Fact Check: ತಮಿಳುನಾಡಿನ ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅಳುತ್ತಿರುವುದು ಸೋಲಿನ ಕಾರಣಕ್ಕಾಗಿ ಅಲ್ಲ

ಅಣ್ಣಾಮಲೈ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಸಹ ತಮಿಳುನಾಡಿನಲ್ಲಿ ಬಿಜೆಪಿ ತನ್ನ ಚುನಾವಣಾ ಖಾತೆಯನ್ನು ತೆರೆಯಲು ವಿಫಲವಾದ ಕಾರಣ, ಪಕ್ಷದ ರಾಜ್ಯ ಮುಖ್ಯಸ್ಥ ಅಣ್ಣಾಮಲೈ ಅವರು ಭಾಷಣದ ವೇಳೆ ಭಾವುಕರಾಗಿ ಅಳುತ್ತಿದ್ದಾರೆ ಎಂಬ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅನೇಕ ಎಕ್ಸ್ ಬಳಕೆದಾರರು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರ 33-ಸೆಕೆಂಡ್-ಉದ್ದದ ತುಣುಕನ್ನು ಹಂಚಿಕೊಂಡಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಪಕ್ಷದ ಹೀನಾಯ ಸೋಲನ್ನು ಪ್ರದರ್ಶಿಸಲು ಸಹ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಮತ್ತು ಕೆಲವರು ಅಣ್ಣಾಮಲೈ ಅವರನ್ನು ಆಯ್ಕೆ ಮಾಡದ ಕೊಯಮತ್ತೂರು ಕ್ಷೇತ್ರದ ಜನರನ್ನು ಜರಿಯುತ್ತಿದ್ದಾರೆ.

ಈ ವೈರಲ್ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವವರು “ಅವರು (ಅಣ್ಣಾಮಲೈ) 3 ವರ್ಷಗಳ ಕಾಲ 24×7 ಕೆಲಸ ಮಾಡಿದ್ದಾರೆ. ತಮಿಳುನಾಡಿನ ಪ್ರತಿಯೊಂದು ಭಾಗಕ್ಕೂ ತಲುಪಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಯ ಮತ ಹಂಚಿಕೆ ಈಗ 19%  ಇದೆ ಮತ್ತು ಅವರು ಅಧಿಕಾರ ವಹಿಸಿಕೊಂಡಾಗ ಅದು ಕೇವಲ 8% ಇತ್ತು. ಅವನ ಕಣ್ಣುಗಳಲ್ಲಿನ ಕಣ್ಣೀರಿಗೆ ಬಹಳಷ್ಟು ಅರ್ಥ ಇದೆ. ಆದರೆ ಅವನು ಹಿಂತಿರುಗುತ್ತಾನೆ. ಅಣ್ಣಾಮಲೈ ತಮಿಳುನಾಡಿನ ಭವಿಷ್ಯ… ತಮಿಳುನಾಡಿನ ಬಿಜೆಪಿ ಸೋಲಿನ ಫಲಿತಾಂಶದ ನಂತರ ಅಣ್ಣಾಮಲೈ ಅವರು ಕುಸಿದುಹೋದರು” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:  ಈ ಕುರಿತು ಅಣ್ಣಾಮಲೈ ಅವರ ವೈರಲ್ ವಿಡಿಯೋ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದಾಗ ಏಪ್ರಿಲ್ 17, 2024 ರಂದು ತಮಿಳು ಸುದ್ದಿವಾಹಿನಿ ಪುತಿಯಾ ತಲೈಮುರೈ ಟಿವಿಯ ಇನ್‌ಸ್ಟಾಗ್ರಾಮ್ ಪೋಸ್ಟ್‌ ಒಂದು ದೊರಕಿದೆ. ಇದರಲ್ಲಿ ವೈರಲ್ ವಿಡಿಯೋವನ್ನು ಅಣ್ಣಾಮಲೈ ಹಿರಿಯರೊಂದಿಗೆ ಮಾತನಾಡುವಾಗ ಭಾವುಕರಾಗಿದ್ದಾರೆ ಎಂದು ವರದಿ ಮಾಡಿದೆ.

ಏಪ್ರಿಲ್ 17, 2024 ರಂದು ಲೈವ್ ಸ್ಟ್ರೀಮ್ ಮಾಡಿದ ಸುದ್ದಿವಾಹಿನಿ ದಿನಮಲರ್‌ನ ವೀಡಿಯೊದಲ್ಲಿ ನಾವು ವೈರಲ್ ಕ್ಲಿಪ್ ಅನ್ನು ಕಂಡುಕೊಂಡಿದ್ದು, ಅದರಲ್ಲಿ ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ವೃದ್ಧರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.

ಏಪ್ರಿಲ್ 2024 ರ ಏಷ್ಯಾನೆಟ್ ನ್ಯೂಸ್ ವರದಿಯು ಕೊಯಮತ್ತೂರಿನಲ್ಲಿ ಹಿರಿಯ ನಾಗರಿಕರನ್ನು ಉದ್ದೇಶಿಸಿ ಮಾತನಾಡುವಾಗ ತಮಿಳು ಬಿಜೆಪಿ ಮುಖ್ಯಸ್ಥರು ಭಾವೋದ್ವೇಗಕ್ಕೆ ಒಳಗಾದರು ಎಂದು ದೃಢಪಡಿಸಿದೆ. ವ್ಯಾಪಕವಾಗಿ ಪ್ರಸಾರವಾದ ತುಣುಕನ್ನು ಏಪ್ರಿಲ್ 2024 ರಲ್ಲಿ ನ್ಯೂಸ್ 18 ತಮಿಳುನಾಡಿನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಅಣ್ಣಾಮಲೈ ಅವರು ಏಪ್ರಿಲ್ 17, 2024 ರಂದು ತಮ್ಮ ಅಧಿಕೃತ X ಖಾತೆಯಲ್ಲಿ ಈವೆಂಟ್‌ನ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ಡಿಎಂಕೆಯ ಗಣಪತಿ ರಾಜ್‌ಕುಮಾರ್ ಪಿ ವಿರುದ್ಧ 1,18,068 ಮತಗಳ ಅಂತರದಿಂದ ಸೋತಿದ್ದಾರೆ.

ಆದ್ದರಿಂದ ತಮಿಳುನಾಡಿನ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಸ್ಥಾನವನ್ನು ಗೆಲ್ಲಲು ವಿಫಲವಾದ ನಂತರ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಭಾವುಕರಾಗಿದ್ದಾರೆ ಎಂದು ತೋರಿಸಲು ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿ: ಉತ್ತರ ಪ್ರದೇಶ ಜನಸಂಖ್ಯಾ ನಿಯಂತ್ರಣ ಮಸೂದೆಯ ಕುರಿತು ತಿರುಚಿದ ಸುದ್ದಿ ವೈರಲ್‌..!


ವಿಡಿಯೋ ನೋಡಿ: ಪಾಕಿಸ್ತಾನ ಸೈನಿಕರು ಹಿಂದೂ ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *