ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕುರಿತು ಸದಾ ಒಂದಿಲ್ಲೊಂದು ಸುಳ್ಳು ಸುದ್ದಿಗಳು ಭಾರತದಾದ್ಯಂತ ಇಂದಿಗೂ ಈ ಕ್ಷಣಕ್ಕೂ ಹರಿದಾಡುತ್ತಲೇ ಇರುತ್ತವೆ. ಬಹುಶಃ ಸ್ವತಂತ್ರ್ಯ ಚಳುವಳಿಯ ಪ್ರಮುಖ ನಾಯಕರಲ್ಲಿ ಗಾಂಧೀಜಿಯವರ ಕುರಿತು ಹರಿದಾಡಿದಷ್ಟು ಸುಳ್ಳುಗಳು ಮತ್ತೊಬ್ಬರದಿಲ್ಲ. ಇತ್ತೀಚೆಗೆ ಗಾಂಧಿಜಿಯವರ ಕುರಿತು ಇನ್ನೊಂದು ಸುದ್ದಿ ಹರಿದಾಡುತ್ತಿದ್ದು, ಅದು 1930 ರಲ್ಲಿ ಅಸಹಕಾರ ಚಳುವಳಿ ಉತ್ತುಂಗದಲ್ಲಿದ್ದಾಗ ಮಹಾತ್ಮಾ ಗಾಂಧಿಯವರು ತಮ್ಮ ವೈಯಕ್ತಿಕ ನಿರ್ವಹಣೆಗಾಗಿ 100 ರೂಪಾಯಿ ಪಿಂಚಣಿ ಅಥವಾ ಭತ್ಯೆಯನ್ನು ಪಡೆಯುತ್ತಿದ್ದರು ಎಂಬ ಸುಳ್ಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡಾ. ವಿಕ್ರಮ್ ಸಂಪತ್ ಎಂಬ ಬಲಪಂಥೀಯ ಇತಿಹಾಸಕಾರ, ಮತ್ತು ಲೇಖಕ ಈ ಟ್ವಿಟ್ ಮಾಡಿದ್ದು. ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ. ಅದನ್ನು ನೀವು ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್: 1930 ರಲ್ಲಿ ಗಾಂಧೀಜಿಯವರು ಯರವಾಡ ಜೈಲಿನಲ್ಲಿದ್ದರು. ಆಗ ಪ್ರತೀ ಕೈದಿಗೂ ಆಹಾರ ಮತ್ತು ಇತರ ನಿರ್ವಹಣೆಗಾಗಿ ಬಜೆಟ್ ನಿರ್ಧರಿಸಲಾಗುತ್ತಿತ್ತು. ಅದೇ ರೀತಿ ಗಾಂಧೀಜಿಯವರಿಗೂ ಸಹ ತಿಂಗಳಿಗೆ 100 ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಮಹಾತ್ಮ ಗಾಂಧಿಯವರು ಇದನ್ನು ನಿರಾಕರಿಸಿ 1930ರ ಮೇ 10 ರಂದು ಗೃಹ ಇಲಾಖೆಯ ಮೆಜರ್ ಇ. ಇ ಡೋಯ್ಲೆ ಯವರಿಗೆ ಪತ್ರ ಬರೆದಿದ್ದರು. ಅದರಲ್ಲಿ “ನೀವು ನನಗೆ ಎಲ್ಲಾ ಸೌಲಭ್ಯ ನೀಡಲು ಪ್ರಸ್ತಾಪಿಸುತ್ತಿದ್ದೀರಿ. ಆದರೆ ಅದ್ಯಾವುದರ ಅಗತ್ಯವೂ ನನಗಿಲ್ಲ. ನನ್ನ ಪ್ರಕಾರ ಇಲ್ಲಿ ಹಸಿವಿನಿಂದ ಮಲಗುವ ಲಕ್ಷಗಟ್ಟಲೆ ಜನರಿದ್ದಾರೆ. ಅವರ ಪಾಲನ್ನು ಕಡಿತಗೊಳಿಸಿದ ನಂತರ ಅಂತಹ ಬಜೆಟ್ ಅನ್ನು ನಮಗೆ ನೀಡಲಾಗುತ್ತಿದೆ. ಜೈಲಿನಲ್ಲಿ ಮಾಡುವ ಈ ರೀತಿಯ ಭೇದ-ಭಾವದ ಕುರಿತು ನನ್ನ ವಿರೋಧವಿದೆ. ಎ ಗ್ರೇಡ್ ಕೈದಿ, ಬಿ ಗ್ರೇಡ್ ಕೈದಿ, ಸಿ ಗ್ರೇಡ್ ಕೈದಿ ಎಂದು ಮಾಡಿರುವ ವರ್ಗೀಕರಿಣಕ್ಕೆ ನೀಡಿರುವ ವಿವಿಧ ಸೌಲಭ್ಯವನ್ನು ನಾನು ಒಪ್ಪುವುದಿಲ್ಲ. ” ಎಂದು ಗಾಂಧಿಜೀಯವರು ತಮ್ಮ ಪತ್ರದಲ್ಲಿ ಬರೆದಿದ್ದರು ಮತ್ತು ಸ್ಪಷ್ಟವಾಗಿ ತಮಗೆ ನೀಡುವ ಪಿಂಚಣಿಯನ್ನು ನಿರಾಕರಿಸಿದ್ದರು.
ಲೇಖಕ ಮತ್ತು ಇತಿಹಾಸಕಾರ ಅಶೋಕ್ ಪಾಂಡೆ ಅವರ ಟ್ವೀಟ್ ಲಭ್ಯವಾಗಿದೆ, ಅದರಲ್ಲಿ, “ಗಾಂಧಿ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದಾರೆಯೇ? ಸತ್ಯ ನೋಡಿ ಎಂಬ ಪೋಸ್ಟ್‌ನೊಂದಿಗೆ ಯೂಟ್ಯೂಬ್ ಲಿಂಕ್‌ವೊಂದನ್ನು ಹಂಚಿಕೊಂಡಿದ್ದಾರೆ. ಗಾಂಧೀಜಿಯನ್ನು ಅವರ ಅನೇಕ ಸಹಚರರೊಂದಿಗೆ ಬಂಧಿಸಲಾಯಿತು, ಅವರಿಗೆ ಸರ್ಕಾರವು ರೂ 100 ಜೈಲು ಭತ್ಯೆಯನ್ನು ನೀಡಿತು, ಅದನ್ನು ಬಾಪು ತಿರಸ್ಕರಿಸಿದ್ದರು ಎಂದು ಅಶೋಕ್ ಕುಮಾರ್ ಪಾಂಡೆಯವರು ಗಾಂಧಿ ಪಿಂಚಣಿ ತೆಗೆದುಕೊಂಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಆದ್ದರಿಂದ ಬ್ರಿಟಿಷ್ ಸರ್ಕಾರವು ಗಾಂಧೀಜಿಗೆ ಪಿಂಚಣಿ ನೀಡುತ್ತಿತ್ತು ಎಂದು ಪ್ರತಿಪಾದಿಸುತ್ತಿರುವವರ ಹೇಳಿಕೆ ಸಂಪೂರ್ಣ ಸುಳ್ಳು.
ಇದನ್ನು ಓದಿ: Fact Check: ಪ್ಯಾಲೆಸ್ಟೈನ್ ಮಗುವಿನ ಮೃತದೇಹವೆಂದು ಬೊಂಬೆಯನ್ನು ತೋರಿಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.