ವಿದೇಶ ಪ್ರಯಾಣಕ್ಕೆ ಮೋದಿಗಿಂತಲೂ ಮನಮೋಹನ್ ಸಿಂಗ್ ಹೆಚ್ಚು ಹಣ ಖರ್ಚು ಮಾಡಿದ್ರು ಎಂಬುದು ಸುಳ್ಳು

ವಿದೇಶ ಪ್ರಯಾಣಕ್ಕೆ ಹಾಲಿ ಪ್ರಧಾನಿ ಮೋದಿಗಿಂತಲೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಚ್ಚು ಹಣ ಖರ್ಚು ಮಾಡಿದ್ರು ಎಂದು ವಿವಾದಾತ್ಮಕ ಬಲಪಂಥೀಯ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಭಾಷಣವೊಂದರಲ್ಲಿ ಹೇಳಿದ್ದಾರೆ. ಆ ವಿಡಿಯೋವನ್ನು ಇತಿಹಾಸ ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಭಾಷಣದಲ್ಲಿ More Foreign Trips Than Manmohan Singh Yet Lesser Bill For PM Modi ಎಂಬ ಪತ್ರಿಕಾ ವರದಿಯನ್ನು ಉಲ್ಲೇಖಿಸಿದ್ದಾರೆ. ಈ ಕುರಿತು ಹುಡುಕಿದಾಗ ಏಪ್ರಿಲ್ 7, 2019ರಂದು Swarajya ಎನ್ನುವ ಬಲಪಂಥೀಯ ವೆಬ್‌ ಸೈಟ್ ಪ್ರಕಟಿಸಿರುವ ಲೇಖನ ದೊರೆತ್ತಿದ್ದು ಅದನ್ನೆ ಚಕ್ರವರ್ತಿ ಸೂಲಿಬೆಲೆ ಉಲ್ಲೇಖಿಸಿದ್ದಾರೆ. ಆದರೆ ಈ ಸುದ್ದಿಯು ನಾಲ್ಕು ವರ್ಷಕ್ಕಿಂತಲೂ ಹಳೆಯ ಸುದ್ದಿಯಾಗಿದೆ ಎಂಬುದನ್ನು ನಾವು ಗಮನಿಸಬೇಕು.

ಸ್ವರಾಜ್ಯ ವೆಬ್‌ಸೈಟ್ ತಾನು ಹಿಂದೂಸ್ತಾನ್ ಟೈಮ್ಸ್‌ನಿಂದ ಈ ಸುದ್ದಿಯ ಮಾಹಿತಿ ಪಡೆದಿದ್ದೇವೆ ಎಂದು ವರದಿ ಮಾಡಿದೆ. ಆ ವರದಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ತಮ್ಮ ಎರಡನೇ ಅವಧಿಯ (2009-2014) 5 ವರ್ಷಗಳಲ್ಲಿ 38 ವಿದೇಶಿ ಪ್ರವಾಸ ಮಾಡಿದ್ದು ಅದಕ್ಕಾಗಿ 493.22 ಕೋಟಿ ರೂ ಖರ್ಚು ಮಾಡಿದ್ದಾರೆ. ನರೇಂದ್ರ ಮೋದಿಯವರು ತಮ್ಮ ಮೊದಲ ಅವಧಿಯ (2014-2019) 5 ವರ್ಷಗಳಲ್ಲಿ 44 ವಿದೇಶಿ ಪ್ರವಾಸ ಮಾಡಿದ್ದು, 443.4 ಕೋಟಿ ರೂ ಮಾತ್ರ ಖರ್ಚು ಮಾಡಿದ್ದಾರೆ, ಅಂದರೆ ಮನಮೋಹನ್ ಸಿಂಗ್‌ರವರಿಗಿಂತ 50 ಕೋಟಿ ರೂ ಕಡಿಮೆ ಎಂದು ತಿಳಿಸಲಾಗಿದೆ.

ಇದನ್ನೇ ಆಧರಿಸಿ ನೇಷನ್ ವಿತ್ ನಮೋ ಎಂಬ ಫೇಸ್‌ಬುಕ್ ಪುಟದಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಆದರೆ ಆನಂತರ ಅದನ್ನು ಡಿಲೀಟ್ ಮಾಡಲಾಗಿದೆ. ಅದರ ಸ್ಕ್ರೀನ್ ಶಾಟ್ ಅನ್ನು ಇಲ್ಲಿ ನೋಡಬಹುದು.

2019ರವರೆಗೆ ಮನಮೋಹನ್ ಸಿಂಗ್ ಮತ್ತು ಮೋದಿಯವರ ವಿದೇಶಿ ಭೇಟಿಗಳ ವಿವರಗಳನ್ನು ಪಿಎಂ ಇಂಡಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಬಹುದು. ವೆಬ್‌ಸೈಟ್‌ನಲ್ಲಿ ಒದಗಿಸಲಾದ ವಿವರಗಳ ಪ್ರಕಾರ, ಮೇಲಿನ ಪೋಸ್ಟ್‌ಗಳಲ್ಲಿ ನೀಡಲಾದ ವಿವರಗಳು ಅಪೂರ್ಣವಾಗಿವೆ ಎಂದು ತೀರ್ಮಾನಿಸಬಹುದು. ಹಿಂದೂಸ್ತಾನ್ ಟೈಮ್ಸ್, ಸ್ವರಾಜ್ಯ ಮತ್ತು ನೇಷನ್ ವಿತ್ ನಮೋ ಪ್ರತಿಪಾದಿಸಿರುವ ಅಂಕಿ ಅಂಶಗಳು ಕೇವಲ ಚಾರ್ಟರ್ಡ್ ಫ್ಲೈಟ್‌ಗಳಲ್ಲಿನ ವೆಚ್ಚಗಳನ್ನು ಮಾತ್ರ ಒಳಗೊಂಡಿದ್ದು, ಉಳಿದ ಖರ್ಚುಗಳನ್ನು ಒಳಗೊಂಡಿಲ್ಲ ಎಂದು ಫ್ಯಾಕ್ಟ್‌ಲಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಭಾರತದ ಪ್ರಧಾನ ಮಂತ್ರಿಯ ಯಾವುದೇ ವಿದೇಶಿ ಭೇಟಿಯು ಮೂರು ವಿಭಾಗಗಳ ಅಡಿಯಲ್ಲಿ ಪ್ರಯಾಣ ವೆಚ್ಚವನ್ನು ಒಳಗೊಂಡಿರುತ್ತದೆ: ಅವುಗಳೆಂದರೆ

 1. ಚಾರ್ಟರ್ಡ್ ಫ್ಲೈಟ್‌ಗಳಲ್ಲಿನ ವೆಚ್ಚಗಳು

ಈ ವರ್ಗದ ಅಡಿಯಲ್ಲಿ 2019ರಲ್ಲಿ ಮೋದಿಯವರ ಆರು ವಿದೇಶಿ ಭೇಟಿಗಳ ಬಿಲ್‌ಗಳು ಇನ್ನೂ ಸರ್ಕಾರಕ್ಕೆ ಬಂದಿರಲಿಲ್ಲ. ಆದ್ದರಿಂದ ಆ ವೆಚ್ಚಗಳನ್ನು ಪೋಸ್ಟ್‌ನಲ್ಲಿ ನೀಡಲಾದ ವೆಚ್ಚಗಳಲ್ಲಿ ಸೇರಿಸಲಾಗಿಲ್ಲ. ಅಲ್ಲದೆ, ಮೋದಿ ಅವರು IAF BBJ ವಿಮಾನಗಳಲ್ಲಿ ಆರು ಬಾರಿ ಪ್ರಯಾಣಿಸಿದ್ದಾರೆ, ಇದಕ್ಕೆ ಸರ್ಕಾರ ಹಣ ಪಾವತಿಸಬೇಕಾಗಿಲ್ಲ.

2. ವಿಮಾನ ನಿರ್ವಹಣೆ 

ಪ್ರತಿ ವರ್ಷ ವಿವಿಐಪಿಗಳ ಪ್ರಯಾಣಕ್ಕಾಗಿ ಬಳಸುವ ವಿಮಾನಗಳ ನಿರ್ವಹಣೆಗೆ ಸರ್ಕಾರವು ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತದೆ. ಆದರೆ ಸ್ವರಾಜ್ಯ ವರದಿಯಲ್ಲಿ ಈ ವೆಚ್ಚವನ್ನು ಸೇರಿಸಿಲ್ಲ.

3. ಹಾಟ್‌ಲೈನ್ 

ಪ್ರಧಾನಿಗಳ ವಿದೇಶ ಪ್ರವಾಸದ ವೇಳೆ ಪ್ರತಿಯೊಂದು ಸಂವಹನವನ್ನು ಸುರಕ್ಷಿತಗೊಳಿಸಲು ಹಾಟ್‌ಲೈನ್ ಅನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ ತಗುಲುವ ವೆಚ್ಚವನ್ನು ಸಹ ಮೇಲಿನ ಪೋಸ್ಟ್‌ನಲ್ಲಿ ಸೇರಿಸಿಲ್ಲ.

ಸ್ವರಾಜ್ಯ ವರದಿಯಲ್ಲಿ ಕೇವಲ ಚಾರ್ಟರ್ಡ್ ವಿಮಾನಗಳಲ್ಲಿ ಪ್ರಯಾಣಿಸಿದ ಖರ್ಚನ್ನು ಮಾತ್ರ ಸೇರಿಸಲಾಗಿದೆ. ಪಿಎಂಓ ವೆಬ್‌ಸೈಟ್‌ನಲ್ಲಿ ಈ ಮೂರು ವೆಚ್ಚಗಳನ್ನು ಸೇರಿಸಿರುವ ಮಾಹಿತಿ ಸಹ ಲಭ್ಯವಾಗಿದೆ. ಅದರಂತೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ತಮ್ಮ ಎರಡನೇ ಅವಧಿಯ (2009-2014) 5 ವರ್ಷಗಳಲ್ಲಿ ಒಟ್ಟು 1346 ಕೋಟಿ ರೂಗಳನ್ನು ಖರ್ಚು ಮಾಡಿದ್ದಾರೆ. ಅದೇ ರೀತಿಯಾಗಿ ನರೇಂದ್ರ ಮೋದಿಯವರು ತಮ್ಮ ಮೊದಲ ಅವಧಿಯ (2014-2019) 5 ವರ್ಷಗಳಲ್ಲಿ 2021 ಕೋಟಿ ರೂಗಳನ್ನು ಖರ್ಚು ಮಾಡಿದ್ದಾರೆ (ಇದರಲ್ಲಿ ಇನ್ನು ಹಲವು ಬಿಲ್‌ ಗಳನ್ನು ಸ್ವೀಕರಿಸಬೇಕಿದೆ) ಎಂದು ತಿಳಿದುಬಂದಿದೆ. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವಾರು ಮಾಧ್ಯಮಗಳು ಆಗ ವಿವರವಾದ ವರದಿ ಮಾಡಿದ್ದವು. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ  ನೋಡಬಹುದು.

ಈ ಮೇಲಿನ ಎಲ್ಲಾ ಅಂಶಗಳಿಂದ ವಿದೇಶ ಪ್ರಯಾಣಕ್ಕೆ ಮೋದಿಗಿಂತಲೂ ಮನಮೋಹನ್ ಸಿಂಗ್ ಹೆಚ್ಚು ಹಣ ಖರ್ಚು ಮಾಡಿದ್ರು ಎಂಬುದು ಸುಳ್ಳು ಎಂದು ಖಚಿತವಾಗುತ್ತದೆ.

ಇನ್ನು ಒಮ್ಮೆಗೆ ಮೋದಿಯವರು ಮೂರ್ನಾಲ್ಕು ದೇಶಗಳಿಗೆ ಪ್ರಯಾಣ ಮಾಡುತ್ತಾರೆ ಎಂಬುದು ಸಹ ಸುಳ್ಳು. ಒಟ್ಟಾರೆಯಾಗಿ PM ಇಂಡಿಯಾ ವೆಬ್‌ಸೈಟ್‌ನ ಪ್ರಕಾರ, ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳಲ್ಲಿ ಒಟ್ಟು 74 ಬಾರಿ ವಿದೇಶಿ ಪ್ರಯಾಣ ಮಾಡಿ ಒಟ್ಟು 124 ದೇಶಗಳಿಗೆ ಭೇಟಿ ನೀಡಿದ್ದಾರೆ. ಅಂದರೆ ಸರಾಸರಿ ಒಮ್ಮೆ ಪ್ರವಾಸ ಹೊರಟಾಗ ಕನಿಷ್ಟ ಎರಡು ದೇಶಗಳನ್ನು ಸಹ ಅವರು ನೋಡಲು ಸಾಧ್ಯವಾಗಿಲ್ಲ.

2019ರ ನಂತರ ಮೋದಿಯವರ ವಿದೇಶ ಪ್ರಯಾಣದ ಖರ್ಚನ್ನು ಪಿಎಂಒ ಕಚೇರಿ ಇನ್ನೂ ಸೇರಿಸಿಲ್ಲ.

ಒಟ್ಟಾರೆಯಾಗಿ ಮೋದಿಯವರ ವಿದೇಶಿ ಪ್ರವಾಸಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆಯವರು ಭಾಷಣದಲ್ಲಿ ಹೇಳಿದ ಎಲ್ಲಾ ಅಂಶಗಳು ತಪ್ಪಿನಿಂದ ಕೂಡಿವೆ.


ಇದನ್ನೂ ಓದಿ: ಅಂಬೇಡ್ಕರ್‌ರವರಿಗೆ ಪ್ರತಿ ಹಂತದಲ್ಲಿ ಬ್ರಾಹ್ಮಣರು ಸಹಾಯ ಮಾಡಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *