“ಈ ವಿಡಿಯೋ ನೋಡಿ ಕೇರಳದಲ್ಲಿ ಕ್ರಿಸ್‌ಮಸ್ ಹಬ್ಬದಂದು ಚಂದಾ ಎತ್ತುವ ರೀತಿ ಹೇಗಿದೆ ಎಂದು. ಕೇರಳದ ಎಡಪಂಥಿರು ಬೆಳೆಸಿದ ಸುಲಿಗೆ ದಂಧೆ ಇದು.” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಬಳಸಿಕೊಂಡು ಕೇರಳದ ಎಡಪಂಥಿಯ ಪಕ್ಷಗಳ ವಿರುದ್ಧ ಮತ್ತು ಕ್ರೈಸ್ತ ಸಮುದಾಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟೀಕೆ ಮಾಡಲಾಗುತ್ತಿದೆ.
“ಹೀಗೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ಕುಳಿತಿದ್ದು, ಆತನ ಬಳಿ ಬಂದ ಕೆಲ ಯುವಕರ ಗುಂಪು ಕ್ರಿಸ್‌ಮಸ್ ಆಚರಣೆಗೆ ಚಂದಾ ವಸೂಲಿಗೆ ಮುಂದಾಗುತ್ತಾರೆ. ಈ ವೇಳೆ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಚಂದಾ ವಸೂಲಿಗೆ ಬಂದವರ ಬಳಿ ನಾನು ಹಣ ಕೊಡುವುದಿಲ್ಲವೆಂದು ವಾಗ್ವಾದ ಮಾಡಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ಚಂದಾ ವಸೂಲಿ ಮಾಡಲು ಬಂದ ಯುವಕರು ಕಾರಿನಲ್ಲಿ ಕುಳಿತ್ತಿದ್ದ ವ್ಯಕ್ತಿಯನ್ನು ಕಾರಿನಿಂದ ಹೊರಗೆಳೆದು ತಂದು ಹಲ್ಲೆ ನಡೆಸುತ್ತಾರೆ” ಇವಿಷ್ಟು ಘಟನೆ ಆ ವಿಡಿಯೋದಲ್ಲಿ ಸೆರೆಯಾಗಿದ್ದು, ಇದೀಗ ಇದೇ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ.
Fact Check
ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಅಂತರ್ಜಾಲದಲ್ಲಿ ಹುಡುಕಾಟ ನಡೆಸಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಲಾಯಿತು. ಈ ವೇಳೆ ಕ್ವಿಂಟ್ ಮಾಧ್ಯಮದ ವರದಿಯೊಂದು ಕಂಡು ಬಂದಿದೆ. ಅದರಲ್ಲಿ ಇದೊಂದು ನಾಟಕೀಯ ವಿಡಿಯೋ ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಇದೇ ವರದಿಯ ಆಧಾರದ ಮೇಲೆ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದರಲ್ಲಿ ವಾಟರ್ ಮಾರ್ಕ್ ಇರುವುದು ಪತ್ತೆಯಾಗಿದೆ. ಅದರಲ್ಲಿ ಸುಜಿತ್ ರಾಮಚಂದ್ರನ್ ಎಂಬ ಹೆಸರು ಕಾಣಿಸಿಕೊಂಡಿದೆ.
ಈ ಹೆಸರಿನ ಆಧಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸಿದಾಗ, ಫೆಸ್‌ಬುಕ್‌ನಲ್ಲಿ ಸುಜಿತ್ ರಾಮಚಂದ್ರನ್ ಹೆಸರಿನ ಖಾತೆಯೊಂದು ಕಾಣಿಸಿಕೊಂಡಿದೆ. ಅದರಲ್ಲಿ ಈ ವಿಡಿಯೋ ಕೂಡ ಕಾಣಿಸಿಕೊಂಡಿದ್ದು ವಿಡಿಯೋದಲ್ಲಿ ಡಿಸ್ಕ್ಲೈಮರ್ ಕೂಡ ನೀಡಲಾಗಿದೆ. ಅದರಲ್ಲಿ ಇದೊಂದು ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಡಲಾದ ವಿಡಿಯೋ ಎಂದು ಬರೆದುಕೊಳ್ಳಲಾಗಿದೆ. ಇನ್ನು ಈ ವಿಡಿಯೋದಲ್ಲಿ ಅಭಿನಯಿಸಿದವರು ಜೈಷ್ಣು ಮಜ಼ವಿಲ್ಲು, ಸರ್ಜಿತ್, ಬೈಜು, ಸಿದ್ದಿಕ್, ನೌಷದ್, ಮಹೇಶ್, ವಿಜಯನ್ ಕಡಕಲ್ ಜ್ಯೋತಿಷ್ ಮತ್ತು ಪಿಚ್ಚು ಎಂಬುದು ತಿಳಿದು ಬಂದಿದೆ.
ಈ ವಿಡಿಯೋದ ಪೂರ್ತಿ ಆವೃತ್ತಿ ನೋಡಿದವರಿಗೆ ಇದೊಂದು ನಾಟಕೀಯ ವಿಡಿಯೋ ಎಂಬುದು ತಿಳಿದು ಬರಲಿದೆ. ಇದೇ ವಿಡಿಯೋವನ್ನು ಸುಜಿತ್ ರಾಮಚಂದ್ರನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದೇ ವಿಡಿಯೋದ ಕೆಲವೇ ಕೆಲವು ತುಣುಕುಗಳನ್ನು ಕಟ್ ಮಾಡಿ, ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸುಜಿತ್ ರಾಮಚಂದ್ರನ್ ಹಾಗೂ ಅವರ ತಂಡ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ನಾಟಕೀಯಾಗಿದೆ. ಇದು ನಿಜವಾದ ವಿಡಿಯೋವಲ್ಲ. ನಾವು ಡಿಸ್ಕ್ಲೈಮರ್‌ನಲ್ಲಿ ಕೂಡ ಇದೋಂದು ಜಾಗೃತಿ ಉದ್ದೇಶದಿಂದ ಮಾಡಲಾದ ವಿಡಿಯೋ ಎಂದು ಬರೆದುಕೊಂಡಿದ್ದೇವೆ ಆದರೆ ಯಾರೋ ಕೆಲವರು ನಮ್ಮ ವಿಡಿಯೋವನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಹರಡುತ್ತಿದ್ದಾರೆ ಎಂದು ಹೇಳಿವುದರ ಜೊತೆಗೆ ತಮ್ಮ ವಿಡಿಯೋದಿಂದ ಆದ ಎಡವಟ್ಟಿಗೆ ಕ್ಷಮೆ ಯಾಚಿಸಿದ್ದಾರೆ.
ಒಟ್ಟಾರೆಯಾಗಿ ಕೇರಳದಲ್ಲಿ ಕ್ರಿಸ್‌ಮಸ್ ಹಬ್ಬದಲ್ಲಿ ಚಂದಾ ಎತ್ತಲು ಬಂದ ಕಿಡಿಗೇಡಿಗಳಿಂದ ಅಮಾಯಕ ಯುವಕನ ಮೇಲೆ ಹಲ್ಲೆ ನಡೆದಿದೆ ಎಂಬುದು ನಾಟಕಿಯ ವಿಡಿಯೋ ಹಾಗೂ ಈ ರೀತಿಯ ವಿಡಿಯೋವನ್ನು ಹಂಚಿಕೊಳ್ಳುವ ಮೊದಲು ಎಚ್ಚರ ವಹಿಸಿ.
ಇದನ್ನೂ ಓದಿ : Fact Check: 5ನೇ ಕಿಂಗ್ ಜಾರ್ಜ್ ಶ್ಲಾಘಿಸಿ ರವೀಂದ್ರನಾಥ ಟ್ಯಾಗೋರ್‌ರವರು “ಜನ ಗಣ ಮನ” ಗೀತೆ ರಚಿಸಿಲ್ಲ
ಈ ವಿಡಿಯೋ ನೋಡಿ : Fact Check: 5ನೇ ಕಿಂಗ್ ಜಾರ್ಜ್ ಶ್ಲಾಘಿಸಿ ರವೀಂದ್ರನಾಥ ಟ್ಯಾಗೋರ್‌ರವರು “ಜನ ಗಣ ಮನ” ಗೀತೆ ರಚಿಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ