Fact Check | ಪೀರ್‌ ಪಾಷ ಬಂಗ್ಲಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ಆಧಾರವಿಲ್ಲ

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದೆ. ಸಿಎಂ ಸಿದ್ದರಾಮಯ್ಯ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಕ್ಕೆ ಸಾಕಷ್ಟು ಜನ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ರೆ, ಕೆಲವರು “ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಕೆ? ಫಿರ್‌ ಸಾಬ್‌ ದರ್ಗಾ ಆಗಿರುವ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ಮತ್ತೆ ಮೂಲ ಸ್ಥಿತಿಗೆ ಬರುವುದು ಯಾವಾಗ? ಬಸವಣ್ಣನವರಿಗೆ ನ್ಯಾಯ ಸಿಗುವುದು ಯಾವಾಗ?” ಎಂದು ಪ್ರಶ್ನಿಸಿ ಕಮೆಂಟ್‌ ಮಾಡುತ್ತಿದ್ದಾರೆ.. ಈ ಕುರಿತು ನಿಜವೆಷ್ಟು ಸುಳ್ಳುಗಳೆಷ್ಟು ಎಂದು ಪರಿಶೀಲಿಸೋಣ ಬನ್ನಿ..

ಫ್ಯಾಕ್ಟ್‌ಚೆಕ್‌

ಈ ಪೀರ್‌ ಪಾಷಾ ದರ್ಗಾವನ್ನು ಶಿವಮಲ್ಲಿಕಾರ್ಜುನ ಸ್ವಾಮಿ ದರ್ಗಾ ಅಂತಲೂ ಕರೆಯುತ್ತಾರೆ. ಈ ಕುರಿತು 2018 ಕ್ಕೂ ಮೊದಲು ಯಾವುದೇ ರೀತಿಯಾದ ವಿವಾದಗಳು ಇರಲಿಲ್ಲ. ಆದರೆ 2018 ರಿಂದ ಸಾಕಷ್ಟು ಜನ ಇದು ದರ್ಗಾ ಅಲ್ಲ.. ಇದೇ ಮೂಲ ಅನುಭವ ಮಂಟಪ. ಈ ದರ್ಗಾದ ಕಂಬಗಳನ್ನ ನೋಡಿದ್ರೆ ಇದು ಹಿಂದೂ ದೇವಾಲಯದ ಕಂಬಗಳಂತೆ ಕಾಣುತ್ತಿವೆ ಎಂದೆಲ್ಲ ಹೇಳಿಕೆಗಳನ್ನ ನೀಡುತ್ತಿದ್ದರು. ಕೆಲ ಮಠಾಧೀಶರು ಕೂಡ ಇದೇ ನಿಜವೆಂದು ನಂಬಿ “ನಮ್ಮ ನಡೆ ಮೂಲ ಅನುಭವ ಮಂಟಪದ ಕಡೆ” ಎಂದು ಜಾಥವನ್ನ ಹಮ್ಮಿಕೊಳ್ಳಲು ಪ್ರಯತ್ನಿಸಿದ್ದರು.

2022 ರಲ್ಲಿ ಮಠಾಧೀಶರಿಂದ ನಡೆಸಲಾದ ಸಭೆ
                                           2022 ರಲ್ಲಿ ಮಠಾಧೀಶರಿಂದ ನಡೆಸಲಾದ ಸಭೆ

ಯಾವಾಗ ಈ ರೀತಿಯಾದ ವಿವಾದ ಪ್ರಾರಂಭವಾಯಿತೋ ಆಗಲೇ ಸಾಕಷ್ಟು ಮಂದಿ ಈ ದರ್ಗಾದ ಕುರಿತು ಸ್ಪಷ್ಟನೆಯನ್ನು ನೀಡಿದ್ದರು. ಅದರಲ್ಲೂ ಪ್ರಮುಖವಾಗಿ “ಪೀರ್ ಪಾಷಾ ದರ್ಗಾದಲ್ಲಿ ಅನುಭವ ಮಂಟಪವಿದ್ದ ಬಗ್ಗೆ ಸಾಕ್ಷಿಗಳಿಲ್ಲ ಬಸವಣ್ಣನವರ ಬಗ್ಗೆ ಇರುವ ಹತ್ತಾರು ಗ್ರಂಥಗಳಲ್ಲೂ ಇದರ ಉಲ್ಲೇಖವಿಲ್ಲ. ಬಸವಣ್ಣನವರು ಸ್ಥಾವರಕ್ಕೆ ಮಹತ್ವ ಕೊಟ್ಟಿರಲಿಲ್ಲ. ಆದ್ದರಿಂದ ಅವರ ಅನುಭವ ಮಂಟಪ ಬಹುತೇಕ ಸಾಧಾರಣ ಕಟ್ಟಡ, ಹಂಚಿನ ಮನೆ ಅಥವಾ ಹಲವಾರು ಮನೆಗಳೇ ಇದ್ದಿರಬಹುದು ನಂತರದಲ್ಲಿ ಅದು ನಶಿಸಿರಲುಬಹುದು ಅಂತ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದೇವರು 2022 ರಲ್ಲಿ ಪ್ರಜಾವಾಣಿಗೆ ಪ್ರತಿಕ್ರಿಯೆಯನ್ನು ನೀಡಿದ್ದರು.

ಪ್ರಜಾವಾಣಿ ಪತ್ರಿಕೆಯಲ್ಲಿನ ಹೇಳಿಕೆ
ಪ್ರಜಾವಾಣಿ ಪತ್ರಿಕೆಯಲ್ಲಿನ ಹೇಳಿಕೆ

ಇನ್ನು ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಹಿರಿಯ ಪತ್ರಕರ್ತರಾದ ರಿಷಿಕೇಶ ಬಹದ್ದೂರ ದೇಸಾಯಿಯವರನ್ನು ಮಾತನಾಡಿಸಿತು. ಅವರು, “ಕಲ್ಯಾಣ ಕರ್ನಾಟಕದಲ್ಲಿ ಹಿಂದೂ ಮತ್ತು ಮುಸಲ್ಮಾನರ ನಡುವೆ ಸೌಹಾರ್ದಯುತ ಸಂಬಂಧವಿತ್ತು ಮತ್ತು ಈಗಲೂ ಅದನ್ನ ಕಾಣಬಹುದು. ಅದೇ ರೀತಿಯಲ್ಲಿ ಸಾಂಸ್ಕೃತಿಕ ವಿನಿಮಯ ಅನ್ನುವಂತದ್ದು ಹಲವು ಶತಮಾನಗಳಿಂದಲೂ ಕೂಡ ಆಗುತ್ತಾ ಬಂದಿದೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಶಿವಮಲ್ಲಿಕಾರ್ಜುನ ಸ್ವಾಮಿ ದರ್ಗಾ” ಎಂದಿದ್ದಾರೆ. ಜೊತೆಗೆ ನಾನು ಗೌರಿ.ಕಾಮ್‌ ನಲ್ಲೂ ಕೂಡ ಹಲವು ಮಾಹಿತಿಗಳನ್ನ ಇದೇ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ರಿಷಿಕೇಶ ಬಹದ್ದೂರ ದೇಸಾಯಿ ಅವರು ಮಾಹಿತಿಯನ್ನು ನೀಡಿದ್ದರು.

 

ಹೃಷಿಕೇಶ ಬಹದ್ದೂರ ದೇಸಾಯಿ
                           ಹೃಷಿಕೇಶ ಬಹದ್ದೂರ ದೇಸಾಯಿ

ಇಂತಹ ದರ್ಗಾ ಜಗತ್ತಿನಲ್ಲಿ ಎಲ್ಲಿಯೂ ಕಾಣಲು ಸಿಗುವುದಿಲ್ಲ. ಕಾರಣ ಈ ದರ್ಗಾದ ಮೇಲೆ ಹಿಂದೂ ಮತ್ತು ಮುಸಲ್ಮಾನ ಇಬ್ಬರಿಗೂ ಕೂಡ ಸಾಕಷ್ಟು ಗೌರವ ಭಕ್ತಿ ಭಾವಗಳಿವೆ. ಮತ್ತು ಕಲ್ಯಾಣ ಕರ್ನಾಟಕದಲ್ಲಿ ಗುರು ಪಂಥವು ಬಹಳ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದು, ಈ ಪಂತಕ್ಕೆ ಯಾವುದೇ ಜಾತಿ ಮತಗಳು ಅಡ್ಡಿ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.. ಹೀಗೆ ಈ ಕಟ್ಟಡದ ಕಂಬಗಳು ಕೂಡ ಸಾಂಸ್ಕೃತಿಕ ವಿನಿಮಯಗಳ ಕಾರಣದಿಂದಾಗಿ ಹಿಂದೂ ಮುಸ್ಲಿಮರ ಸೌಹಾರ್ದಯುತ ದೃಷ್ಟಿಯಿಂದಾಗಿ ದೇವಾಲಯದ ಕಂಬಗಳಂತೆ ನಿರ್ಮಿಸಿರಬಹುದು ಎಂಬುದು ಹಲವರ ಮಾತಾಗಿದೆ.

ಪೀರ್ ಪಾಷಾ ದರ್ಗಾ
                                                                  ಪೀರ್ ಪಾಷಾ ದರ್ಗಾ

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಪೀರ್ ಪಾಷಾ ಬಾಂಗ್ಲಾ ದರ್ಗಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ರೀತಿಯಾದ ಸ್ಪಷ್ಟವಾದ ಸಾಕ್ಷಿಗಳು ಕಂಡುಬಂದಿಲ್ಲ ಮತ್ತು ಇತ್ತೀಚಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಕೆಲ ಪ್ರೊಪಗೆಂಡಾ ಮಾಧ್ಯಮಗಳು ಮತ್ತು ಕೋಮುವಾದಿ ಸಂಘಟನೆಗಳು ಈ ರೀತಿಯಾದ ಸುಳ್ಳು ಸುದ್ದಿಯನ್ನು ಹುಟ್ಟು ಹಾಕಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಯಾವುದಾದರು ಸುದ್ದಿಗಳ ಬಗ್ಗೆ ಅನುಮಾನ ಬಂದರೆ ನಮಗೆ ಶೇರ್‌ ಮಾಡಿ


ಇದನ್ನೂ ಓದಿ : ಟಿಪ್ಪು ಸುಲ್ತಾನ್‌ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ


ಈ ವಿಡಿಯೋ ನೋಡಿ : ಟಿಪ್ಪು ಸುಲ್ತಾನ್‌ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ

Leave a Reply

Your email address will not be published. Required fields are marked *