ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ಪ್ರಮಾಣ ವಚನ ತೆಗೆದುಕೊಂಡಿದೆ ಎಂಬುದು ಸುಳ್ಳು

ಪ್ರಮಾಣ ವಚನ

ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ಬೌದ್ಧ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಹಲವಾರು ಜನರು ಹಿಂದೂ ದೇವರುಗಳನ್ನು ನಂಬುವುದಿಲ್ಲ ಎಂದು ಮೇಯರ್ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. “ತುಂಬಾ ಆಘಾತಕಾರಿ. ಹಿಂದೂ ಸನಾತನ ಧರ್ಮದ ಮೇಲೆ ಕಾಂಗ್ರೆಸ್ ತನ್ನ ದೇಶದಲ್ಲಿ ಸಾರ್ವಜನಿಕರಿಗೆ ಏನು ಪ್ರಮಾಣ ಮಾಡುತ್ತಿದೆ ನೋಡಿ ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಅವನತಿ ಖಚಿತ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ವೈರಲ್ ವಿಡಿಯೋದ ಕೀವರ್ಡ್‌ಗಳನ್ನು ಸರ್ಚ್ ಮಾಡಿದಾಗ ಈ ಕುರಿತು ಹಲವಾರು ಸುದ್ದಿಗಳು ದೊರಕಿವೆ. ಇದು ಕಳೆದ ವರ್ಷ ಅಂದರೆ ನವೆಂಬರ್ 09, 2022ರಂದು ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ನಡೆದ ಬೌದ್ಧ ಸಮುದಾಯದ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿದೆ. ಈ ಕಾರ್ಯಕ್ರಮದಲ್ಲಿ ರಾಜನಂದಗಾಂವ್ ಮೇಯರ್ ಹೇಮಾ ದೇಶಮುಖ್, ಮಾಜಿ ಸಿಎಂ ಮತ್ತು ಬಿಜೆಪಿ ಮುಖಂಡ ರಮಣ್ ಸಿಂಗ್ ಮತ್ತು ಅಂಬೇಡ್ಕರ್‌ರವರ ಮೊಮ್ಮಗ ಯಶವಂತ್ ರಾವ್ ಸಹ ಉಪಸ್ಥಿತರಿದ್ದರು. ಕಾರ್ಯಕ್ರಮದ ಕಡೆಯಲ್ಲಿ ಹಲವರು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದು, ಆ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರು ಬರೆದ 22 ಪ್ರತಿಜ್ಞಾ ವಿಧಿಗಳನ್ನು ಬೋಧಿಸಲಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

14 ಅಕ್ಟೋಬರ್ 1956 ರಂದು, ನಾಗ್ಪುರದ ದೀಕ್ಷಾಭೂಮಿಯಲ್ಲಿ ಹಿಂದೂ ಧರ್ಮವನ್ನು ತ್ಯಜಿಸಿದ ನಂತರ ಅಂಬೇಡ್ಕರ್ 22 ಪ್ರತಿಜ್ಞೆಗಳನ್ನು ಮಾಡಿದರು. ಬೌದ್ಧ ಧರ್ಮಕ್ಕೆ ಮತಾಂತರವಾಗುವ ಸಂದರ್ಭದಲ್ಲಿ ಆ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವುದು ವಾಡಿಕೆಯಾಗಿದೆ. ಅದೇ ರೀತಿಯಾಗಿ ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ಬೌದ್ಧ ಸಮುದಾಯದ ಕಾರ್ಯಕ್ರಮದಲ್ಲಿಯೂ ಸಹ ಹಲವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿದ್ದ ರಾಜನಂದಗಾಂವ್ ಮೇಯರ್ ಹೇಮಾ ದೇಶಮುಖ್, “ಕಾರ್ಯಕ್ರಮದಲ್ಲಿ ಮಾಜಿ ಸಿಎಂ ರಮಣ್ ಸಿಂಗ್ ಭಾಗವಹಿಸಿದ್ದು, ಅವರು ಬೇಗ ತೆರಳಿದರು. ನಾನು ಅತಿಥಿಯಾಗಿ ಭಾಗವಹಿಸಿ ಮಾತನಾಡಿದೆ. ನನ್ನ ಭಾಷಣದಲ್ಲಿ ಎಲ್ಲಿಯೂ ಹಿಂದೂ ಧರ್ಮವನ್ನು ಅವಹೇಳನ ಮಾಡಿಲ್ಲ. ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಅಂಬೇಡ್ಕರ್‌ರವರ 22 ಪ್ರಮಾಣ ವಚನ ಬೋಧಿಸಲಾಯಿತು. ಆ ಬಗ್ಗೆ ನನಗೆ ತಿಳಿದಿರಲಿಲ್ಲ. ಆದರೂ ನಾನು ಕೈ ಮುಂದೆ ಮಾಡಿ ಆ ಪ್ರಮಾಣ ವಚನವನ್ನು ಸ್ವೀಕರಿಸಿಲ್ಲ. ನಾನು ಹಿಂದೂ ಆಗಿದ್ದೇನೆ ಮತ್ತು ನನಗೆ ನನ್ನದೇ ಆದ ನಂಬಿಕೆಗಳಿವೆ. ಅದೇ ರೀತಿ ಅವರು ಸಹ ತಮ್ಮದೇ ಆದ ನಂಬಿಕೆ ಹೊಂದಿದ್ದಾರೆ. ಈ ಮೂಲಕ ನಾನು ಯಾರನ್ನೂ ನೋಯಿಸಿಲ್ಲ” ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ನೋಡುವುದಾದರೆ ಅದು ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮವಲ್ಲ. ಬೌದ್ಧ ಧರ್ಮದ ಕಾರ್ಯಕ್ರಮವಾಗಿದ್ದು ಎರಡೂ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ. ಅಲ್ಲಿ ಅಂಬೇಡ್ಕರ್‌ರವರ ಪ್ರತಿಜ್ಞಾ ವಿಧಿ ಬೋಧಿಸಲಾಗಿದೆ. ಹಾಗಾಗಿ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ಪ್ರಮಾಣ ವಚನ ತೆಗೆದುಕೊಂಡಿದೆ ಎಂಬುದು ಸುಳ್ಳು. ಈ ವಿಡಿಯೋ ಒಂದು ವರ್ಷ ಹಳೆಯದಾಗಿದ್ದು, ಸದ್ಯ ಅಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಮತ್ತೆ ಮತ್ತೆ ಆ ಹಳೆಯ ವಿಡಿಯೋವನ್ನು ತಪ್ಪು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


Fact Check: ಕಾಂಗ್ರೆಸ್ ತನ್ನ ಪಕ್ಷದ ಗುರುತಾಗಿ ಇಸ್ಲಾಮ್ ಚಿಹ್ನೆಯನ್ನು ಆಯ್ಕೆ ಮಾಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *