ಅಯೋಧ್ಯೆಗೆ ತೆರಳುತ್ತಿದ್ದ ಪಟಾಕಿ ಲಾರಿ ಭಸ್ಮ ಎಂದು ಉನ್ನಾವೋ ಘಟನೆ ಹಂಚಿಕೆ

ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ತಮಿಳುನಾಡಿನಿಂದ ಪಟಾಕಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಸುಟ್ಟು ಹೋಗಿದೆ ಎಂದು ಎನ್‌ಡಿಟಿವಿ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಅದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಈ ಕುರಿತು ಗೂಗಲ್ ಕೀ ವರ್ಡ್ ಮೂಲಕ ಹುಡುಕಿದಾಗ, ಉನ್ನಾವೋ ಜಿಲ್ಲೆಯಲ್ಲಿ ಪಟಾಕಿ ಲಾರಿ ಬೆಂಕಿಗೆ ಆಹುತಿಯಾಗಿರುವ ಕುರಿತು ಅಲ್ಲಿನ ಪೊಲೀಸ್ ಇಲಾಖೆ ಹೊರಡಿಸಿದ ಪ್ರಕಟಣೆ ಕಂಡುಬಂದಿದೆ. “ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸಂಚಾರ ಸುಗಮವಾಗಿ ಸಾಗುತ್ತಿದೆ. ಟ್ರಕ್ ತಮಿಳುನಾಡಿನಿಂದ ಬಹ್ರೈಚ್‌ಗೆ ಹೋಗುತ್ತಿತ್ತು, ಅದರಲ್ಲಿ ಪಟಾಕಿ, ಮಕ್ಕಳ ಪೋಸ್ಟರ್‌ಗಳು, ಚಲನಚಿತ್ರ ಕಲಾವಿದರು ಮತ್ತು ಅಂಗಡಿ ಸಾಮಗ್ರಿಗಳಿಗಾಗಿ ಧಾರ್ಮಿಕ ಪೋಸ್ಟರ್‌ಗಳನ್ನು ತುಂಬಲಾಗಿತ್ತು” ಎಂದು ಉನ್ನಾವೋ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಖಾರ್ಗಿಖೇಡ ಗ್ರಾಮದ ಬಳಿ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡ ಘಟನೆಯ ಬಗ್ಗೆ ಎಂದು ಉನ್ನಾವೋ ಪೊಲೀಸರು ಮಾಹಿತಿ ನೀಡಿದ್ದಾರೆ. ದಿನಾಂಕ 17.01.2024 ರಂದು ಬೆಳಿಗ್ಗೆ ಸುಮಾರು 4:00 ಗಂಟೆಗೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಟಾಕಿ ತುಂಬಿದ್ದ ಟ್ರಕ್ ಸಂಖ್ಯೆ TN 28 AL6639 ಪೂರ್ವಾ ಪ್ರದೇಶದ ಖಾರ್ಗಿಖೇಡಾ ಗ್ರಾಮದ ಬಳಿ ಹಲವು ಕಾರಣಗಳಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಆನಂತರ ಹೆಚ್ಚಿನ ಮಾಹಿತಿಗಾಗಿ BOOM ಫ್ಯಾಕ್ಟ್ ಚೆಕ್ ಮಾಧ್ಯಮವು ಉನ್ನಾವೊದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೋನಮ್ ಸಿಂಗ್ ಅವರನ್ನು ಸಂಪರ್ಕಿಸಿದೆ. ಸೋನಮ್ ಸಿಂಗ್‌ರವರು ಮಾತನಾಡಿ, “ಅಯೋಧ್ಯೆಗೆ ತೆರಳುತ್ತಿದ್ದ ಪಟಾಕಿ ಲಾರಿ ಭಸ್ಮ ಎಂಬುದು ಸುಳ್ಳು. ಬದಲಿಗೆ  ತಮಿಳುನಾಡಿನ ಶಿವಕಾಶಿಯಿಂದ ಟ್ರಕ್ ಉತ್ತರ ಪ್ರದೇಶದ ಬಹ್ರೈಚ್‌ಗೆ ಹೋಗುತ್ತಿತ್ತೆ ಹೊರತು ಅಯೋಧ್ಯೆಗೆ ಅಲ್ಲ. ಈ ಪಟಾಕಿಗಳಿಗೂ ಅಯೋಧ್ಯೆಯಲ್ಲಿನ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.

ಈ ಮೇಲಿನ ಎಲ್ಲಾ ಅಂಶಗಳಿಂದ ಅಯೋಧ್ಯೆಗೆ ತೆರಳುತ್ತಿದ್ದ ಪಟಾಕಿ ಲಾರಿ ಭಸ್ಮ ಎಂದು ಉನ್ನಾವೋ ಜಿಲ್ಲೆಯಲ್ಲಿ ನಡೆದ ಅಪಘಾತವನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ; Fact Check: ಟಿಪ್ಪು ಸುಲ್ತಾನ್‌ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *