ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಹೊಸದಾಗಿ ಚುನಾಯಿತರಾಗಿರುವ ಬಿಜೆಪಿ ನೂತನ ಸಂಸದೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ಮಹಿಳಾ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕಂಗನಾ ಅವರಿಗೆ ಕಪಾಳಮೋಕ್ಷ ಮಾಡಿದ ಸುದ್ದಿ ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕುಲ್ವಿಂದರ್ ಕೌರ್ “ರೈತರಿಗೆ ಅಗೌರವ ತೋರಿದ್ದಕ್ಕೆ” ಪ್ರತಿಕ್ರಿಯೆಯಾಗಿ ಕಪಾಳ ಮೋಕ್ಷ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಹೊಸ ರೈತರ ಕಾಯ್ದೆಯನ್ನು ವಿರೋಧಿಸಿ ಪಂಜಾಬಿನ ರೈತರು ಒಂದು ವರ್ಷಗಳ ಕಾಲ ದೆಹಲಿಯ ಗಡಿಯಲ್ಲಿ ನಡೆಸಿದ ಚಳುವಳಿಯನ್ನು ನಟಿ ಕಂಗನಾ ರಣಾವತ್ ಅವರು ದೇಶದ್ರೋಹಿ ಖಾಲಿಸ್ತಾನಿಗಳು ಮತ್ತು 100 ರೂಗಳ ಆಸೆಗೆ ಬಂದ ನಕಲಿ ರೈತರು ಎಂದು ಟ್ವಿಟ್ ಮಾಡುವುದರ ಮೂಲಕ ಜರಿದಿದ್ದರು. ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕುಲ್ವಿಂದರ್ ಕೌರ್ ಅವರು “ರೈತರು ₹100ಕ್ಕೆ ಪ್ರತಿಭಟನೆಗಾಗಿ ಅಲ್ಲಿಗೆ ಹೋಗಿ ಕೂರ್ತಾರೆ ಅಂತ ಹೇಳಿಕೆ ಕೊಟ್ಟಿದ್ದಾಳೆ.. ಈ ಹೇಳಿಕೆ ಕೊಟ್ಟಾಗ ನನ್ನ ಅಮ್ಮ ಅಲ್ಲೇ ಕುಳಿತು ಪ್ರತಿಭಟನೆ ಮಾಡ್ತಿದ್ರು…” ರೈತರಿಗೆ ಅವಮಾನ ಮಾಡಿದ ಕಾರಣಕ್ಕಾಗಿ ಪ್ರಚೋದನೆಗೊಂಡು ನಾನು ಕಪಾಳಮೋಕ್ಷ ಮಾಡಿದ್ದೇನೆ ಎಂದು ಹೇಳಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಧ್ಯ ಕುಲ್ವಿಂದರ್ ಕೌರ್ ಅವರನ್ನು ತನ್ನ ಹುದ್ದೆಯಿಂದ ತೆಗೆದು ಹಾಕಲಾಗಿದೆ ಮತ್ತು ಇಂದು ಪೋಲಿಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಆದರೆ ಅನೇಕರು ಈ ಘಟನೆಯನ್ನು ವಿರೋಧಿಸಿದರೆ, ಇನ್ನೂ ಅನೇಕರು ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸುತ್ತಿದ್ದಾರೆ. “ಕಂಗನಾ ಎಂಬ ಬೆಡಗಿ MP ಚುನಾವಣೆಯಲ್ಲಿ ಆಯ್ಕೆಯಾಗಿದ್ದು “ಕಮಲ” ಗುರುತಿನಲ್ಲಿ ಆದರೆ ನಿನ್ನೆ ಅವಳ ಕೆನ್ನೆಯ ಮೇಲೆ ಬಿದ್ದಿದ್ದು ”ಹಸ್ತದ ” ಗುರುತು.” ಎಂದು ಅನೇಕರು ಕಂಗಾನ ಅವರ ಕೆನ್ನೆಯಲ್ಲಿ ಮೂಡಿದ ಬಾಸುಂಡೆಯ(ಕಪಾಳಮೋಕ್ಷದ ಗುರುತು) ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್: ವೈರಲ್ ಪೋಟೋ ನೂತನ ಸಂಸದೆ ಕಂಗನಾ ರಣಾವತ್ ಅವರ ಕೆನ್ನೆಯಲ್ಲಿ ಮೂಡಿದ ಕಪಾಳಮೋಕ್ಷದ ಗುರುತಾಗಿರದೆ, ಸೊಳ್ಳೆ ಸ್ಪ್ರೇಗಾಗಿ ಮಾಡಿದ ಜಾಹಿರಾತಿನ ಪೋಟೋವಾಗಿದೆ.
ನಾವು ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ, ಅದು ಕಪಾಳಮೋಕ್ಷದ ಗುರುತಿನ ಮಹಿಳೆಯ ಮುಖದ ಜೂಮ್-ಔಟ್ ಫೋಟೋವನ್ನು ಒಳಗೊಂಡಿರುವ ಜಾಹೀರಾತುಗಳು ಲಭ್ಯವಾಗಿದ್ದು, “ಸ್ಲ್ಯಾಪ್ ಟು” ಶೀರ್ಷಿಕೆಯ ಈ ವೃತ್ತಿಪರ ಅಭಿಯಾನವನ್ನು ಮೇ 30, 2006 ರಂದು ಪ್ರಕಟಿಸಲಾಗಿದೆ,” ಇದು ಅಂತರರಾಷ್ಟ್ರೀಯ ಕೀಟನಾಶಕ ಬ್ರ್ಯಾಂಡ್ ಬೇಗಾನ್‌ನಿಂದ ಸೊಳ್ಳೆ ಕೊಲ್ಲುವ ಸ್ಪ್ರೇಗಾಗಿ ಚಿತ್ರಿಸಿರುವ ಜಾಹಿರಾತು ಎಂದು ತಿಳಿದು ಬಂದಿದೆ.
Ads of the World ಮಾಧ್ಯಮದಲ್ಲಿ ಈ ಚಿತ್ರವು ಲಭ್ಯವಿದ್ದು ” ಈ ಮುದ್ರಣ ಮಾಧ್ಯಮದ ಪ್ರಚಾರವು ಔಷಧೀಯ ಉದ್ಯಮಕ್ಕೆ ಸಂಬಂಧಿಸಿದೆ ಮತ್ತು 1 ಮಾಧ್ಯಮ ಆಸ್ತಿಯನ್ನು ಒಳಗೊಂಡಿದೆ. ಇದನ್ನು ಸುಮಾರು 18 ವರ್ಷಗಳ ಹಿಂದೆ ಸಲ್ಲಿಸಲಾಗಿದೆ.” ಎಂದು ಶೀರ್ಷಿಕೆ ನೀಡಲಾಗಿದೆ.
ಎರಡು ಚಿತ್ರಗಳ ಹೋಲಿಕೆ ಮಾಡಿದರೆ ಇದೇ ಫೋಟೋವನ್ನು ಜೂಮ್ ಮಾಡಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ ಎಂದು ತೋರಿಸುತ್ತದೆ.
ಹೆಚ್ಚಿನ ಹುಡುಕಾಟವು ಇದೇ ರೀತಿಯ ಫೋಟೋಗಳನ್ನು ಒಳಗೊಂಡಿರುವ ಜಾಹೀರಾತು ಪ್ರಚಾರದಲ್ಲಿ ಮೇ 31, 2006 ರ ದಿನಾಂಕದ ಈ coolmarketingthoughts.com ಬ್ಲಾಗ್ ಪೋಸ್ಟ್‌ಗೆ ನಮ್ಮನ್ನು ಕರೆದೊಯ್ದಿತು. “ನಮ್ಮಲ್ಲಿರುವ ಮಾಸೋಕಿಸ್ಟ್ ಅಲ್ಲದವರಿಗೆ ಬೇಗಾನ್ ಪರಿಹಾರವಾಗಿದೆ. ನೀವು ಹಾರುವ ಬೆದರಿಸುವವರನ್ನು ನೋವುರಹಿತವಾಗಿ ತೊಡೆದುಹಾಕಲು ಬಯಸಿದರೆ ಮತ್ತು ನೀವು ಕಪಾಳಮೋಕ್ಷದಿಂದ ಆಯಾಸಗೊಂಡಿದ್ದರೆ, ನೀವು ಸ್ಪ್ರೇ ಕ್ಯಾನ್ ಅನ್ನು ಪ್ರಯತ್ನಿಸಬೇಕು” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
ಆದ್ದರಿಂದ ಕಂಗನಾ ರಣಾವತ್ ಕೆನ್ನೆಯಲ್ಲಿ ಮೂಡಿದ ಹಸ್ತದ ಗುರುತು ಎಂದು ಹಂಚಿಕೊಳ್ಳುತ್ತಿರುವ ಚಿತ್ರ ಸೊಳ್ಳೆ ಸ್ಪ್ರೇಗಾಗಿ ಮಾಡಿದ ಜಾಹಿರಾತಿನ ಚಿತ್ರವಾಗಿದೆ.
ಇದನ್ನು ಓದಿ: ಈ ಬಾರಿ ಸಂಸತ್‌ಗೆ 98 ಮುಸ್ಲಿಂ ಸಂಸದರು ಪ್ರವೇಶಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ