ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದರಲ್ಲಿ ಒಂದು ಗುಂಪು ಮನೆಯೊಂದರ ಮೇಲೆ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ಈ ವೀಡಿಯೊ ಪಶ್ಚಿಮ ಬಂಗಾಳದ್ದು ಎಂದು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಹಿಂದೂಗಳ ಮನೆಗಳು- ಅಂಗಡಿಗಳನ್ನು ಮುಸಲ್ಮಾನರು ಲೂಟಿ ಮಾಡುತ್ತಿದ್ದಾರೆ ಹಾಗೆಯೇ ಹಿಂದೂಗಳು ಪ್ರತಿಭಟಿಸಿದರೆ ಅವರನ್ನು ಬರ್ಬರವಾಗಿ ಕೊಲ್ಲಲಾಗುತ್ತಿದೆ ಎಂದು ಶೇರ್ ಮಾಡಲಾಗುತ್ತಿದೆ.

ಇನ್ನು ಕನ್ನಡದಲ್ಲಿ ಕೂಡ ಈ ಪೋಸ್ಟ್ ವೈರಲ್ ಆಗುತ್ತಿದೆ. ಪ್ರಮುಖವಾಗಿ ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ಪಾಕಿಸ್ತಾನ ಬಂಗ್ಲಾದೇಶ ವಲ್ಲ. ನಮ್ಮ ದೇಶಾನೇ ಪಚ್ಚಿಮ ಬಂಗಾಳ. ಪಾಕಿಸ್ತಾನ ಹಾಗೆ ಬಾಂಗ್ಲಾದೇಶದಂತೆಯೇ, ಪಶ್ಚಿಮ ಬಂಗಾಳದಲ್ಲಿಯೂ ಸಹ, ಹಿಂದೂಗಳ ಮನೆಗಳು ಮತ್ತು ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ ಮತ್ತು ಹಿಂದೂಗಳು ಪ್ರತಿಭಟಿಸಿದರೆ ಅವರನ್ನು ಕೊಲ್ಲಲಾಗುತ್ತಿದೆ. ಏಕೆಂದರೆ ಗಲಭೆಕೋರರಿಗೆ ತಿಳಿದಿದೆ, ನಾವು ಏನೇ ಮಾಡಿದರೂ ಮಮತಾ ಬ್ಯಾನರ್ಜಿ ಅವರ ಸರ್ಕಾರ ನಮ್ಮೊಂದಿಗೆ ಇದೆ ಯಾರಿಗೂ ಶಿಕ್ಷೆಯಾಗಲು ಬಿಡುವುದಿಲ್ಲ ಎಂದು. ಹಾಗೆ ವಿಡಿಯೋ ಪೂರ್ತಿ ನೋಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಕಾಣುತ್ತೆ. ಈ ವಿಡಿಯೋ ನೋಡಿ ನಿಮಗೆ ಏನ್ ಅರ್ಥ ಅಯ್ತು ಅಂತ ಕಾಮೆಂಟ್ ಮಾಡಿ’’ ಎಂದು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಹಲವರು ನಿಜವೆಂದು ಭಾವಿಸಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕ ಮತ್ತು ರಾಜ್ಯಸಭಾ ಸಂಸದ ರಾಮ್ಜಿ ಗೌತಮ್ ಅವರು ಮಾರ್ಚ್ 7, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, “ಮಧ್ಯಪ್ರದೇಶದಲ್ಲಿ ಜಂಗಲ್ ರಾಜ್ ಜಾರಿಯಲ್ಲಿದೆ. ಬಿಜೆಪಿ ಸರ್ಕಾರ ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸೆಹೋರ್ನ ಬಕ್ತರಾ ಗ್ರಾಮದಲ್ಲಿ, 500 ಗೂಂಡಾಗಳು ದಲಿತ ವಸಾಹತು ಪ್ರದೇಶದಲ್ಲಿ ಗಲಾಟೆ ಮಾಡಿ, ಅನೇಕ ಜನರನ್ನು ಹೊಡೆದು ಕೊಂದು, ಮನೆಯ ಬಾಗಿಲುಗಳನ್ನು ಮುರಿದು, ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದರು. ಪೊಲೀಸ್ ಪಡೆ ಮೂಕ ಪ್ರೇಕ್ಷಕರಾಗಿದೆ” ಎಂದು ಬರೆದುಕೊಂಡಿರುವುದು ಕಂಡು ಬಂದಿದೆ.
मध्य प्रदेश में जंगल राज कायम है बीजेपी सरकार दलितों पिछड़ों और आदिवासियों की सुरक्षा करने में पूरी तरह विफल ।सीहोर के बकतरा गांव में 500 दबंगों ने दलित बस्ती में तांडव मचाया कई लोगों को अधमरा किया घर के दरवाजे तोड़कर औरतों और बच्चों पर जान लेवा हमला भी किया।पुलिस फोर्स मूकदर्शक। pic.twitter.com/8P4otgItJM
— Er.Ramji Gautam MP Rajya Sabha (@ramjigautambsp) March 7, 2025
ಈ ಮಾಹಿತಿಯ ಆಧಾರದ ಮೇಲೆ ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಲು ಮುಂದಾದೆವು. ಈ ವೇಳೆ ನಮಗೆ ಝೀ ನ್ಯೂಸ್ನ ಯೂಟ್ಯೂಬ್ಚಾನೆಲ್ನಲ್ಲಿ ಮಾರ್ಚ್ 7, 2025 ರಂದು ಅಪ್ಲೋಡ್ ಮಾಡಲಾದ ವೀಡಿಯೊ ವರದಿ ಕಂಡು ಬಂದಿದೆ. ಇದರಲ್ಲಿ “ಸೆಹೋರ್ನ ಬಕ್ತರಾ ಗ್ರಾಮದಲ್ಲಿ ದಲಿತ ಮತ್ತು ಕಿರಾರ್ ಸಮುದಾಯದ ನಡುವೆ ಗಲಾಟೆ ನಡೆದಿದೆ. ಬಬಲೇಶ್ ಚೌಹಾಣ್ ಹತ್ಯೆಯ ನಂತರ ವಿವಾದ ಉಲ್ಬಣಗೊಂಡಿತು. ಅನಿಯಂತ್ರಿತ ಜನಸಮೂಹವು ಅನೇಕ ಸ್ಥಳಗಳಲ್ಲಿ ಬೆಂಕಿ ಹಚ್ಚಿತು. ವಾಸ್ತವವಾಗಿ, ಕಿರಾರ್ ಸಮುದಾಯದ ಜನರು ಅಂಗಡಿಗಳಿಂದ ದಲಿತ ಸಮುದಾಯದ ಜನರಿಗೆ ಸರಕುಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದರು. ಕಿರಾರ್ ಸಮುದಾಯದ ಬಹಿಷ್ಕಾರದ ನಂತರ ಉದ್ವಿಗ್ನತೆ ಉಂಟಾಗಿದೆ. ಅದರ ನಂತರ ಈ ಗಲಭೆ ನಡೆದಿದೆ. ಗಲಭೆಯ ಸಮಯದಲ್ಲಿ, ವೀಡಿಯೊ ಮಾಡಿದವರ ಮೊಬೈಲ್ ಫೋನ್ಗಳನ್ನು ಕಿತ್ತು ಸುಟ್ಟುಹಾಕಲಾಯಿತು” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
ಇನ್ನು ಈ ಬಗ್ಗೆ ದೈನಿಕ್ ಭಾಸ್ಕರ್ ಕೂಡ 7 ಮಾರ್ಚ್ 2025 ರಂದು ವರಯನ್ನು ಪ್ರಕಟಿಸಿದ್ದು, ‘‘ಕೊಲೆ ಆರೋಪಿ ಸಂಜಯ್ ಅಹಿರ್ವಾರ್ ಮತ್ತು ಬಬಲೇಶ್ ಚೌಹಾಣ್ ಒಟ್ಟಿಗೆ ಮದ್ಯಪಾನ ಮಾಡುತ್ತಿದ್ದರು. ಈ ಸಮಯದಲ್ಲಿ ಅವರ ನಡುವೆ ಜಗಳ ನಡೆದಿದೆ. ಅದೇ ರಾತ್ರಿ ಸಂಜಯ್ ಬಬಲೇಶ್ ವಿರುದ್ಧ ದೌರ್ಜನ್ಯ ಕಾಯ್ದೆಯಡಿಯಲ್ಲಿ ಹಲ್ಲೆಯ ಜೊತೆಗೆ ಪ್ರಕರಣ ದಾಖಲಿಸಿದರು. ಆದರೆ ಇದಾದ ನಂತರ, ಬಬಲೇಶ್ ಚೌಹಾಣ್ ಅವರ ಶವವನ್ನು ಬೆಳಿಗ್ಗೆ ಹೊರತೆಗೆಯಲಾಯಿತು. ಇದಾದ ನಂತರ, ಅವರ ಕುಟುಂಬ ಮತ್ತು ಸಮುದಾಯದ ಸದಸ್ಯರು ಮೃತ ದೇಹವನ್ನು ಇಟ್ಟುಕೊಂಡು ಪ್ರತಿಭಟಿಸಿದರು. ಈ ಸಮಯದಲ್ಲಿ, ಕೋಪಗೊಂಡ ಜನರು ಅಂಗಡಿಗೆ ಬೆಂಕಿ ಹಚ್ಚಿದರು ಮತ್ತು ಕೆಲವು ಮನೆಗಳಿಗೆ ನುಗ್ಗಿ ಜನರನ್ನು ಥಳಿಸಿದರು’’ ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳವುದಾದರೆ ಪಶ್ಚಿಮ ಬಂಗಾಳದಲ್ಲಿ ಮುಸಲ್ಮಾನರು ಹಿಂದೂಗಳ ಮನೆಗೆ ನುಗ್ಗಿ ಹಿಂದೂಗಳ ಹತ್ಯೆ ಮಾಡಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ವಿಡಿಯೋ ಮಧ್ಯಪ್ರದೇಶದಲ್ಲಿ ದಲಿತ ಮತ್ತು ಕಿರಾರ್ ಸಮುದಾಯದ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹರಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಮೋದಿ ಸರ್ಕಾರ ರಾಹುಲ್ ಗಾಂಧಿಗೆ ನೀಡಿದ್ದ VVIP ಸ್ಥಾನಮಾನವನ್ನು ರದ್ದುಗೊಳಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

