Fact Check: ಸಿಂಗಾಪುರದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ರಾಹುಲ್ ಚಡಪಡಿಸಿದ್ದಾರೆ ಎಂಬುದು ಸುಳ್ಳು

ರಾಹುಲ್

ರಾಹುಲ್ ಸಿಂಗಾಪುರದಲ್ಲಿ ಉತ್ತರ ನೀಡಲು ಚಡಪಡಿಸಿದ ಪ್ರಶ್ನೆಗಳಿವು: 1. ಭಾರತ ಬಡದೇಶ ಅನ್ನೋದಾದ್ರೆ ನಿಮ್ಮ ಕುಟುಂಬ ಹೇಗೆ ಶ್ರೀಮಂತವಾಗಿದೆ ? 2. ಗಾಂಧಿ ಕುಟುಂಬವೇ 62ವರ್ಷ ಆಡಳಿತ ನಡೆಸಿತು ಆದರೂ ಬಡತನ ನಿರ್ಮೂಲನೆ ಯಾಕಾಗಿಲ್ಲ..? 3. ಭಾರತದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ನಾಲ್ಕು ವರ್ಷ ದೇಶ ಆಳಿದ ಮೋದಿ ಕಾರಣರೇ ಅಥವಾ 62 ವರ್ಷ ದೇಶ ಆಳಿದ ಕಾಂಗ್ರೇಸ್ ಕಾರಣವೇ..? 4. ಈ ನಿಮ್ಮ ಹೋರಾಟ ದೇಶದ ಬಡವರ ಪರವೋ ಅಥವಾ ಆರೆಸ್ಸೆಸ್ ವಿರುದ್ಧವೋ..? ಎಂಬ ಹೇಳಿಕೆಯ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಅದೇ ರೀತಿ, ಸಿಂಗಾಪುರದ ಪ್ರವಾಸದ ಸಂದರ್ಭದಲ್ಲಿ ಭಾಗವಹಿಸಿದ ಈ ಚರ್ಚೆಯಲ್ಲಿ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿಯವರು ಚಡಪಡಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿತ್ತು. ಅದರಲ್ಲಿ ವ್ಯಕ್ತಿಯೊಬ್ಬರು ನಿಮ್ಮ ಕುಟುಂಬದ ಸದಸ್ಯರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಿಡಿಪಿ ಶೇಕಡವಾರು ಕಡಿಮೆಯಾಗಿರುತ್ತದೆ ಏಕೆ? ಎಂದು ಪ್ರಶ್ನಿಸಿದ್ದರು. ಅದಕ್ಕೆರಾಹುಲ್  ಅವರು ಯಾವ ಆಧಾರದ ಮೇಲೆ(hypothesis) ಈ ಆರೋಪ ಮಾಡುತ್ತಿದ್ದೀರಿ ಎಂದು ಮರುಪ್ರಶ್ನಿಸಿದ್ದರು. ಈ ಕುರಿತು ನನ್ನ ಪುಸ್ತಕದಲ್ಲಿ ಚರ್ಚಿಸಿದ್ದೇನೆ ಎಂದು ಉತ್ತರಿಸಿದ್ದರು. ಈ ಪ್ರಶ್ನೆ ಕೇಳಿರುವ ವಿಡಿಯೋ ಸಾಕಷ್ಟು ವೈರಲ್ ಸಹ ಆಗಿತ್ತು.

ಫ್ಯಾಕ್ಟ್‌ಚೆಕ್: ವೈರಲ್ ಪೋಸ್ಟರ್ 8 ಮಾರ್ಚ್‌ 2018ರಲ್ಲಿ ಸಿಂಗಾಪುರದ ಪ್ರತಿಷ್ಠಿತ ಲೀ ಕ್ವಾನ್ ಯೂ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯಲ್ಲಿ ನಡೆದ ಪ್ಯಾನಲ್ ಚರ್ಚೆ ಸಂದರ್ಭದ್ದಾಗಿದೆ. ಈ ಚರ್ಚೆಯಲ್ಲಿ ಸ್ವಾತಂತ್ರ್ಯದ ನಂತರ ಭಾರತ ಹೇಗೆ ಮುಂದುವರೆದಿದೆ ಮತ್ತು ಅದರ ಪ್ರಮುಖ ಸಾಧನೆಗಳೇನು?, ನ್ಯಾಯಾಂಗ ಸುಧಾರಣೆಗಳು, ಮಹಿಳಾ ಮೀಸಲಾತಿ, ಉತ್ಪಾದನೆ, ಭಾರತದಲ್ಲಿ ನಿರುದ್ಯೋಗ, ಸಿಂಗಾಪುರ ಮತ್ತು ಭಾರತದ ಭವಿಷ್ಯ, ಅಂತರರಾಷ್ಟ್ರೀಯ ಒಳಗೊಳ್ಳುವಿಕೆ ವಿಷಯಗಳ ಕುರಿತು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಸಮರ್ಪಕವಾಗಿ ಉತ್ತರಿಸಿದ್ದಾರೆ ಹೊರತು ಚಡಪಡಿಸಿಲ್ಲ.

ಈ ಚರ್ಚೆ ಸುಮಾರು ಒಂದು ಗಂಟೆಗಳ ಕಾಲ ನಡೆದಿದ್ದು ರಾಹುಲ್ ಗಾಂಧಿ ಅವರ ಅಧಿಕೃತ ಯೂಟ್ಯೂಬ್‌ನಲ್ಲಿ ಮೂಲ ವಿಡಿಯೋ ಲಭ್ಯವಿದ್ದು ನೋಡಬಹುದುದಾಗಿದೆ. ಸಿಂಗಾಪುರದ ಪ್ರತಿಷ್ಠಿತ ಲೀ ಕ್ವಾನ್ ಯೂ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯಲ್ಲಿ ನಡೆದ ಪ್ಯಾನಲ್ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತದ ಸಾಂಸ್ಥಿಕ ರಚನೆಗೆ ಸವಾಲು ಇದೆ ಎಂದು ಹೇಳಿದ್ದರು.

“ನನ್ನ ದೇಶದ ಬಗ್ಗೆ ನನಗೆ ಏನು ಹೆಮ್ಮೆ ಇದೆ ಎಂದು ನೀವು ನನ್ನನ್ನು ಕೇಳಿದರೆ… ಇದು ಬಹುತ್ವದ ಕಲ್ಪನೆಯಾಗಿದೆ. ಭಾರತದ ಜನರು ಏನು ಬೇಕಾದರೂ ಹೇಳಬಹುದು, ಅವರು ಏನು ಬೇಕಾದರೂ ಮಾಡಬಹುದು ಮತ್ತು ಅವರು ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಆದರೆ ಈಗ ಅದು ಸವಾಲಾಗಿದೆ ” ಎಂದು ಅವರು ಹೇಳಿದ್ದರು. ಇದೇ ಚರ್ಚೆಯಲ್ಲಿ ಲೇಖಕರೊಬ್ಬರು ಕೇಳಿದ ಪ್ರಶ್ನೆಗೂ ಉತ್ತರಿಸಿದ್ದ ರಾಹುಲ್ ಗಾಂಧಿಯವರು “ನಮ್ಮ ಸಾರ್ವಜನಿಕ ಸಂವಾದದಲ್ಲಿ ಧ್ರುವೀಕರಣದ ಬಗ್ಗೆ ಸಾಮಾನ್ಯ ಟೀಕೆಯನ್ನು ಒಳಗೊಂಡಿತ್ತು, ಕೆಲವರು ಭಾರತದ ಎಲ್ಲಾ ಕೆಡುಕುಗಳಿಗೆ ಕಾಂಗ್ರೆಸ್ ಅನ್ನು ದೂಷಿಸಿದರು ಮತ್ತು ಇತರರು ಅದರ ಎಲ್ಲಾ ಶಕ್ತಿಗಳಿಗಾಗಿ ಅದನ್ನು ಶ್ಲಾಘಿಸಿದರು; ಆದರೆ ಭಾರತದ ಯಶಸ್ಸಿಗೆ ಹೆಚ್ಚಾಗಿ ಅದರ ಜನರು ಕಾರಣ” ಎಂದು ಹೇಳುವ ಮೂಲಕ ಮುಕ್ತಾಯಗೊಳಿಸಿದ್ದರು.

ಆದರೆ ಲೇಖಕರೊಬ್ಬರು ಕೇಳಿದ ಪ್ರಶ್ನೆಯ ಪ್ರಮೇಯವೇ ವಾಸ್ತವಿಕವಾಗಿ ತಪ್ಪಾಗಿದೆ ಎಂದು ಲಂಡನ್‌ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಅರ್ಥಶಾಸ್ತ್ರದ ಪ್ರಾಧ್ಯಾಪಕ ಮತ್ತು ಸಂಶೋಧನಾ ವಿಭಾಗದ ಉಪ ಮುಖ್ಯಸ್ಥ ಮೈತ್ರಿಶ್ ಘಾಟಕ್ ಅವರು ಹೇಳಿದ್ದಾರೆ. ನೆಹರೂ, ಇಂದಿರಾ ಗಾಂಧಿಯ ನಂತರ 1980ರ ಸುಮಾರಿಗೆ ನಮ್ಮ ತಲಾ ಆದಾಯ ಮತ್ತು ಜಿಡಿಪಿ ಹೆಚ್ಚಾಗಿರುವುದನ್ನು ಕಾಣಬಹುದು ಎಂದಿದ್ದಾರೆ. 

ಈ ಕುರಿತು ಹೀಗಾಗಲೇ ಅನೇಕ ಸಂಶೋಧನಾ ಪ್ರಬಂಧಗಳು ಲಭ್ಯವಿದ್ದು ಅವುಗಳನ್ನು ಓದುವ ಮೂಲಕ ಸಹ ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಭಾರತದ ಆರ್ಥಿಕತೆಗೆ ನೀಡಿದ ಕೊಡುಗೆಗಳನ್ನು ತಿಳಿಯಬಹುದು. ಹಾಗೆಯೇ ನೆಹರೂ ಅವರಿಂದ ನರೇಂದ್ರ ಮೋದಿಯವರ ಕಾಲಘಟ್ಟದವರೆಗಿನ ಆರ್ಥಿಕ ಬೆಳವಣಿಗೆಯನ್ನು ತಿಳಿಯಬಹುದು.  ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಆದ್ದರಿಂದ ಸಧ್ಯ ವೈರಲ್ ಪೋಸ್ಟರ್ ನಲ್ಲಿರುವ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿ: Fact Check: 2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ECI ಇನ್ನೂ ಪ್ರಕಟಿಸಿಲ್ಲ


ವಿಡಿಯೋ ನೋಡಿ: Fact Check: ರಿಲಯನ್ಸ್ ಜಿಯೋ ಒಂದು ತಿಂಗಳು ಉಚಿತ ರಿಚಾರ್ಚ್‌ ನೀಡಲಿದೆ ಎಂಬ ಸಂದೇಶ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *