ಸಿಸಿಟಿವಿಯಲ್ಲಿ ವ್ಯಕ್ತಿಯೊಬ್ಬನನ್ನು ಹಣೆಗೆ ಶೂಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೀರತ್‌ನಲ್ಲಿ ಮುಸ್ಲಿಂನೊಬ್ಬ ತನ್ನ ಮಕ್ಕಳ ಎದುರೇ ಹಿಂದೂ ವ್ಯಕ್ತಿಯನ್ನು ಕೊಂದಿದ್ದಾನೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಇದು ಕೋಮು ಬಣ್ಣವನ್ನು ಪಡೆದುಕೊಂಡಿದ್ದು ಹಲವರು ಕೋಮು ದ್ವೇಷ ಹರಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಆದರೆ ವಾಸ್ತವದಲ್ಲಿ ಘಟನೆಗೆ ಮೂಲ ಕಾರಣದ ಕುರಿತು ವೈರಲ್ ಪೋಸ್ಟ್‌ನಲ್ಲಿ ಬರೆಯಲಾಗಿಲ್ಲ. ಮತ್ತು ಹತನಾದವನ ಹಿನ್ನೆಲೆ ಏನು ಎಂಬುದು ಕೂಡ ಎಲ್ಲಿಯೂ ಉಲ್ಲೇಖವಾಗದೆ ಇರುವುದು ಹಲವು ಅನುಮಾನಗಳನ್ನು ಮೂಡಿಸಿದೆ. ಹಾಗಾಗಿ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು ಇದಕ್ಕಾಗಿ, ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಹಲವು ವರದಿಗಳು ಕಂಡು ಬಂದಿದ್ದು, ಈ ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೀರತ್‌ನ ಲೋಹಿಯಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೈದಿ ಫಾರ್ಮ್‌ನ ಬಟ್ಟೆ ವ್ಯಾಪಾರಿ ಅರ್ಷದ್ ತನ್ನ ಇಬ್ಬರು ಮಕ್ಕಳ ಮುಂದೆ ಕೊಲ್ಲಲ್ಪಟ್ಟರು. ಕ್ರಿಮಿನಲ್ ಇತಿಹಾಸ ಹೊಂದಿರುವ ಸಂತ್ರಸ್ಥನನ್ನು ಇನ್ನೊಬ್ಬ ಕ್ರಿಮಿನಲ್ ಗುಂಡಿಕ್ಕಿ ಕೊಂದಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಪೊಲೀಸರು ಆರೋಪಿಯನ್ನು ಬಿಲಾಲ್ ಎಂದು ಗುರುತಿಸಿದ್ದು, ಕ್ರಿಮಿನಲ್ ದಾಖಲೆಯೂ ಇದೆ. ಅರ್ಷದ್ ಮತ್ತು ಬಿಲಾಲ್ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಬಿಲಾಲ್ ಅರ್ಷದ್‌ಗೆ ಗುಂಡು ಹಾರಿಸಿದ್ದಾನೆ. ಈ ಘಟನೆಯು ಹಳೆಯ ವೈಷಮ್ಯದ ಹಿನ್ನೆಲೆ ನಡೆದಿದೆ.. ಈ ಇಬ್ಬರೂ ಕೂಡ ಒಂದೇ ಮತಕ್ಕೆ ಸೇರಿದವರು ಎಂಬುದು ಅವರ ಹೆಸರುಗಳು ಕೂಡ ಸೂಚಿಸುತ್ತಿವೆ
ಇನ್ನ, ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಮೀರತ್ ಪೊಲೀಸರು ವಿಶ್ವಾಸ್ ಎಂಬ ಸುದ್ದಿ ಸಂಸ್ಥೆಗೆ ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಹತನಾದ ಸಂತ್ರಸ್ಥ ಮತ್ತು ಆರೋಪಿ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು ಮತ್ತು ಅಪರಾಧ ಚಟುವಟಿಕೆಯ ಇತಿಹಾಸವನ್ನು ಕೂಡ ಹೊಂದಿದ್ದಾರೆ ಎಂದು ಸುದ್ದಿ ಸಂಸ್ಥೆಗೆ ಮಾಹಿನಿ ನೀಡಿದ್ದಾರೆ. ಬಳಿಕ ಇದೇ ಮೀರತ್ ಪೋಲೀಸರು ತಮ್ಮ X ಪೋಸ್ಟ್‌ನಲ್ಲಿ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.
— MEERUT POLICE (@meerutpolice) June 5, 2024
ಒಟ್ಟಾರೆಯಾಗಿ ಹೇಳುವುದಾದರೆ, ತಂದೆಯನ್ನು ತನ್ನ ಮಕ್ಕಳ ಮುಂದೆ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಮತ್ತು ಈ ಪ್ರಕರಣದಲ್ಲಿ ಇಬ್ಬರೂ ಒಂದೇ ಸಮುದಾಯದವರು ಎಂಬುದು ಖಚಿತವಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : ತಮಿಳುನಾಡಿನ ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅಳುತ್ತಿರುವುದು ಸೋಲಿನ ಕಾರಣಕ್ಕಾಗಿ ಅಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ