ಇಸ್ರೇಲ್‌ನಲ್ಲಿ ಬಂದೂಕುಧಾರಿ ವ್ಯಕ್ತಿ ಭಾರತೀಯ ಮಹಿಳೆಯರನ್ನು ಕೊಂದಿದ್ದಾನೆ ಎಂಬುದು ಸುಳ್ಳು ಸುದ್ದಿ

ಬಂದೂಕುಧಾರಿ

ಪ್ಯಾಲೇಸ್ತೀನ್‌ನ ಹಮಾಸ್‌ನ ಉಗ್ರನೊಬ್ಬ ಇಸ್ರೇಲ್‌ನಲ್ಲಿ ಮನೆಯೊಂದಕ್ಕೆ ನುಗ್ಗಿ ಎದ್ದೇಳಲು ಸಾಧ್ಯವಾಗದ ವಯಸ್ಸಾದ ಮುದುಕಿ ಮತ್ತು ಅವರನ್ನು ನೋಡಿಕೊಳ್ಳಲು ಇದ್ದ ಭಾರತೀಯ ಕೇರ್‌ ಟೇಕರ್‌ ಹುಡುಗಿಯನ್ನು ಕೊಂದಿದ್ದಾನೆ ಎಂದು ಒನ್‌ ಇಂಡಿಯಾ ಕನ್ನಡ ವಿಡಿಯೋ ಪ್ರಸಾರ ಮಾಡಿದೆ. “ಇಸ್ರೇಲ್‌ನಲ್ಲಿ ಭಾರತೀಯರ ಮೇಲೂ ನಡೀತಿದ್ಯಾ ದಾಳಿ? ಮನೆ ಮನೆಗೆ ನುಗ್ತಿದ್ದಾರೆ, ಯಾರನ್ನೂ ಬಿಡ್ತಿಲ್ಲ ಪ್ಯಾಲೆಸ್ರೇನ್ ಉಗ್ರರು” ಎಂಬ ರೋಚಕ ಶೀರ್ಷಿಕೆ ಕೊಟ್ಟು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. 16 ಸಾವಿರ ಜನರು ಈ ವಿಡಿಯೋವನ್ನು ಲೈಕ್ ಮಾಡಿದರೆ, 14 ಲಕ್ಷ ಜನ ವೀಕ್ಷಿಸಿದ್ದಾರೆ ಮತ್ತು 2.5 ಸಾವಿರ  ಜನ ಹಂಚಿಕೊಂಡಿದ್ದಾರೆ.

ಇದೇ ವಿಡಿಯೋವನ್ನು ಹಲವಾರು ಬಲಪಂಥೀಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಫ್ಯಾಕ್ಟ್ ಚೆಕ್ ಮಾಡುವಂತೆ ಹಲವಾರು ಮನವಿಗಳು ಬಂದಿದ್ದವು.

ಫ್ಯಾಕ್ಟ್‌ ಚೆಕ್

ಈ ಹಿನ್ನೆಲೆಯಲ್ಲಿ ಹುಡುಕಿದಾಗ ಅಕ್ಟೋಬರ್ 9, 2023 ರಂದು ಟ್ವಿಟರ್ ನಲ್ಲಿ ಸಹೀದ್ ಉಲ್ಲಾ ಖಾನ್ ಎಂಬುವವರು ಇದೇ ವಿಡಿಯೋ ಒಳಗೊಂಡಿರುವ ಪೋಸ್ಟ್ ಹಾಕಿರುವುದು ಕಂಡುಬಂದಿದೆ. ವಿಡಿಯೋ ವಿವರಣೆಯಲ್ಲಿ ಬಂದೂಕುಧಾರಿಯು ಆ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ಕೊಂದಿಲ್ಲ ಎಂದು ಬರೆಯಲಾಗಿದೆ. “ಅಲ್-ಕಸಾಮ್ ಬ್ರಿಗೇಡ್‌ನ ಹೋರಾಟಗಾರರೊಬ್ಬರು ಅನಾರೋಗ್ಯದ ಮುದುಕಿ ಮತ್ತು ಅವರ ಮಗಳು ಇದ್ದ ಮನೆಗೆ ಪ್ರವೇಶಿಸಿದರು. ಇಲ್ಲಿ ನಾವು ಅಲ್ಲಾಹನ ಇಚ್ಛೆಯನ್ನು ಪೂರೈಸುತ್ತಿದ್ದೇವೆ. ಮುಹಮ್ಮದ್‌ರವರು  ಆಶ್ರಯದಲ್ಲಿರುವ ಮಹಿಳೆ, ವೃದ್ಧೆ, ಮಗು, ವಯಸ್ಸಾದ ವ್ಯಕ್ತಿ ಅಥವಾ ಪ್ರವಾದಿ ಆರಾಧಕನನ್ನು ಕೊಲ್ಲಬೇಡಿ ಎಂದು ಹೇಳಿದ್ದಾರೆ. ನಾವು  ಇಂದು ಮಿಲಿಟೆಂಟ್‌ಗಳನ್ನು ಕೊಂದು ಈ ವಯಸ್ಸಾದ ಮಹಿಳೆ ಮತ್ತು ಅವರ ಮಗಳನ್ನು ಉಳಿಸಿದ್ದೇವೆ. ಇವು ಮಹಾನ್ ಪುರುಷರ ನೈತಿಕತೆಗಳು, ಇವು ಮುಹಮ್ಮದ್ ಶಾಲೆಯಿಂದ ಕಲಿತವರ ನೈತಿಕತೆಗಳು. ಇವು ಜಗತ್ತು ಮರೆಮಾಡಲು ಪ್ರಯತ್ನಿಸುತ್ತಿರುವ ಸತ್ಯಗಳು, ಇವು ಪ್ಯಾಲೆಸ್ತೀನ್ ಮುಜಾಹಿದೀನ್ ನಮಗೆ ಕಲಿಸಿದ್ದು” ಎಂದು ಬರೆಯಲಾಗಿದೆ.

ಈ ವಿಡಿಯೋ ಆಧರಿಸಿ ಪ್ರಕಟವಾಗಿರುವ ಬೂಮ್ ಲೈವ್ ಫ್ಯಾಕ್ಟ್‌ಚೆಕ್ ವರದಿ ದೊರಕಿತು. ಬೂಮ್ ಪತ್ರಕರ್ತರು ಈ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ (MENA) ಪ್ರದೇಶದಲ್ಲಿ ಕಾರ್ಯನಿರ್ವಹಿಸುವ Fatabyyano ಎಂಬ ಫ್ಯಾಕ್ಟ್‌ಚೆಕ್ ಮಾಧ್ಯಮವನ್ನು ಸಂಪರ್ಕಿಸಿದ್ದಾರೆ. ಅವರು ಇಮೇಲ್ ಪ್ರತ್ಯುತ್ತರದಲ್ಲಿ, “ಬಂದೂಕುಧಾರಿ ವ್ಯಕ್ತಿಯು ಅರೇಬಿಕ್ ಭಾಷೆಯಲ್ಲಿ ವಯಸ್ಸಾದ ಮಹಿಳೆಯ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾನೆ ಮತ್ತು ವೀಡಿಯೊದಲ್ಲಿ 35-ಸೆಕೆಂಡ್ ಮಾರ್ಕ್‌ನಲ್ಲಿ ಅವಳ ಕಡೆಗೆ ತೋರಿಸುತ್ತಾನೆ. “ಇಂದು ನೀವು ನೋಡುತ್ತಿರುವ ಈ ದೃಶ್ಯವು ಪ್ರವಾದಿ (ಪ್ರವಾದಿ ಮೊಹಮ್ಮದ್) ಅವರ ಇಚ್ಛೆಯಾಗಿದೆ. ನಾವು ಮುಸ್ಲಿಮರು ಮುಜಾಹಿದ್ದೀನ್ ಸಂಘಟನೆಯವರಾಗಿದ್ದು, ಅವರ ಆರಾಧನಾ ಸ್ಥಳದಲ್ಲಿ ಮಹಿಳೆ, ಮಗು, ವೃದ್ಧರು ಅಥವಾ ಆರಾಧಕರನ್ನು ಕೊಲ್ಲಬಾರದು ಎಂಬ ನಿಯಮ ಪಾಲಿಸುತ್ತೇವೆ. ಇಂದು ನಾವು ಮಿಲಿಟೆಂಟ್‌ಗಳನ್ನು ಕೊಂದು ಮಹಿಳೆ ಮತ್ತು ಅವರ ಮಗಳನ್ನು ಉಳಿಸಿ ಹೋಗುವ ಮೂಲಕ ಪ್ರವಾದಿಯವರ ಇಚ್ಛೆಯನ್ನು ಪೂರೈಸಿದ್ದೇವೆ” ಎಂದು ಆ ವಿಡಿಯೋದಲ್ಲಿ ಹೇಳಲಾಗಿದೆ ಎಂದು ತಿಳಿಸಿದ್ದಾರೆ.

ವೀಡಿಯೊದಲ್ಲಿ ಕೇರ್ ಟೇಕರ್‌ ಯಾವ ರಾಷ್ಟ್ರದವರು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫ್ಯಾಕ್ಟ್-ಚೆಕಿಂಗ್ ಮತ್ತು ಮೀಡಿಯಾ ಲಿಟರಸಿಗಾಗಿ ಕೆಲಸ ಮಾಡಿತ್ತಿರುವ Kashif ಎಂಬ ಪ್ಯಾಲೆಸ್ಟೀನಿಯನ್ ಪ್ಲಾಟ್‌ಫಾರ್ಮ್‌ನ ಜನರಲ್ ಮ್ಯಾನೇಜರ್ ರಿಹಾಮ್ ಅಬು ಐತಾ ಅವರನ್ನು ಸಹ ಬೂಮ್ ಸಂಪರ್ಕಿಸಿದೆ. ಅವರು ಸಹ ಬಂದೂಕುಧಾರಿ ವ್ಯಕ್ತಿಯು ಮಹಿಳೆ ಮತ್ತು ಅವರ ಮಗಳನ್ನು ಉಳಿಸುತ್ತಿದ್ದೇವೆ ಎಂಬುದರ ಬಗ್ಗೆ ಮಾತನಾಡಿದ್ದಾನೆ ಎಂದು ದೃಢಪಡಿಸಿದರು. ಇದಲ್ಲದೆ, ಅವರು ವೀಡಿಯೊದ ಅರೇಬಿಕ್ ಸಂಭಾಷಣೆಯನ್ನು ಇಂಗ್ಲಿಷ್‌ ಸಬ್‌ ಟೈಟಲ್ ಜೋಡಿಸಿ ಕಳಿಸಿದ್ದಾರೆ ಎಂದು ಬೂಮ್ ವರದಿ ಮಾಡಿ ಆ ವಿಡಿಯೋವನ್ನು ಪ್ರಕಟಿಸಿದೆ. ಅದನ್ನು ಇಲ್ಲಿ ನೋಡಬಹುದು.

ವೀಡಿಯೊವನ್ನು ಯಾವಾಗ ಅಥವಾ ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದನ್ನು ಪರಿಶೀಲಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಬಂಧೂಕುದಾರಿ ವ್ಯಕ್ತಿ ಮಹಿಳೆ ಮತ್ತು ಭಾರತೀಯ ಸಹಾಯಕರನ್ನು ಕೊಂದಿದ್ದಾರೆ ಎಂಬುದು ಸುಳ್ಳು ಎಂದು ಮೂರು ಫ್ಯಾಕ್ಟ್ ಚೆಕಿಂಗ್ ಸಂಸ್ಥೆಗಳು ದೃಢಪಡಿಸಿವೆ. ಇಸ್ರೇಲ್‌ನಲ್ಲಿ ಭಾರತೀಯರನ್ನು ಕೊಲ್ಲಲಾಗಿಲ್ಲ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳು ವಕ್ತಾರ ಅರಿಂದಮ್ ಭಾಗ್ಚಿ ಹೇಳಿದ್ದಾರೆ. ಆದರೂ ಸತ್ಯಾಸತ್ಯತೆ ಪರಿಶೀಲಿಸದೆ ಒನ್ ಇಂಡಿಯಾ ಕನ್ನಡ ಸೇರಿ ಹಲವು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಸಾರ ಮಾಡಿವೆ.


ಇದನ್ನೂ ಓದಿ; ಇಸ್ರೇಲ್ ಸೈನಿಕರು ಗುಂಡುಗಳಿಗೆ ಹಂದಿ ಕೊಬ್ಬಿನ ಜಿಡ್ಡು ಹಚ್ಚಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *