Fact Check | ಉತ್ತರ ಪ್ರದೇಶದಲ್ಲಿ 2 ಮಕ್ಕಳ ಮಿತಿ ಕಾನೂನು ಜಾರಿಗೊಳಿಸಲಾಗಿದೆ ಎಂಬುದು ಸುಳ್ಳು.!

ಸಾಮಾಜಿಕ ಜಾಲತಾಣದಲ್ಲಿ ” ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಈ ಕಾಯ್ದೆಯಲ್ಲಿ ದಂಪತಿಗಳು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ. ಒಂದು ವೇಳೆ ಹಾಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದೇ ಆದಲ್ಲಿ ಆ ಕುಟುಂಬಕ್ಕೆ ಯಾವುದೇ ರೀತಿಯಾದ ಸರ್ಕಾರಿ ಯೋಜನೆಗಳು ಸಿಗುವುದಿಲ್ಲ. ಆ ಕುಟುಂಬದಿಂದ ಭವಿಷ್ಯದಲ್ಲಿ ಯಾರಾದರು ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸಿದರು ಅದು ಸಾಧ್ಯವಾಗುದಿಲ್ಲ.” ಎಂಬ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್‌ ನೋಡಿದ ಬಹುತೇಕರು ಇದು ನಿಜವಿರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿ ಈ ರೀತಿಯಾದ ಕಾನೂನು ಉತ್ತರ ಪ್ರದೇಶದಲ್ಲಿ ಜಾರಿಯಾಗಿದ್ದು ನಿಜವೇ ಆಗಿದ್ದರೆ, ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಕೂಡ ನಿರ್ಧಾರವನ್ನು ಪ್ರಕಟಿಸಬೇಕಾಗಿತ್ತು ಆದರೆ, ಇದುವರೆಗೂ ಕೂಡ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡ ಹಾಗೆ ಕಂಡು ಬಂದಿಲ್ಲ ಹಾಗಾಗಿ ಈ ಪೋಸ್ಟ್‌ ಎಷ್ಟರ ಮಟ್ಟಿಗೆ ಸತ್ಯದಿಂದ ಕೂಡಿದೆ ಎಂಬುದನ್ನು ನಾವು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ 11 ಜುಲೈ 2021ರಲ್ಲಿ “ಜನಸಂಖ್ಯಾ ನಿಯಂತ್ರಣ ಸೂತ್ರವನ್ನು ಸೃಷ್ಟಿಸಿದ ಯೋಗಿ!” ಎಂಬ ಶೀರ್ಷಿಕೆಯ ಅಡಿಯಲ್ಲಿ ರೀ ಪಬ್ಲಿಕ್‌ ಭಾರತ್‌ ಸುದ್ದಿ ವಾಹಿನಿಯು ವರದಿಯೊಂದನ್ನು ಪ್ರಸಾರ ಮಾಡಿರುವುದು ಕಂಡು ಬಂದಿದೆ. ಇದು 34 ನಿಮಿಷ 20 ಸೆಕೆಂಡ್‌ನ ವಿಡಿಯೋವಾಗಿದ್ದು, ಈ ವಿಡಿಯೋದ 16 ನಿಮಿಷ 24 ಸೆಕೆಂಡ್‌ನಲ್ಲಿ ವೈರಲ್‌ ಪೋಸ್ಟ್‌ನಲ್ಲಿ ಅಂಶಗಳನ್ನೇ ವರದಿ ಮಾಡಿರುವುದು ಕೂಡ ಕಂಡು  ಬಂದಿದೆ.

ಇದೇ ವಿಡಿಯೋದ ಕ್ಲಿಪಿಂಗ್‌ಗಳನ್ನು ಬಳಸಿಕೊಂಡಿರುವ ಹಲವರು, “ಯೋಗಿ ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತಂದಿದ್ದಾರೆ. ಈ ಕಾನೂನು ಪಾಲಿಸದೆ ಹೋದರೆ ಅವರು ಸರ್ಕಾರದಿಂದ ಯಾವುದೇ ರೀತಿಯಾದ ಸೌಲಭ್ಯ ಸಿಗುವುದಿಲ್ಲ ಎಂದು ಹಂಚಿಕೊಳ್ಳಲಾಗುತ್ತಿದೆ.” ಹಾಗಾಗಿ ಈ ಜನಸಂಖ್ಯಾ ನಿಯಂತ್ರಣದ ಕುರಿತು ನಿಜಕ್ಕೂ  ಯೋಗಿ ಸರ್ಕಾರ ಇಂತಹದೊಂದು ಕಾನೂನನ್ನು ಜಾರಿಗೆ ತಂದಿದೆಯೇ ಎಂದು ನಾವು ಪರಿಶೀಲನೆ ನಡೆಸಿದೆವು.

ಹೀಗಾಗ ನಾವು ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಗಾಗಿ ಹುಡುಕಾಟ ನಡೆಸಿದೆವು ಮತ್ತು ಜುಲೈ 2021 ರಲ್ಲಿ ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗವು ಬಿಡುಗಡೆ ಮಾಡಿದ ಮಸೂದೆಯ ಪ್ರಸ್ತಾವಿತ ಕರಡು ಎಂದು ನಾವು ಕಂಡುಕೊಂಡಿದ್ದೇವೆ. ಈ ಕರಡು ಮಸೂದೆಯ ಪ್ರಕಾರ, “ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ ) ಬಿಲ್, 2021 , ಎರಡು ಮಕ್ಕಳ ಆದೇಶವನ್ನು ಅನುಸರಿಸುವ ದಂಪತಿಗಳಿಗೆ ಆರೋಗ್ಯ ರಕ್ಷಣೆ, ಸಬ್ಸಿಡಿಗಳು ಮತ್ತು ಇತರ ವಿಶೇಷ ಪ್ರಯೋಜನಗಳ ರೂಪದಲ್ಲಿ ಪ್ರೋತ್ಸಾಹವನ್ನು ನೀಡಲಾಗುತ್ತದೆ.” ಎಂದು ಉಲ್ಲೇಖವಾಗಿರುವುದು ನಿಜ ಆದರೆ, ಈ ಮಸೂದೆಯನ್ನು ಉತ್ತರ ಪ್ರದೇಶ ವಿಧಾನ ಸಭೆಯಲ್ಲಿ ಅಂಗಿಕರಿಸಿರುವ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ನಮಗೆ ಲಭ್ಯವಾಗಿಲ್ಲ.

ಇನ್ನು ವಾಸ್ತವದಲ್ಲಿ ದೇಶದ ಫಲವತ್ತತೆ ದರವು ಕ್ಷೀಣಿಸುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದ ಒಟ್ಟು ಫಲವತ್ತತೆ ದರವು 1998 ರಲ್ಲಿ 4.1 ರಿಂದ 2015-16 ರಲ್ಲಿ 2.7 ಕ್ಕೆ ಇಳಿದಿದೆ. ಯೋಗಿ ಆದಿತ್ಯನಾಥ್‌ ಸರ್ಕಾರವು ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಬಿಲ್‌-2021ನ್ನು ಪರಿಚಯಿಸುವ ವೇಳೆ ಈ ಅಂಶ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಕೂಡ ಹುಟ್ಟು ಹಾಕಿತ್ತು. ಇದಾದ ಬಳಿಕ ಈ ಯೋಜನೆಯನ್ನು ಜಾರಿಗೆ ತಂದ ಕುರಿತು ಯಾವುದೇ ಅಧಿಕೃತ ಮಾಧ್ಯಮ ವರದಿಗಳು ಇನ್ನೂ ಲಭ್ಯವಾಗಿಲ್ಲ

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಬಿಲ್‌ 2021 ಮಂಡನೆಯಾಗಿರುವುದಕ್ಕೆ ಯಾವುದೇ ರೀತಿಯಾದ ಅಧಿಕೃತ ವರದಿಗಳು ಕಂಡು ಬಂದಿಲ್ಲ. ಹೀಗಾಗಿ ಅಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳು ಸರ್ಕಾರಿ ಸವಲತ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ.


ಇದನ್ನೂ ಓದಿ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು ಚಿನ್ನದಲ್ಲಿ ಮಾಡಿದ ಉಡುಪುಗಳನ್ನು ಧರಿಸಿರುವ ಚಿತ್ರವು AI- ರಚಿತವಾಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *