ರಾಜ್ಯದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10 ನೇ ತರಗತಿ ವರಗಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಹಾಲು(ಕ್ಷೀರ ಭಾಗ್ಯ), ವಾರದಲ್ಲಿ ಎರಡು ದಿನ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೆ ಹಣ್ಣು, ಶೇಂಗಾ ಚಿಕ್ಕಿ ವಿತರಿಸುವ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿದೆ. ಈ ಹಿಂದೆ ಶಾಲೆಯಲ್ಲಿ ಮೊಟ್ಟೆ ವಿತರಿಸುವ ಕುರಿತು ಬಿಜೆಪಿ ಪಕ್ಷದ ಅನೇಕ ಮುಖಂಡರು ವಿರೋಧಿಸಿದ್ದರು. ಆದರೆ ಮತ್ತೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ತನ್ನ ಹಿಂದಿನ ಯೋಜನೆಯನ್ನು ಮುಂದುವರೆಸಿದೆ.
ಕೆಲವು ದಿನಗಳ ಹಿಂದೆ ಮೊಟ್ಟೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನೋರ್ವ ಬ್ರಾಹ್ಮಣ ಬಾಲಕಿಗೆ ಒತ್ತಾಯಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮತ್ತು ಬಾಲಕಿಯ ತಂದೆ ಶ್ರೀಕಾಂತ್ ಉನ್ನತಾಧಿಕಾರಿಗಳಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಮುನ್ನಲೆಗೆ ಬರುತ್ತಿದ್ದಂತೆ ಕನ್ನಡ ಪ್ರಭ, ಟಿವಿ 9 ಕನ್ನಡ, ವಿಜಯ ಕರ್ನಾಟಕ, ಪಬ್ಲಿಕ್ ಟಿವಿ ಸೇರಿದಂತೆ ಹಲವು ಕನ್ನಡದ ಸುದ್ದಿ ಮಾಧ್ಯಮಗಳು ಮತ್ತು ಟೈಮ್ಸ್ ಆಫ್ ಇಂಡಿಯಾ, ಓಪ್ ಇಂಡಿಯಾ, ನ್ಯೂಸ್ 24 ಇಂಗ್ಲೀಷ್ ಸೇರಿದಂತೆ ಹಲವು ಇಂಗ್ಲೀಷ್ ಮಾಧ್ಯಮಗಳು ಸುದ್ದಿ ಮಾಡಿವೆ. ಈ ಎಲ್ಲಾ ವರದಿಗಳಲ್ಲೂ ಶಿಕ್ಷಕ ಬಲವಂತವಾಗಿ ಮೊಟ್ಟೆ ತಿನ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಫ್ಯಾಕ್ಟ್‌ಚೆಕ್: “ಇದೇ ನವೆಂಬರ್ 17 ರಂದು ಶಿಕ್ಷಕ ಪುಟ್ಟನಾಯ್ಕರವರು ಪೌಷ್ಟಿಕ ಆಹಾರ ಸೇವನೆ ಬಗ್ಗೆ ಮಕ್ಕಳಿಗೆ ಪಾಠ ಹೇಳಿದ್ದಾರೆ. ಇದರಿಂದ ಪ್ರೇರಣೆಗೊಂಡ 2ನೇ ತರಗತಿಯ ಬಾಲಕಿ ಸ್ವಯಂ ಪ್ರೇರಿತವಾಗಿ ನವೆಂಬರ್ 21 ರಂದು ಮೊಟ್ಟೆ ಸೇವಿಸಿದೆ. ಶಿಕ್ಷಕರಾಗಲಿ, ಅಡುಗೆ ಸಿಬ್ಬಂದಿಗಳಾಗಲಿ ಮೊಟ್ಟೆ ತಿನ್ನುವಂತೆ ಯಾವ ಮಗುವಿಗೂ ಒತ್ತಾಯಿಸಿಲ್ಲ. ಆದರೂ ಪಾಲಕರ ಭಾವನೆಗೆ ನೋವಾಗಿದೆ ಎಂದು ಶಿಕ್ಷಕ ಪುಟ್ಟನಾಯ್ಕ ಕ್ಷಮೆ ಕೇಳಿದ್ದಾರೆ. ಪ್ರಕರಣ ಸುಖ್ಯಾಂತಗೊಂಡಿದೆ ಎಂದು ಹೊಸನಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) H.R ಕೃಷ್ಣಮೂರ್ತಿಯವರು ಕನ್ನಡ ಫ್ಯಾಕ್ಟ್‌ಚೆಕ್ ತಂಡಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಶಾಲೆಯ 2ನೇ ತರಗತಿ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಆಹಾರ ಸೇವನೆಯ ಬಗ್ಗೆ ಪಾಠ ಮಾಡಿದ್ದ ಶಿಕ್ಷಕ ಪುಟ್ಟನಾಯ್ಕ ಮೊಟ್ಟೆಯ ಮಹತ್ವದ ಬಗ್ಗೆ ಹೇಳಿದ್ದರು ಎನ್ನಲಾಗಿದೆ. ಇದರಿಂದ ಪ್ರೇರಣೆಗೊಂಡು, ಮೊಟ್ಟೆ ತಿನ್ನದ ಕೆಲವು ಮಕ್ಕಳು ಮಧ್ಯಾಹ್ನ ಊಟದ ವೇಳೆ ಚಿಕ್ಕಿಯ ಬದಲು ಮೊಟ್ಟೆ ಸೇವಿಸಿದ್ದರು. ಸಂಜೆ ಮನೆಗೆ ತೆರಳಿದ್ದ ವಿದ್ಯಾರ್ಥಿನಿ ವಾಂತಿ ಮಾಡಲು ಆರಂಭಿಸಿದ್ದಳು. ಅದನ್ನು ಗಮನಿಸಿದ ಪಾಲಕರು ವೈದ್ಯರ ಬಳಿ ಕರೆದೊಯ್ದಾಗ ಆಹಾರದಲ್ಲಿ ವ್ಯತ್ಯಾಸ ಆಗಿದೆ ಎಂದು ಗೊತ್ತಾಗಿದೆ. ಬಾಲಕಿಯನ್ನು ವಿಚಾರಿಸಿದಾಗ, ಶಾಲೆಯಲ್ಲಿ ಮೊಟ್ಟೆ ತಿಂದಿದ್ದಾಗಿ ಹೇಳಿದ್ದಳು ಎಂದು ತಿಳಿದುಬಂದಿದೆ.
ಈ ಬಗ್ಗೆ ಪಾಲಕರು ಬುಧವಾರ ನೀಡಿದ ದೂರಿನನ್ವಯ ಶಾಲೆಗೆ ಗುರುವಾರ ಭೇಟಿ ನೀಡಿದ್ದ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಹೊಸನಗರ ಬಿಇಒ ಎಚ್.ಆರ್. ಕೃಷ್ಣಮೂರ್ತಿ, ಜಿಲ್ಲಾ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ನಾಗರಾಜ್, ಪಾಲಕರು ಹಾಗೂ ಶಾಲೆಯ ಉಳಿದ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ‘ಶಿಕ್ಷಕ ಬಲವಂತವಾಗಿ ಮಕ್ಕಳಿಗೆ ಮೊಟ್ಟೆ ತಿನ್ನಿಸಿರಲಿಲ್ಲ. ಪಾಠದಿಂದ ಪ್ರೇರಣೆಗೊಂಡ ಮಕ್ಕಳೇ ಬಿಸಿಯೂಟದ ಅಡುಗೆಯವರಿಂದ ಮೊಟ್ಟೆ ಪಡೆದು ತಿಂದಿವೆ. ಮಕ್ಕಳು ಊಟ ಮಾಡುವ ವೇಳೆ ಶಿಕ್ಷಕ ಪುಟ್ಟನಾಯ್ಕ ಅಲ್ಲಿ ಇರಲಿಲ್ಲ ಎಂಬುದೂ ವಿಚಾರಣೆ ವೇಳೆ ಗೊತ್ತಾಗಿದೆ. ಬಾಲಕಿ ಸಸ್ಯಹಾರಿ. ಆಕೆಯ ಪಾಲಕರ ಭಾವನೆಗಳಿಗೆ ಇದರಿಂದ ನೋವಾಗಿದೆ ಎಂದುಕೊಂಡೇ ಶಿಕ್ಷಕ ಪುಟ್ಟನಾಯ್ಕ ಪಾಲಕರ ಬಳಿ ಕ್ಷಮೆ ಯಾಚಿಸಿದ್ದಾರೆ. ಈಗ ಪ್ರಕರಣ ಸುಖಾಂತ್ಯಗೊಂಡಿದೆ’ ಎಂದು ಬಿಇಒ ಎಚ್.ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ ಎಂದು ‘ಪ್ರಜಾವಾಣಿ’ ವರದಿ ಮಾಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಇಂಗ್ಲೀಷ್ ಮಾದ್ಯಮಗಳು ಶಾಲೆಯ ಶಿಕ್ಷಕರ ಮತ್ತು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಪಡೆಯದೇ ಏಕಪಕ್ಷೀಯವಾಗಿ ವರದಿ ಮಾಡಿವೆ. ಪ್ರಜಾವಾಣಿ ದಿನಪತ್ರಿಕೆ ಮಾತ್ರ ವಸ್ತು ನಿಷ್ಟವಾಗಿ ವರದಿ ಮಾಡಲು ಪ್ರಯತ್ನಿಸಿದೆ. ಹಾಗೂ ಆ ಬಾಲಕಿಯೇ ಪಾಠ ಕೇಳಿ ಪ್ರೇರಣೆಗೊಂಡು ಮೊದಲ ಬಾರಿಗೆ ಮೊಟ್ಟೆ ಸೇವಿಸಿದ್ದಾಳೆ. ಎಂದು ತಿಳಿಸಿದೆ ಆದ್ದರಿಂದ. ಶಿಕ್ಷಕರು ಬಲವಂತವಾಗಿ ಬ್ರಾಹ್ಮಣ ಹುಡುಗಿಗೆ ಮೊಟ್ಟೆ ತಿನ್ನಿಸಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: ಜನನ ನಿಯಂತ್ರಣ ಕಾನೂನನ್ನು ತರದಿದ್ದರೆ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದು ಜೂಲಿಯನ್ ಅಸಾಂಜ್ ಹೇಳಿಲ್ಲ
ವಿಡಿಯೋ ನೋಡಿ: Video | ರೋಹಿತ್ ಶರ್ಮಾ ಕುರಿತು ಹಬ್ಬುತ್ತಿವೆ ಸಾಲು ಸಾಲು ಸುಳ್ಳು ಸುದ್ದಿಗಳು | Rohit Sharma | Team India
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ