ತೆಲಂಗಾಣ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡೋದಕ್ಕೆ ಪ್ರಾರಂಭವಾಗಿವೆ, ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಗಳು ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದೀಗ ಇಂತಹದ್ದೇ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ, ಅದರ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ ಒಮ್ಮೆ ಓದಿ..
“ತೆಲಂಗಾಣ ಕಾಂಗ್ರೆಸ್ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಮುಸಲ್ಮಾನರಿಗಾಗಿ ಪ್ರತ್ಯೇಕ ಆಸ್ಪತ್ರೆ ತೆರೆಯುವುದಾಗಿ ಹೇಳಿದೆ. ಇದರಲ್ಲಿ ಹಿಂದೂಗಳು, ಜೈನ, ಬೌದ್ಧರು ಸೇರಿದಂತೆ ಬೇರೆ ಸಮುದಾಯದವರು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ, ತೆಲಂಗಾಣ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನ ನಿಜ ಬಣ್ಣ ಬಯಲಾಗಿದೆ, ಮುಸಲ್ಮಾನ ಯುವಕರಿಗೆ ಉದ್ಯೋಗದಲ್ಲಿ ಆದ್ಯೆತೆ, ಮುಸಲ್ಮಾನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ 20 ಲಕ್ಷದವರೆಗಿನ ಎಜುಕೇಷನ್ ಲೋನ್ ನೀಡಲಾಗುವುದು ಎಂದು ತೆಲಂಗಾಣ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ” – ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ
ಫ್ಯಾಕ್ಟ್‌ಚೆಕ್ : ಅಸಲಿಗೆ ಈ ವಿಡಿಯೋವನ್ನು ರಿಪಬ್ಲಿಕ್ ಸುದ್ದಿ ವಾಹಿನಿ 11 ಡಿಸೆಂಬರ್ 2018ರಂದು ಹಂಚಿಕೊಂಡಿದೆ. 2018ರ ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅರ್ನಬ್ ಗೋಸ್ವಾಮಿ “ಮುಸಲ್ಮಾನರಿಗೆ ಮಾತ್ರ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ, ಒಂದು ವೇಳೆ ನೀವು ಹಿಂದೂ, ಜೈನ ಅಥವಾ ಬೌದ್ಧ ದರ್ಮಕ್ಕೆ ಸೇರಿದ್ದವರಾಗಿದ್ದರೆ ನಿಮಗೆ ಆ ಆಸ್ಪತ್ರೆಗೆ ಪ್ರವೇಶವನ್ನ ನೀಡುವುದಿಲ್ಲ, ಅಲ್ಲಿ ನೀವು ಹಿಂದೂ ಅಂತ ತಿಳಿದರೆ ನಿಮಗೆ ಆಸ್ಪತ್ರೆಯಲ್ಲಿ ಗೆಟ್ ಔಟ್ ಎಂಬ ಮಾತುಗಳಷ್ಟೆ ಕೇಳುತ್ತದೆ” ಎಂದು ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇನ್ನು ಮುಂದುವರೆದು, “ಮುಸಲ್ಮಾನ ಯುವಕರಿಗೆ ಮಾತ್ರ ಉದ್ಯೋಗದಲ್ಲಿ ಆದ್ಯತೆ, ಮುಸಲ್ಮಾನ ವಿದ್ಯಾರ್ಥಿಗಳಿಗೆ ಮಾತ್ರ 20 ಲಕ್ಷದವರೆಗಿನ ಎಜುಕೇಷನ್ ಲೋನ್ ಸಿಗಲಿದೆ, ಕಾಂಗ್ರೆಸ್ ನಿಲುವಿನ ಪ್ರಕಾರ ಮೊದಲು ಮುಸಲ್ಮಾನರಿಗೆ ಆದ್ಯತೆ, ಎರಡನೆಯಾದಾಗಿ ಅಲ್ಪಸಂಖ್ಯಾತರು ಮತ್ತು ಮೂರನೆಯದಾಗಿ ಹಿಂದುಗಳಿಗೆ ಆದ್ಯತೆ ನೀಡಲಾಗುತ್ತೆ ಎಂದು ಸುಳ್ಳು ಹೇಳಿಕೆ ನೀಡಿದ್ದರು.
ಇದೇ ರೀತಿಯ ಹೇಳಿಕೆಯನ್ನ 2018ರಲ್ಲಿ ಅಮಿತ್ ಶಾ ಕೂಡ ನೀಡಿದ್ದರು, ಆದರೆ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ತೆಲಂಗಾಣ ಕಾಂಗ್ರೆಸ್ ಈ ರೀತಿಯಾದ ಸುಳ್ಳು ಸುದ್ದಿಗಳನ್ನು ಹಬ್ಬಿಸ ಬೇಡಿ ಎಂದು ತೆಲಂಗಾಣ ಕಾಂಗ್ರೆಸ್‌ನ ಟ್ವೀಟ್ ಕೂಡ ಮಾಡಿತ್ತು, ಇನ್ನು ತೆಲಂಗಾಣ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಹಿಂದುಳಿದ, ದಲಿತ ವರ್ಗದವರಿಗೂ ಈ ಸೌಲಭ್ಯ ನೀಡುವ ಕುರಿತು ಭರವಸೆ ನೀಡಿಲಾಗಿತ್ತು. ಆದರ ರಿಪಬ್ಲಿಕ್ ಟಿವಿ ಮಾತ್ರ ಸುಳ್ಳು ಸುದ್ದಿಯನ್ನ ಬಿತ್ತರಿಸುವಲ್ಲಿ ಯಶಸ್ವಿಯಾಗಿತ್ತು.
ಇದನ್ನು ಓದಿ: ದಕ್ಷಿಣ ಕೊರಿಯಾದ ಪ್ಯಾರಾಗ್ಲೈಡರ್ ಪತನಗೊಂಡ ದೃಶ್ಯವನ್ನು ಹಮಾಸ್ ಉಗ್ರರು ಎಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.