ಅಂಬೇಡ್ಕರ್‌ರವರಿಗೆ ಪ್ರತಿ ಹಂತದಲ್ಲಿ ಬ್ರಾಹ್ಮಣರು ಸಹಾಯ ಮಾಡಿದ್ದಾರೆ ಎಂಬುದು ಸುಳ್ಳು

ಬ್ರಾಹ್ಮಣರು

ಜಗತ್ತು ಕಂಡ ಶೋಷಿತರ ಪರವಾಗಿನ ಅಪ್ರತಿಮ ಹೋರಾಟಗಾರ, ಮಹಾನ್ ಜ್ಞಾನಿ, ವಿದ್ವಾಂಸ, ಭಾರತದ ಸಂವಿಧಾನದ ಕತೃ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್‌ರವರ ಕುರಿತು ಹಲವು ಸುಳ್ಳು ಸುದ್ದಿಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದಲಿತ ಸಮುದಾಯದಲ್ಲಿ ಹುಟ್ಟಿ, ತನ್ನ ಸ್ವಂತ ಪರಿಶ್ರಮದಿಂದ ಓದಿ, ವಿದ್ವತ್ ಗಳಿಸಿ, ಸತತ ಕೆಲಸಗಳ ಮೂಲಕ ಶೋಷಿತರ ವಿಮೋಚಕರಾದ ಅಂಬೇಡ್ಕರ್‌ರವರನ್ನು ವಿರೋಧಿಸುವ ಒಂದು ವರ್ಗ ಇರುವುದು ನಿಮಗೆಲ್ಲ ಗೊತ್ತಿದೆ. ಅಂತವರು ಸೃಷ್ಟಿಸಿದ ಸುಳ್ಳು ಸುದ್ದಿಗಳು ಮತ್ತು ಅದರ ಹಿಂದಿನ ವಾಸ್ತವವನ್ನು ತಿಳಿಯೋಣ.

ಅಂಬೇಡ್ಕರ್‌ರವರ ಪ್ರತಿ ಸಾಧನೆಯಲ್ಲಿ ಬ್ರಾಹ್ಮಣದ ಕೊಡುಗೆಯಿದೆ ಎಂಬಂತ ಪೋಸ್ಟರ್ ಒಂದು ಹರಿದಾಡುತ್ತಿದೆ. ಇದನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಬೆಂಬಲಿಗರು ಟ್ವಿಟರ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅದೇನೆಂದರೆ

ಬಾಲ್ಯದಲ್ಲಿ ಅಂಬೇಡ್ಕರ್ ಅವರನ್ನು ಯಾರು ನೋಡಿಕೊಂಡರು? ಒಬ್ಬ ಬ್ರಾಹ್ಮಣ!

ಅಂಬೇಡ್ಕರರ ವಿದ್ಯಾಭ್ಯಾಸವನ್ನು ಯಾರು ನೋಡಿಕೊಂಡರು? ಒಬ್ಬ ಬ್ರಾಹ್ಮಣ!

ಅಂಬೇಡ್ಕರ್ ಎಂಬ ಉಪನಾಮವನ್ನು ಇಟ್ಟವರು ಯಾರು? ಒಬ್ಬ ಬ್ರಾಹ್ಮಣ

ಅಂಬೇಡ್ಕರರ ವಿದೇಶಿ ಶಿಕ್ಷಣಕ್ಕೆ ಹಣ ನೀಡಿದವರು ಯಾರು? ಹಿಂದೂ ರಾಷ್ಟ್ರೀಯವಾದಿ ರಾಜ ಸಯಾಜಿರಾವ್ ಗಾಯಕ್ವಾಡ್

ಅಂಬೇಡ್ಕರ್ ಅವರನ್ನು ಮದುವೆಯಾದವರು ಯಾರು? ಒಬ್ಬ ಬ್ರಾಹ್ಮಣ ಮಹಿಳೆ.

ಅಂಬೇಡ್ಕರ್ ಅವರ ಸಹೋದರಿಯರನ್ನು ಮದುವೆಯಾದವರು ಯಾರು? ಒಬ್ಬ ಬ್ರಾಹ್ಮಣ

ಅಂಬೇಡ್ಕರ್‌ವಾದಿಗಳು ಯಾರನ್ನು ನಿಂದಿಸುತ್ತಾರೆ? ಹಿಂದೂಗಳು ಮತ್ತು ಬ್ರಾಹ್ಮಣರನ್ನು….

ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಹಿಂದಿನಿಂದಿಲೂ ಹರಿದಾಡುತ್ತಿದೆ.

ಈ ಕುರಿತು ಇದರಲ್ಲಿ ನಿಜವೆಷ್ಟು? ಸುಳ್ಳೆಷ್ಟು ಎಂಬುದನ್ನು ನೋಡೋಣ.

ಬಾಲ್ಯದಲ್ಲಿ ಅಂಬೇಡ್ಕರ್ ಅವರನ್ನು ಯಾರು ನೋಡಿಕೊಂಡರು?

ಅಂಬೇಡ್ಕರ್‌ರವರು 14ನೇ ಏಪ್ರಿಲ್, 1891 ರಂದು ಜನಿಸಿದರು. ಅವರ ತಂದೆ ರಾಮ್‌ಜಿ ಸಕ್ಪಾಲ್ ತಾಯಿ ಭೀಮಾಬಾಯಿ. ಅಂಬೇಡ್ಕರ್‌ರವರ ತಮ್ಮ ಬಾಲ್ಯದ ಬಗ್ಗೆ ವೇಟಿಂಗ್ ಫಾರ್ ವೀಸಾ ಎಂಬ ಪ್ರಬಂಧದಲ್ಲಿ ವಿಸ್ತಾರವಾಗಿ ಬರೆದುಕೊಂಡಿದ್ದಾರೆ. ರಾಮ್‌ ಜಿ ಸಕ್ಬಾಲ್‌ರವರ 14 ಮಕ್ಕಳಲ್ಲಿ ಉಳಿದವರು ಅಂಬೇಡ್ಕರ್‌ ಮತ್ತು ಅವರ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ಸಹೋದರಿಯರು.

ಬಾಂಬೆ ಪ್ರೆಸಿಡೆನ್ಸಿಯಲ್ಲಿ ಅಂಬೇಡ್ಕರ್‌ ಕುಟುಂಬಕ್ಕೆ ಅಸ್ಪೃಶ್ಯತೆಯ ಕರಾಳ ಅನುಭವಗಳಾದವು. ಅವರ ಕುಟುಂಬವು ಮೂಲತಃ ಬಾಂಬೆ ಪ್ರೆಸಿಡೆನ್ಸಿಯ ರತ್ನಗಿರಿ ಜಿಲ್ಲೆಯ ದಾಪೋಲಿ ತಾಲೂಕಿನಲ್ಲಿ ನೆಲೆಸಿತ್ತು. ಅವರಿಗೆ 6 ವರ್ಷವಿದ್ದಾಗ ಅವರ ತಾಯಿ ಮರಣ ಹೊಂದುತ್ತಾರೆ. ಆನಂತರ ಅವರ ತಂದೆ ಸುಬೇದಾರ್ ಹುದ್ದೆಯಿಂದ ನಿವೃತ್ತಿಯಾದ ನಂತರ ಕೆಲಸ ಹುಡುಕಿಕೊಂಡು ಸತಾರ ಪಟ್ಟಣಕ್ಕೆ ಹೋಗುತ್ತಾರೆ. ಈ ಸಂದರ್ಭದಲ್ಲಿ ತನ್ನ ಚಿಕ್ಕಮ್ಮನಿಗೆ ರೋಗವಿದ್ದು ಅವರು ಚಲಿಸಲಾಗದ ಕಾರಣ ನನ್ನ ಅಣ್ಣ ಮತ್ತು ನೆರೆಹೊರೆಯವರು ನನ್ನನ್ನು ನೋಡಿಕೊಂಡರು ಎಂದು ಅಂಬೇಡ್ಕರ್ ಬರೆದಿದ್ದಾರೆ.

1904ರ ಸಮಯದಲ್ಲಿ ಸತಾರದ ಸದರ್ ಬಜಾರ್‌ನಲ್ಲಿ ಅಂಬೇಡ್ಕರ್‌ರವರ ಮನೆಯಿತ್ತು. ಈಗಲೂ ಅಲ್ಲಿ ಅಂಬೇಡ್ಕರ್ ವಾಸವಿದ್ದ ಮನೆ ಇದೆ. ಅಮಾನೆ ಬಂಗಲೆ ಎಂದು ಕರೆಯಲಾಗುತ್ತದೆ.  ಸದರ್ ಬಜಾರ್‌ನ ನಾಲ್ಕು ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿಯ ಜನರು ವಾಸಿಸುತ್ತಿದ್ದರು. ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ ಪ್ರಕಾರ ಪರಿಶಿಷ್ಟ ಜಾತಿ ಜನರು ವಾಸಿಸುತ್ತಿದ್ದ ಅಲ್ಲಿ ಅಂಬೇಡ್ಕರ್‌ರವರ ನೆರೆಹೊರೆಯವರು ಬ್ರಾಹ್ಮಣರಿರುವುದು ಅಸಂಭವ ಎಂದಿದ್ದಾರೆ.

ಸತಾರದಲ್ಲಿ ಅಂಬೇಡ್ಕರ್ ವಾಸವಿದ್ದರು ಎಂದು ಹೇಳಲಾಗುತ್ತಿರುವ ಮನೆ

ಇನ್ನು 1913ರಲ್ಲಿ ರಾಮ್‌ಜಿ ಸಕ್ಬಾಲ್‌ರವರು ನಿಧನರಾದರು. ಆಗ ಅಂಬೇಡ್ಕರ್‌ ರವರಿಗೆ 22 ವರ್ಷ ವಯಸ್ಸಾಗಿತ್ತು. ಹಾಗಾಗಿ ಬಾಲ್ಯದಲ್ಲಿ ಅಂಬೇಡ್ಕರ್‌ರವರನ್ನು ಅವರ ತಂದೆ ನೋಡಿಕೊಂಡಿದ್ದಾರೆ. ಅವರು ಕೆಲಸಕ್ಕಾಗಿ ಹೊರಗೆ ಹೋದಾಗ ಅವರ ಅಣ್ಣಂದಿರು ಮತ್ತು ನೆರೆ ಹೊರೆಯವರು ನೋಡಿಕೊಂಡಿದ್ದಾರೆ. ಅವರ್ಯಾರು ಬ್ರಾಹ್ಮಣರಾಗಿರಲಿಲ್ಲ. ಹಾಗಾಗಿ ಬಾಲ್ಯದಲ್ಲಿ ಅಂಬೇಡ್ಕರ್ ಅವರನ್ನು ಬ್ರಾಹ್ಮಣರು  ನೋಡಿಕೊಂಡರು ಎಂಬುದು ಸುಳ್ಳು.

ಅಂಬೇಡ್ಕರ್ ಶಿಕ್ಷಣ ವೆಚ್ಚ ಭರಿಸಿದವರು ಯಾರು?

ಅಂಬೇಡ್ಕರ್‌ರವರ ಜೀವನ ಚರಿತ್ರೆಕಾರ ಧನಂಜಯ್ ಕೀರ್ ರವರು 1956ರಲ್ಲಿ ಬರೆದ ‘Dr. Ambedkar: Life and Mission’ ಎಂಬ ಪುಸ್ತಕದಲ್ಲಿ, ಐದು ವರ್ಷದ ಅಂಬೇಡ್ಕರ್ ಅವರು ದಾಪೋಲಿಯ ಶಾಲೆಗೆ ದಾಖಲಾಗಿದ್ದಾರೆ ಎಂದು ಬರೆದಿದ್ದಾರೆ. ಇದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ನಗರ. ಮುಂದೆ ಅಂಬೇಡ್ಕರ್ ಅವರ ಪ್ರಾಥಮಿಕ ಶಿಕ್ಷಣವನ್ನು ಸತಾರಾದಲ್ಲಿ ಪಡೆಯುತ್ತಾರೆ. ಈ ಅವಧಿಯಲ್ಲಿ (1896-1906) ಶಿಕ್ಷಣಕ್ಕಾಗಿ ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ಕೀರ್ ಉಲ್ಲೇಖಿಸಿದ್ದಾರೆ.

ಅಂಬೇಡ್ಕರ್ ಅವರ ಇಂಟರ್-ಆರ್ಟ್ಸ್ ಪರೀಕ್ಷೆಯ ನಂತರ ಹಣದ ಕೊರತೆಯಿದೆ ಎಂದು ಕೀರ್ ಬರೆದಿದ್ದಾರೆ. ಅವರ ಮೆಟ್ರಿಕ್ಯುಲೇಷನ್ ನಂತರದ ಶಿಕ್ಷಣವು ಮುಂಬೈನ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ನಡೆಯಿತು. ಆನಂತರ ಅಮೇರಿಕದಲ್ಲಿ ಉನ್ನತ ಶಿಕ್ಷಣ ಪಡದರು. ಬರೋಡಾದ ಮಹಾರಾಜ – ಮೂರನೇ ಸಯಾಜಿರಾವ್ ಗಾಯಕ್ವಾಡ್ ಇದಕ್ಕೆ ಧನಸಹಾಯ ಮಾಡಿದರು.

ಮೂರನೇ ಸಯಾಜಿರಾವ್ ಗಾಯಕ್ವಾಡ್ ಅವರು 1875 ರಿಂದ 1939 ರವರೆಗೆ ಬರೋಡಾ ರಾಜ್ಯದ ಮಹಾರಾಜರಾಗಿದ್ದರು. ಭಾರತ ಸರ್ಕಾರದ ವೆಬ್‌ಸೈಟ್‌ನ ಪ್ರಕಾರ, ಅವರು ಮಾತ್ರೆ ಎಂಬ ಮರಾಠ ಸಮುದಾಯದವರು. ಗಾಯಕ್ವಾಡ್ ಅವರನ್ನು ಪ್ರಗತಿಪರ ಆಡಳಿತಗಾರ ಎಂದು ಪರಿಗಣಿಸಲಾಗಿದೆ. “ಅವರ ಅಧಿಕಾರಾವಧಿಯಲ್ಲಿ ಶಿಶುವಿವಾಹವನ್ನು ರದ್ದುಗೊಳಿಸುವುದು, ವಿಧವಾ ವಿವಾಹವನ್ನು ಕಾನೂನುಬದ್ಧಗೊಳಿಸುವುದು ಮತ್ತು 1893 ರಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ.

“ಭಾರತೀಯ ರಾಜಕುಮಾರರಲ್ಲಿ, ಬರೋಡಾದ ಶ್ರೀ ಸಯಾಜಿರಾವ್ ಗಾಯಕ್ವಾಡ್ ಅವರು 1883 ರಲ್ಲಿ ಅಸ್ಪೃಶ್ಯರಿಗಾಗಿ ಶಾಲೆಗಳನ್ನು ಪ್ರಾರಂಭಿಸಿದರು. ಹಾಗಾಗಿ ಅವರು ಹಿಂದೂ ನ್ಯಾಷನಲಿಷ್ಟ್ ಎಂಬುದು ಸುಳ್ಳು ಮತ್ತು ಅವರು ಬ್ರಾಹ್ಮಣರಲ್ಲ ಎಂಬುದು ಖಚಿತವಾಗಿದೆ.

ಅಂಬೇಡ್ಕರ್ ಮದುವೆ ವಿಚಾರ

ಅಂಬೇಡ್ಕರ್‌ರವರಿಗೆ 15 ವರ್ಷ ವಿದ್ದಾಗ 1906ರಲ್ಲಿ ಬಡ ದಲಿತ ಕುಟುಂಬದ ರಮಾಬಾಯಿಯವರನ್ನು ಮದುವೆಯಾದರು. 29 ವರ್ಷದ ನಂತರ ಅಂದರೆ 1935ರಲ್ಲಿ ರಮಾಬಾಯಿಯವರು ಹಲವು ಆರೋಗ್ಯ ಸಮಸ್ಯೆಗಳಿಂದ ನಿಧನರಾದರು. 13 ವರ್ಷದ ನಂತರ ಏಪ್ರಿಲ್ 15, 1948ರಂದು ಅಂಬೇಡ್ಕರ್ ಅವರು ಬ್ರಾಹ್ಮಣ ಸಮುದಾಯದ ಡಾ.ಶಾರದ ಕಬೀರ್ ಎಂಬುವವರನ್ನು ಮದುವೆಯಾದರು. ಅವರು ಸವಿತಾ ಅಂಬೇಡ್ಕರ್ ಎಂದು ಹೆಸರು ಬದಲಿಸಿಕೊಂಡರು ಮತ್ತು ಬೌದ್ಧ ಧರ್ಮಕ್ಕೆ ಮತಾಂತರವಾದರು. ಆ ವೇಳೆಗೆ ಅಂಬೇಡ್ಕರ್ ಅಂತರ್ಜಾತಿ ವಿವಾಹದ ಚಳವಳಿ ಪ್ರೋತ್ಸಾಹಿಸುತ್ತಿದ್ದರು ಎಂಬುದನ್ನು ಮರೆಯಬಾರದು.

ಅಂಬೇಡ್ಕರ್ ಸಹೋದರಿಯರ ಮದುವೆ

ಅಂಬೇಡ್ಕರ್‌ರವರಿಗೆ ಮಂಜುಳ ಮತ್ತು ತುಳಸಿ ಎಂಬ ಸಹೋದರಿಯರಿದ್ದರು. ಅವರಿಬ್ಬರೂ ದಲಿತ ಸಮುದಾಯದವರನ್ನೇ ಮದುವೆಯಾಗಿದ್ದರು ಎಂದು ಅಂಬೇಡ್ಕರ್‌ರವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಆಲ್ಟ್‌ನ್ಯೂಸ್‌ಗೆ ತಿಳಿಸಿದ್ದಾರೆ. ಹಾಗಾಗಿ ಅವರು ಬ್ರಾಹ್ಮಣರನ್ನು ಮದುವೆಯಾಗಿದ್ದವರು ಎಂಬುದು ಸುಳ್ಳು

ಅಂಬೇಡ್ಕರ್ ರವರಿಗೆ ಅಂಬೇಡ್ಕರ್ ಎಂಬ ಸರ್ ನೇಮ್ ಕೊಟ್ಟವರು ಯಾರು

ಕೃಷ್ಣ ಕೇಶವೆ ಅಂಬೇಡ್ಕರ್ ಎಂಬ ಬ್ರಾಹ್ಮಣ ಶಿಕ್ಷಕ ನೀಡಿದರು ಎಂದು ಹಲವು ದಾಖಲೆಗಳಲ್ಲಿದೆ. ಇದು ಮಾತ್ರವೇ ಮೇಲಿನ ಪ್ರತಿಪಾದನೆಗಳಲ್ಲಿ ಸರಿಯಾದುದ್ದಾಗಿದೆ.

ಅಂಬೇಡ್ಕರ್‌ವಾದಿಗಳು ಬ್ರಾಹ್ಮಣರನ್ನು, ಹಿಂದೂಗಳನ್ನು ದೂಷಿಸುತ್ತಿದ್ದಾರೆಯೇ?

ಅಂಬೇಡ್ಕರ್‌ವಾದಿಗಳು ದೂಷಿಸುವುದು ಎಲ್ಲಾ ಬ್ರಾಹ್ಮಣರಲ್ಲ, ಹಿಂದೂಗಳನ್ನಲ್ಲ. ಆದರೆ ಇಂದಿಗೂ ಅಸ್ಪೃಶ್ಯತೆ ಆಚರಿಸುವ, ಮೇಲು ಕೀಳು ಎಂದು ನೋಡುವು, ದೇವರು –ಧರ್ಮದ ಹೆಸರಿನಲ್ಲಿ ಮೋಸ ಮಾಡುವವರನ್ನು, ಓಟು ಕೇಳುವವರನ್ನು ಟೀಕಿಸುವುದರಲ್ಲಿ ತಪ್ಪೇನು? ಅಧಿಕಾರಕ್ಕಾಗಿ ಜಾತಿ ಪದ್ದತಿಯನ್ನು ಪ್ರೋತ್ಸಾಹಿಸುವುದು, ದಲಿತ ದಮನಿತರನ್ನು ಶೋಷಿಸುವುದು ತಪ್ಪಲ್ಲವೇ?

ಈ ಕುರಿತು ವಿಡಿಯೋ ನೋಡಿ

ಅಂಬೇಡ್ಕರ್ ಅವರು ಶ್ರೀ ಶ್ರೀಧರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದಿಲ್ಲ. ಈ ಫೋಟೊದಲ್ಲಿರುವವರು ಅಂಬೇಡ್ಕರ್ ಅಲ್ಲ.

ಆರ್ಯವಾರ್ತಾ ಎಂಬ  ಫೇಸ್‌ಬುಕ್ ಪೇಜ್‌ನಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ವರದಹಳ್ಳಿಯಲ್ಲಿರುವ ಆಶ್ರಮಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೇಟಿ ನೀಡಿ, ಶ್ರೀ ಶ್ರೀಧರ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ.

ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಸ್ವಾಮೀಜಿಗಳಿಂದ ಆಶಿರ್ವಾದ ಪಡೆದರು, ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದರು ಎಂಬುದಾಗಿ ಚಿತ್ರಿಸಲು ಯತ್ನಿಸಲಾಗುತ್ತಿದೆ.

ನಿಜವೆಂದರೆ ಅಂಬೇಡ್ಕರ್‌ ರವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ವರದಹಳ್ಳಿಯಲ್ಲಿರುವ ಆಶ್ರಮಕ್ಕೆ ಭೇಟಿ ನೀಡಿದ ಯಾವುದೇ ಆಧಾರಗಳಿಲ್ಲ

ಆಶ್ರಮಕ್ಕೆ ಕರೆ ಮಾಡಿ ಈ ಕುರಿತು ವಿಚಾರಿಸಿದಾಗ ಆಶ್ರಮದ ಟ್ರಸ್ಟಿಯೊಬ್ಬರು ಮಾತನಾಡಿ  “ಅಂಬೇಡ್ಕರ್ ಅವರು ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ ಎಂಬುದು ಸುಳ್ಳು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಫೋಟೋದಲ್ಲಿ ಇರುವುದು ಅಂಬೇಡ್ಕರ್ ಅಲ್ಲ. ಈ ಹಿಂದೆಯೂ ಇದೇ ರೀತಿ ಸುಳ್ಳು ಸುದ್ದಿ ಹರಡಲಾಗಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ಚಿತ್ರದಲ್ಲಿರುವವರು ಯಾರು ಎಂದು ಹುಡುಕಿದಾಗ ಮಹಾರಾಷ್ಟ್ರದ ಮರಾಠ ಪತ್ರಿಕೆಯ ಸಂಪಾದಕರಾದ ಆಚಾರ್ಯ ಆತ್ರೆಯವರ ಫೋಟೊ ಎಂದು ತಿಳಿದುಬಂದಿದೆ. ಆತ್ರೆಯವರ ಮತ್ತು ಭಗವಾನ್ ಶ್ರೀಧರರ ಭೇಟಿಯ ಪೋಟೋ ಮತ್ತು ಲೇಖನ ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆಯಲ್ಲಿ ಪ್ರಕಟವಾಗಿದೆ. ಹಾಗಾಗಿ ಅಂಬೇಡ್ಕರ್ ಶ್ರೀಧರ ಸ್ವಾಮಿಯವರ ಆರ್ಶಿವಾದ ಪಡೆದಿಲ್ಲ, ಬದಲಿಗೆ ಚಿತ್ರದಲ್ಲಿರುವವರು ಆಚಾರ್ಯ ಆತ್ರೆ ಎಂಬುದು ಖಚಿತವಾಗಿದೆ.

ಹಿಂದೂ ಧರ್ಮದ ಜಾತಿ ಪದ್ದತಿ, ಅಸ್ಪೃಶ್ಯತೆ, ಅಸಮಾನತೆ, ಕಂದಾಚಾರಗಳು ಅಂಬೇಡ್ಕರ್‌ರವರನ್ನು ಕೆರಳಿಸಿದ್ದವು. ಹಾಗಾಗಿ 1935 ರಲ್ಲಿಯೇ ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ ಎಂದು ಘೋಷಿಸಿದ್ದ ಬಾಬಾ ಸಾಹೇಬರು ಅಕ್ಟೋಬರ್ 14, 1955ರಲ್ಲಿ ನಾಗ್ಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಡನೆ ಬೌದ್ಧ ಧರ್ಮ ಸ್ವೀಕರಿಸಿದರು. ಹಾಗಾಗಿ ಅಂಬೇಡ್ಕರ್‌ರವರು ಬ್ರಾಹ್ಮಣರ ಸಹಾಯದಿಂದ ಮೇಲೆ ಬಂದವರು ಎಂಬುದು ಸುಳ್ಳು. ಅವರು ಹಿಂದೂ ಧರ್ಮ ನಂಬುತ್ತಿದ್ದರು ಎಂಬುದು ಸಹ ಸುಳ್ಳು.


ಇದನ್ನೂ ಓದಿ; ಗಾಂಧೀಜಿಯವರು ಬ್ರಿಟೀಷರಿಂದ ತಿಂಗಳಿಗೆ 100 ರೂ. ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *