ಸಾಮಾಜಿಕ ಜಾಲತಾಣದಲ್ಲಿ “ಉತ್ತರಪ್ರದೇಶದ ಮುಸ್ಲಿಂ ಯುವಕರ ಗುಂಪು ಪೊಲೀಸ್ ಪರೇಡ್ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾರಕಸ್ತ್ರಗಳನ್ನು ಪ್ರದರ್ಶಿಸಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ಹಲವರನ್ನು ನಿಂದಿಸಿರುವುದು ಕೂಡ ಕಂಡು ಬಂದಿದೆ. ಇವರನ್ನು ಹತ್ತಿಕ್ಕಲು ಯೋಗಿ ಸರಕಾರ ಮತ್ತೊಂದು ದಿಟ್ಟ ಹೆಜ್ಜೆಯನ್ನು ಇಡಲಿದೆ ಎಂದು ಹಲವರು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಹಲವರು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಹೀಗೆ ಶೇರ್ ಮಾಡಲಾಗುತ್ತಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ಕತ್ತಿಗಳನ್ನು ಬೀಸುವುದು, ಪ್ರದರ್ಶಿಸುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಕಂಡುಬಂದಿದೆ ಮತ್ತು ಈ ಎಲ್ಲಾ ಘಟನೆಗಳು ಪೊಲೀಸರ ಪರೇಡ್ ಸಂದರ್ಭದಲ್ಲಿ ಆಗಿರುವುದು ಕಂಡುಬಂದಿದೆ. ಹೀಗಾಗಿ ಹಲವರು ವೈರಲ್ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ವಿಚಾರ ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್ ಆಗುತ್ತಿರುವ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋನ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಹಲವು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಸೇರಿದಂತೆ ವಿವಿಧ ಡಿಜಿಟಲ್ ಮಾಧ್ಯಮಗಳು ಪ್ರಕಟಿಸಿದ್ದ ಅಧಿಕೃತ ಸುದ್ದಿ ವರದಿಗಳು ಕಂಡುಬಂದಿವೆ.

ಈ ವರದಿಗಳ ಪ್ರಕಾರದಲ್ಲಿ ಮಧ್ಯಪ್ರದೇಶದ ಭೂಪಾಲ್ ಪೊಲೀಸರು ಹಬೀಬ್ ಗಂಜ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಹೊಡೆದಾಡದ ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದರು, ಬಳಿಕ ಆರೋಪಿಗಳ ಪರೇಡ್ ನಡೆಸಿದರು ಎಂದು ಉಲ್ಲೇಖಿಸಲಾಗಿದೆ. ಇನ್ನು ಇಲ್ಲೇ ಆರೋಪಿಗಳ ಹೆಸರುಗಳನ್ನು ಗಮನಿಸಿದಾಗ ಆಕಾಶ್ ಗಜ್ಬಿ, ಉದಯ್ ಸರಾಥೆ, ಆಕಾಶ ಸೋನಿ, ನಿತೇಶ್ ಜಾಟ್, ಲಕ್ಕಿ ಸೇನ್, ಜೈ ರಾವತ್ ಮತ್ತು ಹೃತಿಕ್ ವಾಲ್ಮೀಕಿ ಎಂದು ತಿಳಿದುಬಂದಿದೆ. ಇಲ್ಲಿ ಯಾವುದೇ ರೀತಿಯ ಮುಸ್ಲಿಂ ವ್ಯಕ್ತಿಗಳ ಹೆಸರುಗಳು ಕಂಡುಬಂದಿಲ್ಲ. ಎಲ್ಲಾ ವರದಿಗಳು ಮತ್ತು FIR ನಲ್ಲಿ ಕೂಡ ಕೇವಲ ಹಿಂದೂ ಹೆಸರಗಳು ಮಾತ್ರ ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ FIR ಪ್ರತಿ ಹಾಗೂ ಮಾಧ್ಯಮ ವರದಿಗಳನ್ನು ಗಮನಿಸಿದಾಗ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿಲ್ಲ, ಮಧ್ಯಪ್ರದೇಶದಲ್ಲಿ ಎಂಬುದು ಸ್ಪಷ್ಟವಾಗಿದೆ. ಇದರ ಜೊತೆಗೆ ಆರೋಪಿಗಳೆಲ್ಲರೂ ಕೂಡ ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದು FIR ಪ್ರತಿಯಲ್ಲಿನ ಹೆಸರುಗಳ ಮೂಲಕ ಖಚಿತವಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವುದು ಸ್ಪಷ್ಟವಾಗಿದೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

