ ಚಾನಲ್‌ನಲ್ಲಿ ಸಿಎಂ ಹೇಳಿಕೆಯನ್ನು ಥಂಬ್‌ನೆಲ್‌ ಸಮೇತವಾಗಿ ವಿಡಿಯೋವೊಂದನ್ನು ಅಪ್‌ಲೋಡ್‌ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪೂರ್ತಿ ಹೇಳಿಕೆಯನ್ನು ಕೂಡ ನೋಡಬಹುದಾಗಿದೆ.

ಈ ವರದಿಯ ಪ್ರಕಾರ ಸಿಎಂ ಸಿದ್ದರಾಮಯ್ಯ “ದೇವೇಗೌಡ ಅವರು ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತಾರೆಂದು ಹೇಳಿದ್ದರು” ಎಂದು ದೇವೇಗೌಡರ ಹೇಳಿಕೆಯನ್ನ ಉಲ್ಲೇಖಿಸಿರುವ ಕುರಿತು ವರದಿಯಾಗಿದೆ. ಇನ್ನು ಇದೇ ರೀತಿ ಟ್ವೀಟ್‌ವೊಂದನ್ನು ಕೂಡ ಸಿಎಂ ಸಿದ್ದರಾಮಯ್ಯನವರು ಮಾಡಿದ್ದು ಈ ಹಿಂದೆ ತಮ್ಮ ಭಾಷಣದಲ್ಲಿ ಏನನ್ನ ಹೇಳಿದ್ದರೋ ಅದನ್ನೇ ತಮ್ಮ ಟ್ವಿಟ್‌ನಲ್ಲಿ ಕೂಡ ಉಲ್ಲೇಖಿಸಿದ್ದಾರೆ.

ಸಿಎಂ 24-03-2024 ರಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ “ಈ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೇವೇಗೌಡರು, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದ ದೇವೇಗೌಡರು ಈಗ ಬಿಜೆಪಿ ಜೊತೆ ಸೇರಿದ್ದಾರೆ. ತಮ್ಮ ಅಳಿಯ ಮಂಜುನಾಥ್ ಅವರನ್ನು ಬಿಜೆಪಿಗೆ ಕಳಿಸಿದ್ದಾರೆ. ಮೊದಲು ನೀನು ಹೋಗಿರು, ಆಮೇಲೆ ನಾವೂ ಬರ್ತೀವಿ ಎನ್ನುವ ರೀತಿ ಅಳಿಯನನ್ನು ಬಿಜೆಪಿಗೆ ಕಳಿಸಿದ್ದಾರೆ. ಅದಕ್ಕೇ ತಮ್ಮ ಪಕ್ಷದ ಹೆಸರಿನಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕುವುದು ಉತ್ತಮ.” ಎಂದು ಬರೆದುಕೊಂಡಿದ್ದಾರೆ

ಒಟ್ಟಾರೆಯಾಗಿ ವೈರಲ್‌ ವಿಡಿಯೋ ಎಡಿಟೆಡ್‌ ಆಗಿದ್ದು ಕೊನೆಯ ಭಾಗವನ್ನು ಕಟ್‌ ಮಾಡಿರುವ ಕಿಡಿಗೇಡಿಗಳು ಸುಳ್ಳು ಮಾಹಿತಿಯನ್ನು ಹರಡುತ್ತಿರುವುದು  ಈ ಎಲ್ಲಾ ಅಂಶಗಳಿಂದ ಬಯಲಾಗಿದೆ.


ಈ ಸುದ್ದಿಯನ್ನು ಓದಿ : Fact Check: ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check: ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *