ಸಾಮಾಜಿಕ ಜಾಲತಾಣ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ, ನಕಲಿ ಜಾಹಿರಾತಿನ ಹಾವಳಿ ಕೂಡ ಹೆಚ್ಚಾಗಲು ಪ್ರಾರಂಭವಾಗುತ್ತಿದೆ. ಅದರಲ್ಲೂ ಉದ್ಯೋಗಕ್ಕೆ ಸಂಬಂಧಿಸಿದ ಸಾಕಷ್ಟು ನಕಲಿ ಜಾಹಿರಾತುಗಳು ಬಹಳ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿವೆ, ಇವುಗಳನ್ನ ಸರಿಯಾಗಿ ಪರಿಶೀಲನೆ ನಡೆಸದೆ ಅದೆಷ್ಟೋ ಮಂದಿ ಪ್ರತಿನಿತ್ಯ ಮೋಸ ಹೋಗುತ್ತಾರೆ ಇದೀಗ ಇಂತಹದ್ದೆ ಎರಡು ಜಾಹಿರಾತುಗಳು ನಿರುದ್ಯೋಗಿಗಳ ದಾರಿ ತಪ್ಪಿಸುತ್ತಿವೆ..
ಹೌದು.. “ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದೊಂದಿಗೆ ಸಂಯೋಜಿತವಾಗಿರುವ ಈ ವೆಬ್‌ಸೈಟ್‌ನಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು, ಇದಕ್ಕಾಗಿ ನೀವು ಮರುಪಾವತಿಸಲಾಗದ ನೋಂದಣಿ ಶುಲ್ಕವಾಗಿ 435 ರೂ. ಕಟ್ಟಬೇಕು“. ಎಂಬ ಸುಳ್ಳು ಸುದ್ದಿಯೊಂದು ಬಹಳ ದೊಡ್ಡ ಮಟ್ಟದಲ್ಲಿ ವೈರಲ್ ಆಗ್ತಾ ಇದೆ.
ಆದ್ರೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದೊಂದಿಗೆ ಸಂಯೋಜಿತವಾಗಿದೆ ಎಂದು ಹೇಳಿಕೊಂಡಿರುವ ಈ ವೆಬ್‌ಸೈಟ್ ನಕಲಿ ಎಂದು PIB ವರದಿ ಮಾಡಿದೆ. ಈಗಾಗಲೇ ಸಾಕಷ್ಟು ಮಂದಿ ಈ ವೆಬ್‌ಸೈಟ್‌ಗೆ ಹಣ ಪಾವತಿ ಮಾಡಿ ಮೋಸ ಹೋಗಿದ್ದಾರೆ. ಈ ಸಚಿವಾಲಯವು ಯಾವುದೇ ಖಾಸಗಿ ವೆಬ್‌ಸೈಟ್‌ಗಳ ಜೊತೆ ಸಂಯೋಜನೆಗೊಂಡಿಲ್ಲ. ಸಚಿವಾಲಯದ ಅಧಿಕೃತ ವೆಬ್‌ಸೈಟ್ socialjustice.gov.in ಆಗಿದೆ. ಇನ್ನು ಇದೇ ರೀತಿ ಮತ್ತೊಂದು ಸುಳ್ಳು ಜಾಹಿರಾತನ್ನ ಕೂಡ PIB ಬಯಲಿಗೆಳೆದಿದೆ.
“ನಾರ್ತ್ ಈಸ್ಟರ್ನ್ ಕೌನ್ಸಿಲ್ ಜಪಾನ್‌ನಲ್ಲಿ ದಾದಿಯರ ಅಂದ್ರೆ ನರ್ಸ್‌ಗಳ ನಿಯೋಜನೆಗಾಗಿ ಸಹಾಯ ಹಸ್ತ ನೀಡುತ್ತಿದೆ ಮತ್ತು ಹೋಟೆಲ್ ಉದ್ಯಮಕ್ಕೆ ಸಾಲಗಳನ್ನು ಒದಗಿಸಲಿದೆ” ಎಂಬ ಜಾಹಿರಾತು ವೈರಲ್ ಆಗಿತ್ತು ಈ ಕುರಿತು ಸತ್ಯಶೋಧನೆ ನಡೆಸಿದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, ನಾರ್ತ್ ಈಸ್ಟ್ ಕೌನ್ಸಿಲ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಈ ರೀತಿಯಾದ ಸುಳ್ಳು ಜಾಹಿರಾತನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದೆ. ಹಾಗಾಗಿ ನಾರ್ತ್ ಈಸ್ಟ್ ಕೌನ್ಸಿಲ್ ಜಪಾನ್‌ನಲ್ಲಿ ದಾದಿಯರ ನಿಯೋಜನೆಗೆ ಪ್ರಯೋಜಕತ್ವ ನೀಡುವುದು ಮತ್ತು ಹೋಟೆಲ್ ಉದ್ಯಮಕ್ಕೆ ಸಾಲ ನೀಡುತ್ತದೆ ಎಂಬುದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ..
ಒಟ್ಟಾರೆಯಾಗಿ ನಿರುದ್ಯೋಗಿಗಳನ್ನೇ ಗುರಿಯಾಗಿಸಿಕೊಂಡು ಈ ರೀತಿಯಾದ ನಕಲಿ ಜಾಹಿರಾತುಗಳ ದಂದೆ ಹೆಚ್ಚಾಗಿ ನಡೆಯುತ್ತಿದ್ದು, ಉದ್ಯೋಗಕ್ಕಾಗಿ ಅನ್ವೇಷಣೆ ನಡೆಸುತ್ತಿರುವವರು ಯಾವುದೇ ಜಾಹಿರಾತನ್ನು ನೋಡಿದರು ಅವುಗಳ ಕುರಿತು ಒಮ್ಮೆ ಪರಿಶೀಲಿಸುವುದು ಉತ್ತಮ ಆ ಮೂಲಕ ಮೋಸ ಹೋಗುವುದು ಮತ್ತು ಮೋಸ ಹೋಗುವವರನ್ನು ತಡೆಯಬಹುದಾಗಿದೆ.
ಇದನ್ನೂ ಓದಿ ; “ಭಾರತ್ ಮಾತಾ ಕಿ ಜೈ” ಘೋಷಣೆ ಕೂಗಿದ್ದಕ್ಕಾಗಿ ವೃದ್ಧನನ್ನು ಥಳಿಸಲಾಗಿದೆ ಎಂಬುದು ಸುಳ್ಳು”
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.