Fact Check | ಪ್ರಾಂಶುಪಾಲೆಯರ ಜಗಳದ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣದಲ್ಲಿ ” ಕರ್ನಾಟಕದ ಸರ್ಕಾರಿ ಶಾಲೆಯೊಂದಕ್ಕೆ ಪ್ರಾಂಶುಪಾಲರಾಗಿ ಹಿಂದೂ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ, ಆದರೆ ಶಾಲೆಯ ಕ್ರಿಶ್ಚಿಯನ್ ಸಿಬ್ಬಂದಿ ಅವರನ್ನು ಪ್ರಾಂಶುಪಾಲರ ಕುರ್ಚಿಯಲ್ಲಿ ಕುಳಿತುಕೊಳ್ಳಲು ಬಿಡಲಿಲ್ಲ. ಬದಲಿಗೆ ಕ್ರೈಸ್ತ ಮಹಿಳೆಯನ್ನು ಆಕೆಯ ಜಾಗದಲ್ಲಿ ಕೂರಿಸಲಾಯಿತು. ವೀಡಿಯೋದಲ್ಲಿ, ಪಕ್ಕದಲ್ಲಿ ನಿಂತಿದ್ದ ಕೆಲವರು ಮಹಿಳೆಯನ್ನು ಬಲವಂತವಾಗಿ ಕುರ್ಚಿಯಿಂದ ಮೇಲಕ್ಕೆತ್ತುವುದನ್ನು ನಾವು ನೋಡಬಹುದು, ನಂತರ ಇನ್ನೊಬ್ಬ ಕ್ರಿಶ್ಚಿಯನ್‌ ಮಹಿಳೆಯನ್ನು ಪ್ರಾಂಶುಪಾಲೆಯ ಕುರ್ಚಿಯ ಮೇಲೆ ಕೂರಿಸಿ ಚಪ್ಪಾಳೆ ಹೊಡೆಯಲು ಇವರು ಪ್ರಾರಂಭಿಸಿದರು.” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವೈರಲ್‌ ವಿಡಿಯೋದಲ್ಲಿ ಮಹಿಳೆಯರು ಕುರ್ಚಿಯಲ್ಲಿ ಕೂರುವುದಕ್ಕೆ ಜಗಳ ಮಾಡುವುದನ್ನು ಗಮನಿಸಬಹುದು. ಹಾಗೆಯೇ ಈ ವಿಡಿಯೋ ಕೂಡ ಶಾಲೆಯೊಂದರ ವಾತಾವರಣವನ್ನು ಹೊಂದಿರುವುದರಿಂದ. ಇದು ಪ್ರಾಂಶುಪಾಲರ ಗಲಾಟೆ ಎಂದು ಉಲ್ಲೇಖಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ಹಿಂದೂ ಮಹಿಳೆ ಪ್ರಾಂಶುಪಾಲೆಯಾಗಿ ಆಯ್ಕೆಯಾದರೂ ಕ್ರೈಸ್ತ ಪ್ರಾಂಶುಪಾಲೆ ಆಕೆಗೆ ಕುರ್ಚಿ ಬಿಟ್ಟು ಕೊಡಲಿಲ್ಲ ಎಂದು ಬರಹಗಳು ಕಂಡು ಬಂದಿದೆ. ಇದನ್ನು ಬಹುತೇಖರು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವೈರಲ್‌ ವಿಡಿಯೋ ಎಷ್ಟು ನಿಜ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ವೈರಲ್‌ ಪೋಸ್ಟ್‌ನ ಆರ್ಕೈವ್‌ ಲಿಂಕ್‌ ಇಲ್ಲಿ ನೋಡಬಹುದು
                                                                 ವೈರಲ್‌ ಪೋಸ್ಟ್‌ನ ಆರ್ಕೈವ್‌ ಅನ್ನು ಇಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 6 ಜುಲೈ 2024 ರಂದು ‘NDTV‘ ಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೈರಲ್ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಒಳಗೊಂಡ ಸುದ್ದಿಯೊಂದು ಕಂಡು ಬಂದಿದೆ.

ಈ ವರದಿಯ ಪ್ರಕಾರ ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಪ್ರಯಾಗರಾಜ್‌ನಲ್ಲಿರುವ ಬಿಷಪ್ ಜಾನ್ಸನ್ ಬಾಲಕಿಯರ ಶಾಲೆಯಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರಾಂಶುಪಾಲರನ್ನು ಬದಲಾವಣೆ ನಡೆಸುವ ಸಂದರ್ಭದಲ್ಲಿ ಈ ಜಟಾಪಟಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೇ ಆಧಾರವಾಗಿ ಇರಿಸಿಕೊಂಡು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಬೇರೆ ಬೇರೆ ಮಾಧ್ಯಮಗಳ ಹಲವಾರು ವರದಿಗಳು ಪತ್ತೆಯಾಗಿವೆ.

ಈ ಎಲ್ಲಾ ವರದಿಗಳಲ್ಲಿ ಉಲ್ಲೇಖಿಸಿರುವಂತೆ ಈ ಘಟನೆಯಲ್ಲಿ ಯಾವುದೇ ಕೋಮುವಾದದ ಆಯಾಮವಿಲ್ಲ. ತೆಗೆದುಹಾಕಲಾದ ಪ್ರಿನ್ಸಿಪಾಲ್ ಮತ್ತು ಹೊಸ ಪ್ರಿನ್ಸಿಪಾಲ್ ಇಬ್ಬರೂ ಕ್ರಿಶ್ಚಿಯನ್ನರು. ವರದಿಗಳ ಪ್ರಕಾರ, ತನ್ನ ಸ್ಥಾನದಿಂದ ಬಲವಂತವಾಗಿ ಕೆಳಗಿಳಿದ ಮಹಿಳೆ ಪಾರುಲ್ ಸೊಲೊಮನ್. UPPSC ಯ RO-ARO ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಫೆಬ್ರವರಿ 2024 ರಲ್ಲಿ ಅವರನ್ನು ಪ್ರಿನ್ಸಿಪಾಲ್ ಹುದ್ದೆಯಿಂದ ತೆಗೆದುಹಾಕಲಾಯಿತು. ವಜಾಗೊಳಿಸಿದ ನಂತರ, ಶೆರ್ಲಿನ್ ಮಾಸ್ಸೆ ಅವರನ್ನು ಹೊಸ ಪ್ರಿನ್ಸಿಪಾಲ್ ಆಗಿ ನೇಮಿಸಲಾಯಿತು

ಇಷ್ಟಾದರೂ, ಮಾಸ್ಸಿ ಅಧಿಕಾರ ವಹಿಸಿಕೊಳ್ಳಲು ಬಂದಾಗ, ಪಾರುಲ್ ಸೊಲೊಮನ್ ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿದರು ಮತ್ತು ಪ್ರಾಂಶುಪಾಲರ ಸ್ಥಾನವನ್ನು ಖಾಲಿ ಮಾಡುವುದನ್ನು ವಿರೋಧಿಸಿದರು, ಇದು ವೀಡಿಯೊದಲ್ಲಿ ಕಂಡುಬರುವಂತೆ ಅವರ ಚೇಂಬರ್‌ನಲ್ಲಿ ಗದ್ದಲಕ್ಕೆ ಕಾರಣವಾಯಿತು. ಇದೇ ವಿಡಿಯೋವನ್ನು ಬಳಸಿಕೊಂಡು ಕಿಡಿಗೇಡಿಗಳು ಈ ಘಟನೆ ಕರ್ನಾಟಕದಲ್ಲಿ ನಡೆದಿದೆ. ಹೊಸದಾಗಿ ಆಯ್ಕೆಯಾದ ಪ್ರಾಂಶುಪಾಲೆ ಹಿಂದೂ ಮಹಿಳೆ, ಹಳೆಯ ಪ್ರಾಂಶುಪಾಲೆ ಕ್ರೈಸ್ತ ಮಹಿಳೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಶಾಲೆಯೊಂದರಲ್ಲಿ ನಡೆದ ಘಟನೆಯ ವೀಡಿಯೊವನ್ನು ಕರ್ನಾಟಕಕ್ಕೆ ಲಿಂಕ್ ಮಾಡುವ ಮೂಲಕ ವೈರಲ್‌ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಂತಹ ವಿಡಿಯೋಗಳನ್ನು ನಂಬುವ ಅಥವ ಶೇರ್‌ ಮಾಡುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check: ಏಕರೂಪ ನಾಗರಿಕ ಸಂಹಿತೆ ಜಾರಿಗೊಳ್ಳದೇ ಇದ್ದರೆ ಭಾರತದಲ್ಲಿ ಹಿಂದುಗಳು ಹಿಂದುಳಿದವರಾಗುತ್ತಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *