7 ನವೆಂಬರ್ 1966ರಂದು ಗೋಹತ್ಯೆ ನಿಷೇಧದ ಕಾನೂನಿಗಾಗಿ ಸಂಸತ್ ಭವನಕ್ಕೆ ನುಗ್ಗುತ್ತಿದ್ದ 5000 ಹಿಂದೂ ಸಾಧು-ಸಂತರನ್ನು, ಇಂದಿರಾಗಾಂಧಿ ಮುಸ್ಲಿಮರನ್ನು ಮೆಚ್ಚಿಸಲಿಕ್ಕಾಗಿ ಗುಂಡಿಕ್ಕಿ ಹತ್ಯೆಗೈದಿದ್ದರು. ನಿಮಗೆ ಗೊತ್ತೆ!? ನಮಗೆ ಇತಿಹಾಸದಲ್ಲಿ ಜಲಿಯನ್ ವಾಲಾಬಾಗ್ ಕಥೆಯನ್ನು ಕಲಿಸಲಾಗುತ್ತದೆ ಹೊರತು ಇಂತಹ ಘಟನೆಯನ್ನಲ್ಲ! ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೇ ರೀತಿಯ ಇನ್ನೊಂದು ಸುದ್ದಿಯೊಂದು ಹರಿದಾಡುತ್ತಿದ್ದು, 1996, ಗೋಪಾಷ್ಟಮಿ ( ಗೋವುಗಳನ್ನು ಪೂಜಿಸುವ ಹಬ್ಬ ) ತಿಥಿಯಂದು, 3-7 ಲಕ್ಷ ಸಾಧುಗಳು ಗೋಹತ್ಯೆ ನಿಲ್ಲಿಸುವ ಕಾಯಿದೆ ಜಾರಿ ಮಾಡಬೇಕೆಂದು ದೆಹಲಿಯಲ್ಲಿ ಹಸುಗಳೊಂದಿಗೆ ಪ್ರತಿಭಟಿಸುತ್ತಾರೆ. ಪ್ರಧಾನಿ ಇಂದಿರಾಗಾಂಧಿ ಗೋಲೀಬಾರ್ ಗೆ ಆದೇಶಿಸುತ್ತಾಳೆ . ಸುಮಾರು 5000 ಸಾಧು ಸಂತರನ್ನು ಮತ್ತು ಹಸುಗಳನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ . ಎಂಬ ಸುದ್ದಿಯನ್ನು ಹರಿಬಿಡಲಾಗಿದೆ.
ಫ್ಯಾಕ್ಟ್‌ಚೆಕ್: 1966ರ ನವೆಂಬರ್ 7ರಂದು ಗೋಹತ್ಯೆ ನಿಲ್ಲಿಸುವ ಕಾಯ್ದೆಯನ್ನು ಜಾರಿ ಮಾಡಬೇಕು ಎಂದು ಪ್ರತಿಭಟನೆ ನಡೆದಿತ್ತು. ಸರ್ವದಳೀಯ ಗೋರಕ್ಷಾ ಮಹಾಭಿಯಾನ ಸಮಿತಿಯು ಸತ್ಯಾಗ್ರಹವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಭಾರತೀಯ ಜನ ಸಂಘ, ಹಿಂದು ಮಹಾಸಭಾ, ಮತ್ತು ಆರ್ಯ ಮಹಾಸಭಾಕ್ಕೆ ಸೇರಿದ ಕಾರ್ಯಕರ್ತರು ಸೇರಿದಂತೆ ಸುಮಾರು ಒಂದು ಲಕ್ಷ ಸಾಧುಗಳು ಸೇರಿದ್ದರು. ಅಂದು ಕೆಲವು ಧಾರ್ಮಿಕ ಮುಖಂಡರು ಹಾಗೂ ಸಂಸದ ಸ್ವಾಮಿ ರಾಮೇಶ್ವರಾನಂದ ಅವರ ಭಾಷಣದಿಂದ ಉತ್ಸಾಹಿತರಾದ ಸತ್ಯಾಗ್ರಹಿಗಳು ದೆಹಲಿಯ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು.
ಪೋಲೀಸರು ಪ್ರತಿಭಟನಾಕಾರರನ್ನು ತಡೆಯಲು ಮುಂದಾದಾಗ ಸಂಘರ್ಷವುಂಟಾಗಿ, ಗಲಭೆಯಾಗಿ ಮಾರ್ಪಟ್ಟಿತು. ಪ್ರತಿಭಟನಾಕಾರರು ಪೋಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು, ಸಾರ್ವಜನಿಕ ವಾಹನಗಳಿಗೆ ಬೆಂಕಿ ಇಟ್ಟರು ಮತ್ತು ಸರ್ಕಾರಿ ಕಛೇರಿಗಳನ್ನು ಹಾಳುಗೆಡವಿದರು. ಗಲಭೆ ನಿಯಂತ್ರಿಸಲು ಪೋಲಿಸ್ ಫೈಯರಿಂಗ್ ನಡೆಸಲಾಯಿತು. ಇದರಲ್ಲಿ ಸುಮಾರು ಎಂಟು ಜನ ಮೃತಪಟ್ಟರು ಮತ್ತು ನೂರಾರು ಜನ ಗಾಯಗೊಂಡರು. ಈ ಗಲಭೆಯ ಕುರಿತು ದೇಶದಾದ್ಯಂತ ಹಲವು ಸುದ್ದಿ ಪತ್ರಿಕೆಗಳು ವರದಿ ಮಾಡಿದ್ದವು. ಹಾಗೆಯೇ ವಿದೇಶಿ ಪತ್ರಿಕೆಗಳಾದ ಅಮೇರಿಕಾದ The Record, ಆಸ್ಟ್ರೇಲಿಯಾದ The Age ಸಹ ವರದಿ ಮಾಡಿದ್ದವು.
ಜಾಲತಾಣದಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ನವೆಂಬರ್ 8, 1966 ರಂದು ಸದನದಲ್ಲಿ ಪ್ರಸ್ತುತಪಡಿಸಿದ ನೋಟಿಸ್‌ನಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 184 ಜನರು ಗಾಯಗೊಂಡಿದ್ದಾರೆ ಎಂದು ಸಂಸತ್ತಿಗೆ ತಿಳಿಸಲಾಗಿದೆ.
ಆದ್ದರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ 5 ಸಾವಿರ ಜನ ಸಾಧು-ಸಂತರನ್ನು ಗುಂಡಿಕ್ಕಿ ಹತ್ಯೆಗೈದರು ಎಂಬುದು ಸುಳ್ಳು. ಇದು ಇಂದಿರಾ ಗಾಂಧಿಯವರ ವಿರೋಧಿಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿ.
ಇದನ್ನು ಓದಿ: ವಿದೇಶ ಪ್ರಯಾಣಕ್ಕೆ ಮೋದಿಗಿಂತಲೂ ಮನಮೋಹನ್ ಸಿಂಗ್ ಹೆಚ್ಚು ಹಣ ಖರ್ಚು ಮಾಡಿದ್ರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.