Fact Check | ಗೂಳಿಹಟ್ಟಿ ಶೇಖರ್‌ ತಮ್ಮ ಆರೋಪ ನಿರಾಧಾರ ಎಂದು ಒಪ್ಪಿಕೊಂಡಿದ್ದಾರೆ ಎಂಬುದು ಸುಳ್ಳು!

ಸಾಮಾಜಿಕ ಜಾಲತಾಣದಲ್ಲಿ ಗೂಳಿಹಟ್ಟಿ ಶೇಖರ್‌ ಅವರು ಕೋಟ ಶ್ರೀನಿವಾಸ್‌ ಪೂಜಾರಿಯವರ ಕ್ಷಮೆ ಕೇಳಿದ್ದಾರೆ ಮತ್ತು  ಭೋವಿ ಸಮಾಜದ ಹಣವನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಾವು ಮಾಡಿದ ಆರೋಪ ನಿರಾಧರವೆಂದು ಒಪ್ಪಿಕೊಂಡಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸಿದ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಇನ್ನು ಕೆಲವೊಂದು ಪೋಸ್ಟ್‌ಗಳಲ್ಲಿ ಗೂಳಿಹಟ್ಟಿ ಶೇಖರ್‌ ಅವರು ಸ್ವತಃ ಕ್ಷಮೆ ಕೇಳಿರುವ ಆಡಿಯೋ ಕೂಡ ವೈರಲ್‌ ಆಗುತ್ತಿದೆ. ಹಾಗಾಗಿ ಇದನ್ನು ನಿಜವೆಂದು ನಂಬಿ ಹಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಗೂಳಿಹಟ್ಟಿ ಶೇಖರ್‌ ಕಾಂಗ್ರೆಸ್‌ ಮುಖಂಡ ಎಂದು ಬಿಂಬಿಸಿರುವ ಪೋಸ್ಟರ್‌
ಗೂಳಿಹಟ್ಟಿ ಶೇಖರ್‌ ಕಾಂಗ್ರೆಸ್‌ ಮುಖಂಡ ಎಂದು ಬಿಂಬಿಸಿರುವ ಪೋಸ್ಟರ್‌

ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಗೂಳಿಹಟ್ಟಿ ಶೇಖರ್‌ ಅವರು ಕ್ಷಮೆ ಕೇಳಿದ ಸಾಲುಗಳನ್ನು ಉಲ್ಲೇಖಿಸಿ ಪೋಸ್ಟರ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಆ ಪೋಸ್ಟರ್‌ನಲ್ಲಿ ಗೂಳಿಹಟ್ಟಿ ಶೇಖರ್‌ ಅವರನ್ನು ಕಾಂಗ್ರೆಸ್‌ ಮುಖಂಡ ಎಂದು ಉಲ್ಲೇಖಿಸಲಾಗಿದೆ. ಆ ಮೂಲಕ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ವೈರಲ್‌ ಆಗುತ್ತಿರುವ ಪೋಸ್ಟರ್‌ ಮತ್ತು ವಿಡಿಯೋದಲ್ಲಿನ ಎಲ್ಲಾ ಅಂಶಗಳು ನಿಜವೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ..

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಕನ್ನಡ ಪ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ. “ಭೋವಿ ನಿಗಮದ ಅವ್ಯವಹಾರ ತನಿಖೆಯಾಗಲಿ: ಮತ್ತೊಂದು ಆಡಿಯೋ ಹರಿಬಿಟ್ಟ ಗೂಳಿಹಟ್ಟಿ ಶೇಖರ್‌” ಎಂಬ ಶಿರ್ಷಿಕೆಯಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಕಟ ಮಾಡಿದ ವರದಿಯೊಂದು ಕಂಡು ಬಂದಿದೆ.

ಆ ವರದಿಯಲ್ಲಿ “ನಾನು ಯಾರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿಲ್ಲ. ನಿಗಮದಲ್ಲಿ ಭೋವಿ ಸಮಾಜಕ್ಕೆ ಆಗಿರುವ ಅನ್ಯಾಯ ತಿಳಿಸುವ ಕೆಲಸ ಮಾಡಿದ್ದೇನೆ. ನನ್ನ ಬಗ್ಗೆ ನಮ್ಮ ಸಮುದಾಯದ ಜನ ತಪ್ಪು ತಿಳಿಯುವುದು ಬೇಡ. ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದಾರೆ.” ಎಂಬ ಅಂಶವನ್ನು ಉಲ್ಲೇಖಿಸಲಾಗಿತ್ತು. ಆದರೆ ಅದರಲ್ಲಿ ಎಲ್ಲಿಯೂ ಗೂಳಿಹಟ್ಟಿ ಶೇಖರ್‌ ಅವರು ತಮ್ಮ ಆರೋಪ ನಿರಾಧಾರ ಎಂದಿದ್ದಾರೆ ಎಂಬ ಅಂಶವೇ ಇಲ್ಲ.

ಈ ಕುರಿತು ಇನ್ನೂ ಹಲವು ವರದಿಗಳನ್ನು ಪರಿಶೀಲನೆ ನಡೆಸಿದಾಗ. ಅಲ್ಲಿಯೂ ಯಾವುದೇ ರೀತಿಯಾದ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಸ್ವತಃ ಗೂಳಿಹಟ್ಟಿ ಶೇಖರ್‌ ಅವರನ್ನೇ ಸಂಪರ್ಕಿಸಿತು. ಈ ವೇಳೆ ಮಾತನಾಡಿದ ಅವರು. “ನಾನು ಕ್ಷಮೆ ಕೇಳಿರುವುದು ನಿಜ. ಅದರಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರ ಆಸ್ತಿಯ ಬಗ್ಗೆ ತಪ್ಪು ಮಾಹಿತಿಯನ್ನು ನಾನು ಪಡೆದಿದ್ದೆ. ಹಾಗಾಗಿ ಅಂಕಿ ಅಂಶದಲ್ಲಿ ಸಣ್ಣ ತಪ್ಪು ನಡೆದಿದೆ. ಆದರೆ ನಾನು ಇಲ್ಲಿ ಯಾರ ವಿರುದ್ಧವೂ ಆರೋಪ ಮಾಡೋದಿಲ್ಲ. ಆದರೆ ಭೋವಿ ಸಾಮಾಜಕ್ಕೆ ಅನ್ಯಾಯ ನಡೆದಿದೆ. ಭೋವಿ ಸಮಾಜಕ್ಕೆ ಸೇರಬೇಕಾಗಿದ್ದ ಹಣ ಅನಾಮಧೇಯ ಖಾತೆಗಳಿಗೆ ಹೋಗಿದೆ. ಈ ವೇಳೆ ಮಂತ್ರಿಯಾಗಿದ್ದವರು ಯಾರು?, ಅವರು ಈ ಬಗ್ಗೆ ಗಮನ ಹರಿಸಬೇಕಿತ್ತಲ್ಲವೆ” ಎಂದು ಪ್ರಶ್ನಿಸಿದ್ದೇನೆ ಎಂದಿದ್ದಾರೆ.

ಇನ್ನೂ ಮುಂದಿವರೆದು ಮಾತನಾಡಿದ ಅವರು, ” ನಾನು ನನ್ನ ಆರೋಪವನ್ನು ನಿರಾಧಾರ ಎಂದಿಲ್ಲ. ಆದರೆ ನನಗೆ ಲಭ್ಯವಾದ ಒಂದು ಸಣ್ಣ ತಪ್ಪು ಮಾಹಿತಿಯನ್ನು ನೀಡಿದ್ದೇನೆ. ಇದಕ್ಕಾಗಿ ಹಲವರು ಬೇಸರ ಮಾಡಿಕೊಂಡಿದ್ದರು, ಅದಕ್ಕಾಗಿ ನಾನು ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿ ಕ್ಷಮೆ ಕೇಳಿದ್ದೇನೆ. ಅದನ್ನು  ಹೊರತು ಪಡಿಸಿ ನನ್ನ ಆರೋಪ ಸ್ಪಷ್ಟವಾಗಿ ಮತ್ತು ನಾನು ಯಾರ ವಿರುದ್ಧವೂ ಆರೋಪ ಮಾಡುತ್ತಿಲ್ಲ. ಹಾಗೆಯೇ ವೈರಲ್‌ ಪೋಸ್ಟರ್‌ನಲ್ಲಿ ನನ್ನನ್ನು ಕಾಂಗ್ರೆಸ್‌ ಮುಖಂಡ ಎಂದು ಉಲ್ಲೇಖಿಸಿದ್ದಾರೆ. ಆದರೆ ನಾನು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿಲ್ಲ. ನಾನು ಸ್ವತಂತ್ರವಾಗಿಯೇ ಜನ ಸೇವೆ ಮಾಡುತ್ತಿದ್ದೇನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಅವರಿಗೆ ಬಹಿರಂಗ ಬೆಂಬಲವನ್ನು ಕೂಡ ನಾನು ನೀಡಿದ್ದೇನೆ” ಎಂದಿದ್ದಾರೆ.

ಒಟ್ಟಾರೆಯಾಗಿ ಗೂಳಿಹಟ್ಟಿ ಶೇಖರ್‌ ಅವರು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡಕ್ಕೆ ನೀಡಿದ ಮಾಹಿತಿಯ ಪ್ರಕಾರ ಅವರು ತಮ್ಮ ಆರೋಪವನ್ನು ನಿರಾಧಾರ ಎಂದು ಹೇಳಿಲ್ಲ. ಹಾಗೂ ಅವರು ಕಾಂಗ್ರೆಸ್‌ ಮುಖಂಡ ಎಂಬುದು ಕೂಡ ಸಂಪೂರ್ಣವಾಗಿ ಸುಳ್ಳಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿ.


ಇದನ್ನೂ ಓದಿ : ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರ ಚಿತ್ರವನ್ನು ಯುಕೆಯಲ್ಲಿ £ 50 ನೋಟಿನಲ್ಲಿ ಮುದ್ರಿಸಲಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *