ಮುಸ್ಲಿಮರ ಬಾಹುಳ್ಯ ಹೆಚ್ಚಿರುವ ಕ್ಷೇತ್ರದಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದರೆ ಪೆಟ್ಟು ತಿಂದು ಸಾಯಬೇಕಾಗಬಹುದು. ಹೇಗಿದೆ ನಮ್ಮ ದುರಾವಸ್ಥೆ ಎಂಬ ಹೇಳಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್: ಈ ಮೊದಲು ಈ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗಿತ್ತು, ಆದರೆ ಇದು 2019ರ ರಾಜಸ್ಥಾನದ ಭಿಲ್ವಾರದಲ್ಲಿ ನಡೆದ ಘಟನೆಯಾಗಿದ್ದು, ವೃದ್ಧನಿಗೆ ಹಣದ ವಿಚಾರದಲ್ಲಿ ಜನರನ್ನು ನಿಂದಿಸಿದ್ದಕ್ಕಾಗಿ ಥಳಿಸಲಾಗಿದೆಯೇ ಹೊರತು ‘ಭಾರತ್ ಮಾತಾ ಕಿ ಜೈ’ ಎಂದು ಕೂಗಿದ್ದಕ್ಕಾಗಿ ಅಲ್ಲ ಎಂದು ಭಿಲ್ವಾರದ ಕೊತ್ವಾಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವೀಡಿಯೊದಲ್ಲಿರುವ ವೃದ್ದ ಹೋತ್ಚಂದ್ ಸಿಂಧಿ. ಈ ಹಿಂದೆ ಈತ ತನ್ನ ಪತ್ನಿಯನ್ನು ಕೊಂದ ಆರೋಪದ ಮೇಲೆ ಮತ್ತು ಆಗಾಗ್ಗೆ ಇತರರೊಂದಿಗೆ ಜಗಳವಾಡುತ್ತಿದ್ದಕ್ಕಾಗಿ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ದನು ಬುದ್ಧಿಮಾಂದ್ಯ ಆತನಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆತನ ಮಗನಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ವೀಡಿಯೊದಲ್ಲಿ, ಹಣಕ್ಕಾಗಿ ಮತ್ತು ಇತರರನ್ನು ನಿಂದಿಸಿದ್ದಕ್ಕಾಗಿ ಅವರನ್ನು ಥಳಿಸಲಾಗಿದೆ (ಭಿಲ್ವಾರಾದ ಆಜಾದ್ ಚೌಕ್ನಲ್ಲಿ), ‘ಭಾರತ್ ಮಾತಾ ಕಿ ಜೈ’ ಎಂದು ಕೂಗಿದ್ದಕ್ಕಾಗಿ ಅಲ್ಲ. ಮಂಜಿಂದರ್ ಎಸ್ ಸಿರಾ (ದೆಹಲಿ-ರಾಜೌರಿ ಗಾರ್ಡನ್ ಶಾಸಕ) ಕೂಡ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವೃದ್ದನ ಮಗ ತನ್ನ ತಂದೆಯ ಮೇಲೆ ಹಲ್ಲೆ ಮಾಡಿದವರ ವಿರುದ್ದ ದೂರು ನೀಡಿದ್ದು ಅವರ ವಿರುದ್ದ ಪ್ರಕರಣ ದಾಖಲಾಗಿದೆ. ಐವರು ಆರೋಪಿಗಳನ್ನು ಮನೋಜ್ ಅಲಿಯಾಸ್ ಮುಲ್ಲಾ ಸಿಂಧಿ (39), ಹೇಮಂತ್ ರಾಮಚಂದ್ರ ನಥಾನಿ (45), ಭಗವಾನ್ ದಾಸ್ ಸಿಂಧಿ (37), ಮಂಜೂರ್ ಶೇಖ್ (31), ಮತ್ತು ಇರ್ಫಾನ್ ಶೇಖ್ (34) ಎಂದು ಗುರುತಿಸಲಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ವೃದ್ದನಿಗೆ ಥಳಿಸಿದವರಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಂಧಿ ಸಮುದಾಯದವರು ಇರುವುದು ಸ್ಪಷ್ಟವಾಗಿದೆ. ಮತ್ತು FIRನಲ್ಲಿ ಎಲ್ಲಿಯೂ ಭಾರತ್ ಮಾತಾ ಜಿ ಜೈ ಎಂಬ ಕಾರಣಕ್ಕಾಗಿ ಥಳಿಸಲಾಗಿದೆ ಎಂದು ಉಲ್ಲೇಖಿಸಿಲ್ಲ. ಆದ್ದರಿಂದ “ಭಾರತ್ ಮಾತಾ ಕಿ ಜೈ” ಘೋಷಣೆ ಕೂಗಿದ್ದಕ್ಕಾಗಿ ವೃದ್ಧನನ್ನು ಥಳಿಸಲಾಗಿದೆ ಎಂಬುದು ಸುಳ್ಳು.
ಇದನ್ನು ಓದಿ: ಇಸ್ರೇಲ್‌ನ 40 ಮಕ್ಕಳ ತಲೆ ಕಡಿದು ಹಮಾಸ್ ಅಟ್ಟಹಾಸ ನಡೆಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.