ಯಾತ್ರೆ ವೇಳೆ ಹಿಂದೂಗಳ ಶ್ರೀರಾಮ್ ಘೋಷಣೆಯಿಂದ ಕಿರಿಕಿರಿಯಾದ ಕೈ ಯುವರಾಜ ರಾಹುಲ್ !
ಬಸ್ ನಿಲ್ಲಿಸಿ ಜನರ ಗುಂಪಿನ ಮೇಲೆ ಸಿಟ್ಟಿನಿಂದ ಹೋದ ಕೈ ನೇತಾರ ? 🙆
ಏಕಿಷ್ಟು ಸಿಟ್ಟು ?
ಇದು ನಾಯಕನ ಲಕ್ಷಣವೇ ?
ಏನಿದು ಆವೇಶ ? ಇದು PM ಅಭ್ಯರ್ಥಿ ವರ್ತಿಸುವ ರೀತಿಯೇ ? ಎಂಬ ಸಂದೇಶದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.
ಈ ಕುರಿತು ಹಲವು ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ ರಾಹುಲ್ ಗಾಂಧಿ ನೇತೃತ್ವದ ಭಾರತ್ ನ್ಯಾಯ್ ಯಾತ್ರೆಗೆ ಅಸ್ಸಾಂನ ನಾಗಾವ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಡ್ಡಿ ಎಂಬ ಹಲವು ವರದಿಗಳು ದೊರಕಿವೆ. ಈ ವೇಳೆ ಗಲಾಟೆಯಿಂದಾಗಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರಿಗೆ ಗಾಯಗಳಾಗಿವೆ ಎಂದು ಕನ್ನಡಪ್ರಭ ವರದಿ ಮಾಡಿದೆ. ಅಸ್ಸಾಂ: ಭಾರತ್ ಜೋಡೋ ನ್ಯಾಯ ಯಾತ್ರೆಗೆ ಮುತ್ತಿಗೆ, ರಾಹುಲ್ ವಿರುದ್ಧ ಘೋಷಣೆ, ಕಾಂಗ್ರೆಸ್ ಇಂದು ಪ್ರತಿಭಟನೆ ಎಂದು ಟಿವಿ9 ವರದಿ ಮಾಡಿದೆ. ಭಾರತ್ ನ್ಯಾಯ ಯಾತ್ರೆ: ಬಿಜೆಪಿ ಕಾರ್ಯಕರ್ತರಿಂದ ಜೈರಾಮ್ ರಮೇಶ್ ವಾಹನದ ಮೇಲೆ ದಾಳಿ ಎಂದು ಈದಿನ.ಕಾಂ ವರದಿ ಮಾಡಿದೆ. ಆದರೆ ಎಲ್ಲಿಯೂ ರಾಹುಲ್ ಗಾಂಧಿ ಸಿಟ್ಟಿನಿಂದ ಹೊರನಡೆದರು ಎಂದು ವರದಿಯಾಗಿಲ್ಲ.
ಆನಂತರ ವಿಡಿಯೋಗಳಿಗಾಗಿ ಹುಡುಕಾಟ ನಡೆಸಿದಾಗ ಸ್ವತಃ ರಾಹುಲ್ ಗಾಂಧಿಯವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಕಂಡುಬಂದಿದೆ. “ಪ್ರೀತಿಯ ಅಂಗಡಿ ಎಲ್ಲರಿಗೂ ತೆರೆದಿರುತ್ತದೆ, ಭಾರತ ಒಂದಾಗುತ್ತದೆ, ಭಾರತ ಗೆಲ್ಲುತ್ತದೆ” ಎಂಬ ಶೀರ್ಷಿಕೆಯೊಟ್ಟಿಗೆ ಇರುವ ವಿಡಿಯೋದಲ್ಲಿ ರಾಹುಲ್ ಗಾಂಧಿಯವರು ಯಾತ್ರೆಗೆ ಅಡ್ಡಿಪಡಿಸುತ್ತಿರುವುದನ್ನು ಕಂಡ ನಂತರ ಅವರಿಗೆ ನಗುತ್ತಲೇ ಕೈ ಬೀಸುತ್ತಾರೆ. ನಂತರ ನೀವು ಯಾಕೆ ಗಾಡಿ ನಿಲ್ಲಿಸಬಾರದು ಎಂದು ಚಾಲಕನಿಗೆ ಹೇಳುವುದನ್ನು ಕೇಳಬಹುದು. ಆನಂತರ ಅವರು ವಾಹನದಿಂದ ಇಳಿದು ಜೈ ಶ್ರೀರಾಂ ಎಂದು ಕೂಗುತ್ತಿರುವ ಜನರತ್ತ ಹೋಗುತ್ತಾರೆ. ಆದರೆ ಭದ್ರತಾ ಸಿಬ್ಬಂದಿ ಅದಕ್ಕೆ ಆಸ್ಪದ ಕೊಡುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ಮತ್ತೆ ವಾಹನ ಏರಿ ಘೋಷಣೆ ಕೂಗುವವರತ್ತ ಫ್ಲೈಯಿಂಗ್ ಕಿಸ್ ನೀಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಎಲ್ಲಿಯೂ ರಾಹುಲ್ ಕಿರಿಕಿರಿಯಾಗಿ, ಆವೇಶದಿಂದ ವರ್ತಿಸಿರುವುದು ಕಂಡುಬಂದಿಲ್ಲ.
सबके लिए खुली है मोहब्बत की दुकान,
जुड़ेगा भारत, जीतेगा हिंदुस्तान।🇮🇳 pic.twitter.com/Bqae0HCB8f— Rahul Gandhi (@RahulGandhi) January 21, 2024
ಒಟ್ಟಾರೆಯಾಗಿ ಹೇಳುವುದಾದರೆ ಅಸ್ಸಾಂನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಬಿಜೆಪಿ ಬೆಂಬಲಿಗರು ದಾಳಿ ಮಾಡಿ ಅಡ್ಡಿಪಡಿಸಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ತಮ್ಮ ವಿರೋಧಿಗಳತ್ತ ಕೈ ಬೀಸಿ ಶುಭ ಕೋರಿದ್ದಾರೆ. ಕೆಳಗಿಳಿದು ಮಾತನಾಡಲು ಯತ್ನಿಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಅದಕ್ಕೆ ಆಸ್ಪದ ಕೊಡುವುದಿಲ್ಲ. ಆನಂತರ ರಾಹುಲ್ ಘೋಷಣೆ ಕೂಗುವವರತ್ತ ಫ್ಲೈಯಿಂಗ್ ಕಿಸ್ ಮಾಡಿದ್ದಾರೆ. ಎಲ್ಲಿಯೂ ಕಿರಿಕಿರಿಯಾಗಿ, ಆವೇಶದಿಂದ ವರ್ತಿಸಿರುವುದು ಕಂಡುಬಂದಿಲ್ಲ. ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಎಡಿಟೆಡ್ ಆಗಿದೆ.
ಇದನ್ನೂ ಓದಿ; Fact Check | ಪೀರ್ ಪಾಷ ಬಂಗ್ಲಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ಆಧಾರವಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.