Fact Check | ಶಿವಕಾಶಿಯಲ್ಲಿ ಲಕ್ಷ ಶಿವಲಿಂಗಗಳು ಪತ್ತೆಯಾಗಿವೆ ಎಂದು ಸಿರ್ಸಿಯಲ್ಲಿನ ಸಹಸ್ರಲಿಂಗ ವಿಡಿಯೋ ಹಂಚಿಕೆ

“ಶಿವಕಾಶಿ ನದಿಯಲ್ಲಿ ನೀರಿನ ಮಟ್ಟ ಕುಸಿತದ ನಂತರ ಮೊದಲ ಬಾರಿಗೆ ಲಕ್ಷ ಶಿವಲಿಂಗಳು ಇತ್ತೀಚೆಗೆ ಕಾಣಿಸಿಕೊಂಡಿವೆ ಈ ವಿಡಿಯೋ ನೋಡಿ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ತಮ್ಮ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.


ವಿಡಿಯೋದಲ್ಲಿ ನದಿಯ ದಡದಲ್ಲಿರುವ ಬಂಡೆಗಳಲ್ಲಿ ಮತ್ತು ನದಿಯ ತಟದಲ್ಲಿ ಶಿವಲಿಂಗಗಳು ಕಾಣಿಸುತ್ತವೆ. ವೈರಲ್‌ ಆಗಿರುವ 33 ಸೆಕೆಂಡ್‌ಗಳ ಈ ವಿಡಿಯೋದಲ್ಲಿ,  ಬಂಡೆಗಳಿಂದಲೇ ಶಿವಲಿಂಗವನ್ನು ಕೆತ್ತಿರುವುದು ಮತ್ತು ಅಲ್ಲಿ ನದಿ ನೀರು ಹರಿಯುವುದು ಕಾಣಬಬಹುದಾಗಿದೆ. ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ಇದು ಶಿವಕಾಶಿಗೆ ಸಂಬಂಧಿಸಿದ ವಿಡಿಯೋವಲ್ಲ ಎಂದು ಕಮೆಂಟ್‌ ಕೂಡ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ನಗರದ ಸಮೀಪವಿರುವ ಸಹಸ್ರಲಿಂಗ ಯಾತ್ರಾಸ್ಥಳವಾಗಿದೆ ಎಂಬುದು ತಿಳಿದು ಬಂದಿದೆ. ಈ ಯಾತ್ರಾಸ್ಥಳಕ್ಕೆ ಪ್ರತಿನಿತ್ಯ ಪ್ರವಾಸಿಗರು ಮತ್ತು ಭಕ್ತಾಧಿಗಳು ಬರುತ್ತಲೇ ಇರುತ್ತಾರೆ. ಹಾಗಾಗಿ ಈ ಸ್ಥಳ ಬಹುತೇಕರಿಗೆ ಪರಿಚಯವಿರುವ ಕ್ಷೇತ್ರವಾಗಿದೆ.ಈ ಯಾತ್ರಾಸ್ಥಳವು ಶಾಲ್ಮಲಾ ನದಿಯ ದಡದಲ್ಲಿರುವ ಬಂಡೆಗಳ ಮೇಲೆ ಸಾವಿರ ಶಿವಲಿಂಗಗಳನ್ನು ಕೆತ್ತಿರುವ ಸ್ಥಳವಾಗಿದೆ.

ಕ್ರಿ.ಶ 1678 ಮತ್ತು 1718 ರ ನಡುವೆ ಸೋಧೆ ರಾಜವಂಶದ ಆಡಳಿತಗಾರರು ಸ್ಥಾಪಿಸಿದ ಈ ಶಿವಲಿಂಗಗಳು 1000 ಸಂಖ್ಯೆಯಲ್ಲಿವೆ, ಪೋಸ್ಟ್‌ಗಳಲ್ಲಿ ಹೇಳುವಂತೆ ಲಕ್ಷಗಟ್ಟಲೇ ಶಿವಲಿಂಗಗಳು ಇಲ್ಲ.. ಈ ಶಿವಲಿಂಗಗಳು ಸಾಮಾನ್ಯವಾಗಿ ಪ್ರತಿವರ್ಷ ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಪೋಸ್ಟ್‌ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact check | ಮಧ್ಯಪ್ರದೇಶ ಸಿಎಂ ಡಾ.ಮೋಹನ್ ಯಾದವ್ ಮುಸಲ್ಮಾನರಿಗೆ ಎಚ್ಚರಿಕೆ ನೀಡಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ : Fact check | ಮಧ್ಯಪ್ರದೇಶ ಸಿಎಂ ಡಾ.ಮೋಹನ್ ಯಾದವ್ ಮುಸಲ್ಮಾನರಿಗೆ ಎಚ್ಚರಿಕೆ ನೀಡಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *