18 ನೇ ಶತಮಾನದ ಸಾಕ್ಷಾರತೆಯ ಸಮಿಕ್ಷೆಯಲ್ಲಿ ಉತ್ತರ ಭಾರತ 97%, ದಕ್ಷಿಣ ಭಾರತ 100% ಸಾಧಿಸಿತ್ತು ಎಂಬುದು ಸುಳ್ಳು

ಅನೇಕರು ಇವತ್ತಿನ ಆಧುನಿಕ ಇಂಗ್ಲೀಷ್ ಶಿಕ್ಷಣದ ಬದಲಿಗೆ ಭಾರತದಲ್ಲಿ ಹಿಂದೆ ರೂಢಿಯಲಿದ್ದ ಗುರುಕುಲ ಆಶ್ರಮ ವ್ಯವಸ್ಥೆಯನ್ನೇ ಫುನಃ ಅಳವಡಿಸಿಕೊಳ್ಳಬೇಕು ಎಂದು ವಾದಿಸಿದರೆ ಇನ್ನೂ ಅನೇಕರು ಗುರುಕುಲ ವ್ಯವಸ್ಥೆಯಲ್ಲಿ ಎಲ್ಲರಿಗೂ ಮುಕ್ತವಾಗಿ ಶಿಕ್ಷಣ ನೀಡಲಾಗುತ್ತಿರಲಿಲ್ಲ ಬದಲಿಗೆ ಅಲ್ಲಿ ಉಚ್ಛ ಕುಲ ಅಥವಾ ವರ್ಗದವರಿಗೆ ಮಾತ್ರ ಶಿಕ್ಷಣ ನೀಡಲಾಗುತ್ತಿತ್ತು. ಆದ್ದರಿಂದ ಗುರುಕುಲ ವ್ಯವಸ್ಥೆಯಲ್ಲಿ ಅಸಮಾನೆತಗಳಿದ್ದು ಇವತ್ತಿನ ಆಧುನಿಕ ಶಿಕ್ಷಣವೇ ಸರಿ ಎಂದು ವಾದಿಸುವವರಿದ್ದಾರೆ.

ಇತ್ತೀಚೆಗೆ ಇಂತಹದ್ದೇ ಸುದ್ದಿಯೊಂದು ವೈರಲ್ ಆಗುತ್ತಿದ್ದು, ಇಂಗ್ಲೆಂಡಿನಲ್ಲಿ ಮೊದಲ ಶಾಲೆ 1811 ರಲ್ಲಿ ಪ್ರಾರಂಭವಾಯಿತು. ಆ ಸಮಯದಲ್ಲಿ ಭಾರತದಲ್ಲಿ 7,32,000 ಗುರುಕುಲಗಳು ಇದ್ದವು. ಅವುಗಳಲ್ಲಿ ಲೋಹಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ಸೌರ ಅಧ್ಯಯನ, ಹವಾಮಾನ ಮುನ್ಸೂಚನೆ, ಖಗೋಳ ಶಾಸ್ತ್ರ, ಲಾಜಿಸ್ಟಿಕ್ಸ್ ಸೇರಿದಂತೆ 50ಕ್ಕೂ ಹೆಚ್ಚು ವಿಷಯಗಳನ್ನು ಕಲಿಸಲಾಗುತ್ತಿತ್ತು.  ಉತ್ತರ ಭಾರತವನ್ನು ಸಮೀಕ್ಷೆ ಮಾಡಿದ ಲೂಥರ್, ಇಲ್ಲಿ 97% ಸಾಕ್ಷರತೆ ಇದೆ ಎಂದು ಬರೆದಿದ್ದಾರೆ ಮತ್ತು ದಕ್ಷಿಣ ಭಾರತವನ್ನು ಸಮೀಕ್ಷೆ ಮಾಡಿದ ಮುನ್ರೋ ಇಲ್ಲಿ 100% ಸಾಕ್ಷರತೆ ಇದೆ ಎಂದು ಬರೆದಿದ್ದಾರೆ.ಭಾರತವನ್ನು ಶಾಶ್ವತವಾಗಿ ಗುಲಾಮರನ್ನಾಗಿ ಮಾಡಬೇಕಾದರೆ, ಅದರ ′ಸ್ಥಳೀಯ ಮತ್ತು ಸಾಂಸ್ಕೃತಿಕ ಶಿಕ್ಷಣ ವ್ಯವಸ್ಥೆ” ಸಂಪೂರ್ಣವಾಗಿ ಹಾಳುಗೆಡವಬೇಕು ಎಂದು ಲಾರ್ಡ್‌ ಮೆಕಾಲೆಯವರು ಇಂಗ್ಲಿಷ್ ಶಿಕ್ಷಣವನ್ನು ತಂದರು. ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶವನ್ನು ಸುರೇಶ್ ಎಂಬುವವರು ಸೇರಿದಂತೆ ಹಲವಾರು ಜನ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಫ್ಯಾಕ್ಟ್‌ಚೆಕ್: ಇಂಗ್ಲೆಂಡಿನಲ್ಲಿ ಮೊದಲ ಶಾಲೆಯನ್ನು ಸೈಂಟ್. ಅಗಸ್ಟೈನ್ 598(5-6ನೇ ಶತಮಾನ)ನಲ್ಲಿ ಪ್ರಾರಂಭಿಸಿದರು. 1811ರ ವೇಳೆಗೆ ಭಾರತದಲ್ಲಿ 7 ಲಕ್ಷದಷ್ಟು ಗುರುಕುಲಗಳಿದ್ದವು ಮತ್ತು ಲೂಥರ್ ಎಂಬ ವ್ಯಕ್ತಿ ಸಾಕ್ಷರತಾ ಸಮಿಕ್ಷೆ ನಡೆಸಿದ ಎಂಬುದು ಆಧಾರ ರಹಿತವಾದದ್ದು. 1822 ರಲ್ಲಿ ಸಮೀಕ್ಷೆ ನಡೆಸಿದ ಸರ್. ಥಾಮಸ್ ಮುನ್ರೋ ಮದ್ರಾಸ್ ಪ್ರಾಂತ್ಯದಲ್ಲಿ 11,758 ಶಾಲೆಗಳು ಮತ್ತು 740 ಉನ್ನತ ಶಿಕ್ಷಣ ಕೇಂದ್ರಗಳಿದ್ದವು ಎಂದಿದ್ದಾರೆ. ಇನ್ನೂ 1835ರಲ್ಲಿ ಬಂಗಾಳ ಪ್ರಾಂತ್ಯದ ಸಮಿಕ್ಷೆ ನಡೆಸಿದ ಆಡಮ್‌ ರವರು ಒಂದು ಲಕ್ಷ ಹಳ್ಳಿ ಶಾಲೆಗಳಿದ್ದವು ಮತ್ತು 13.2% ಯುವಕರು ಸಾಕ್ಷರತೆ ಹೊಂದಿದ್ದರು ಎಂದಿದ್ದಾರೆ.ಇನ್ನೂ ಭಾರತ ಸ್ವತಂತ್ರಗೊಂಡಗಾ ಸಾಕ್ಷರತೆಯ ಪ್ರಮಾಣವು ಸಾಕಷ್ಟು ಕಡಿಮೆ ಇತ್ತು, ಕೇವಲ 18.3% ಜನರು ಮಾತ್ರ ಸಾಕ್ಷರರಾಗಿದ್ದರು. ಪುರುಷರ ಸಾಕ್ಷರತಾ ಪ್ರಮಾಣವು 27.2% ರಷ್ಟಿದ್ದರೆ, ಮಹಿಳಾ ಸಾಕ್ಷರತೆಯ ಪ್ರಮಾಣವು 8.9% ರಷ್ಟಿತ್ತು. ಆದ್ದರಿಂದ ಲೂಥರ್, ಉತ್ತರ ಭಾರತದಲ್ಲಿ 97% ಸಾಕ್ಷರತೆ ಇದೆ ಎಂದು ಬರೆದಿದ್ದಾರೆ ಮತ್ತು ದಕ್ಷಿಣ ಭಾರತವನ್ನು ಸಮೀಕ್ಷೆ ಮಾಡಿದ ಮುನ್ರೋ ಇಲ್ಲಿ 100% ಸಾಕ್ಷರತೆ ಇದೆ ಎಂದು ಬರೆದಿದ್ದಾರೆ ಎಂಬುದು ಸುಳ್ಳು.ಇನ್ನೂ ಗುರುಕುಲಕ್ಕೆ ಸಂಬಂಧಿಸಿದಂತೆ ” 1850 ರವರೆಗೆ ಭಾರತದಲ್ಲಿ ‘7 ಲಕ್ಷ  32 ಸಾವಿರ’ ಗುರುಕುಲಗಳು ಮತ್ತು 7,50,000 ಹಳ್ಳಿಗಳಿದ್ದವು. ಅರ್ಥಾತ್ ಪ್ರತಿಯೊಂದು ಹಳ್ಳಿಯಲ್ಲಿಯೂ ಒಂದು ಗುರುಕುಲವಿತ್ತು ಮತ್ತು ಈ ಎಲ್ಲಾ ಗುರುಕುಲಗಳು ಇಂದಿನ ಭಾಷೆಯಲ್ಲಿ ‘ಉನ್ನತ ಕಲಿಕಾ ಸಂಸ್ಥೆಗಳಾಗಿ’ ಇದ್ದವು. 18 ವಿಷಯಗಳನ್ನು ಅವರೆಲ್ಲರಿಗೂ ಕಲಿಸಲಾಗುತ್ತಿತ್ತು ಮತ್ತು ಗುರುಕುಲ ಸಮಾಜದ ಜನರು ಇವುಗಳನ್ನು ಒಟ್ಟಿಗೆ ನಡೆಸುತ್ತಿದ್ದರು, ರಾಜನಿಂದ ಅಲ್ಲ.” ಎಂಬುದು ಸುಳ್ಳಿನಿಂದ ಕೂಡಿದೆ.

ಏಕೆಂದರೆ ವೇದಗಳ ಕಾಲದಲ್ಲಿ ಆರಂಭಗೊಂಡ ವರ್ಣಶ್ರಮ ವ್ಯವಸ್ಥೆಯು ನಿರ್ಧಿಷ್ಟ ವರ್ಣಗಳಿಗೆ ನಿರ್ದಿಷ್ಟ ಶಿಕ್ಷಣವನ್ನು ನೀಡಲಾಗುತ್ತಿತ್ತೇ ವಿನಃ ಎಲ್ಲರಿಗೂ ಎಲ್ಲಾ ರೀತಿಯ ಶಿಕ್ಷಣವನ್ನು ಪಡೆಯುವಂತಿರಲಿಲ್ಲ. ಪಾಠ ಭೋಧಿಸುವ ವೃತ್ತಿ ಸಹ ಕೇವಲ ಒಂದು ನಿರ್ಧಿಷ್ಟ ಸಮುದಾಯಕ್ಕೆ ಮೀಸಲಾಗಿತ್ತು. ಬಹುತೇಕ ಆಶ್ರಮಗಳಲ್ಲಿ ಗುರುಕುಲಗಳು ನಡೆಯುತ್ತಿದ್ದವು. ವರ್ಣಾಶ್ರಮ ವ್ಯವಸ್ಥೆಯನ್ನು ಮೀರಿ ಯಾರಾದರೂ ಶಿಕ್ಷಣ ಅಥವಾ ವಿದ್ಯೆ ಕಲಿತರೆ ಅಂತವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು ಎಂದು ಭಾರತೀಯ ಪುರಾಣಗಳು ಮತ್ತು ಇತಿಹಾಸದಿಂದ ತಿಳಿದುಕೊಳ್ಳಬಹುದು. ಆದರೆ ನಂತರ ಬೌದ್ಧ ಮತ್ತು ಕೆಲವು ಹಿಂದು ಧರ್ಮದ ಶಿಕ್ಷಣ ಕೇಂದ್ರಗಳು ದೊಡ್ಡಮಟ್ಟದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿದ್ದವು ಮತ್ತು ಎಲ್ಲಾ ಬಗೆಯ ಜನರಿಗೂ ಶಿಕ್ಷಣವನ್ನು ಓದಗಿಸಿದ್ದವು.ಲಾರ್ಡ್‌ ಮೆಕಾಲೆಯವರು ಭಾರತದಲ್ಲಿ ಇಂಗ್ಲೀಷ್ ಶಿಕ್ಷಣವನ್ನು ಜಾರಿಗೊಳಿಸಿದ್ದರ ಹಿಂದೆ ಅವರ ವಸಹಾತುಶಾಹಿ ಸ್ವಾರ್ಥವಿದ್ದರೂ ಸಹ ಇಂಗ್ಲೀಷ್ ಶಿಕ್ಷಣದಿಂದ ಮತ್ತು ಬ್ರಿಟಿಷರು ಸ್ಥಾಪಿಸಿದ ಶಾಲೆ, ಕಾಲೇಜು, ವಿಶ್ವಾವಿದ್ಯಾಲಯಗಳಿಗೆ ಯಾವ ಧರ್ಮ, ಜಾತಿ, ಲಿಂಗದ ತಾರತಮ್ಯವಿಲ್ಲದೆ ವಿದ್ಯಾರ್ಥಿಗಳು ಬಂದು ಶಿಕ್ಷಣ ಪಡೆಯುವಂತಾಯಿತು ಮತ್ತು ಇದು ಭಾರತದ ಪ್ರಗತಿಗೂ ಪೂರಕವಾಗಿ ಸಹಾಯಕವಾಗಿದೆ. ಜಗತ್ತಿನ ಇತರ ದೇಶಗಳೊಡನೆ ಸಂಪರ್ಕ ಸಾಧಿಸಲು, ಆಧುನಿಕ ಭಾರತವು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆಗೈಯಲು ಸಹ ಇಂಗ್ಲೀಷ್ ಶಿಕ್ಷಣ ಪರೋಕ್ಷವಾಗಿ ಸಹಾಯ ಮಾಡಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಆದರೆ ಲಾರ್ಡ್‌ ಮೆಕಾಲೆಯವರು “ಇಂಗ್ಲೀಷ್ ಎಜುಕೆಷನ್ ಆಕ್ಟ್‌ 1935” ರ ನಂತರ ಇಲ್ಲಿನ ಸ್ಥಳೀಯ ಶಿಕ್ಷಣ ಸಂಸ್ಥೆಗಳು ನಿಧಾನವಾಗಿ ಕಣ್ಮರೆಯಾಗುತ್ತಾ ಬಂದವು. ನಂತರ ಸರ್ಕಾರಿ, ಖಾಸಗಿ ಶಾಲೆಗಳು ಆರಂಭಗೊಳ್ಳುತ್ತಿದ್ದಂತೆ ಪರಂಪರಿಕ ಶಿಕ್ಷಣದ ಶಾಖೆಗಳು ಹಿನ್ನಲೆಗೆ ಸರಿದವು.


ಇದನ್ನು ಓದಿ: Fact Check | ಫಿಲಿಫೈನ್ಸ್‌ನಲ್ಲಿ ನಡೆದ ಭೂಕಂಪದ ವಿಡಿಯೋ ಎಂದು ಜಪಾನ್‌, ತೈವಾನ್‌ ಭೂಕಂಪದ ವಿಡಿಯೋ ಹಂಚಿಕೆ


ವಿಡಿಯೋ ನೋಡಿ: Fact Check | ಕತಾರ್‌ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆಯ ಮಾಜಿ ಸಿಬ್ಬಂದಿಗಳ ಮರಣದಂಡನೆ ಶಿಕ್ಷೆ ರದ್ದಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *