ಇತ್ತೀಚೆಗಷ್ಟೇ ಏಷ್ಯಾದ ಅತಿದೊಡ್ಡ ಶ್ರೀಮಂತರಾದ ಮುಕೇಶ್ ಅಂಬಾನಿಯವರ ಹಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕ ಮರ್ಜೆಂಟ್ ಅವರ ವಿವಾಹ ಪೂರ್ವ ಸಮಾರಂಭಕ್ಕೆ ದೇಶ-ವಿದೇಶಗಳಿಂದ ಸಿನಿಮಾ, ಕ್ರಿಕೆಟ್ ಮತ್ತು ಶ್ರೀಮಂತ ವ್ಯಾಪಾರಿಗಳು ಸೇರಿದಂತೆ ವಿವಿಧ ಕ್ಷೇತ್ರದ ತಾರೆಯರು ಆಗಮಿಸಿದ್ದು ದೇಶದಾದ್ಯಂತ ಸುದ್ದಿಯಾಗುತ್ತಿದೆ.
ಇದೇ ಹಿನ್ನಲೆಯಲ್ಲಿ, “ಮುಕೇಶ್ ಅಂಬಾನಿಯವರ ಹುಟ್ಟುಹಬ್ಬ ಮತ್ತು ಅನಂತ್ ಅಂಬಾನಿಯವರ ಮದುವೆಯ ಪ್ರಯುಕ್ತ ಎಲ್ಲಾ ಜಿಯೋ ಬಳಕೆದಾರರಿಗೆ ಒಂದು ತಿಂಗಳ ಉಚಿತ ರೀಚಾರ್ಜ್ ಅನ್ನು ನೀಡುತ್ತಿದೆ” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು ನೋಡೋಣ ಬನ್ನಿ.
ಫ್ಯಾಕ್ಟ್‌ಚೆಕ್ : ಈ ಕುರಿತು ಹುಡುಕಿದಾಗ Jio ಅಧಿಕೃತ ವೆಬ್‌ಸೈಟ್ ಮತ್ತು ಪ್ರಚಾರಗಳ ಪಟ್ಟಿಯಲ್ಲಿ ಅಂತಹ ಕೊಡುಗೆಯ ಕುರಿತು ಯಾವುದೇ ಮಾಹಿತಿ ಕಂಡುಬಂದಿಲ್ಲ. ಹೆಚ್ಚುವರಿಯಾಗಿ, ಮುಖೇಶ್ ಅಂಬಾನಿ ಅವರ ಜನ್ಮದಿನ ಮತ್ತು ಅನಂತ್ ಅಂಬಾನಿ ಅವರ ಮದುವೆಗೆ ಸಂಬಂಧಿಸಿದಂತೆ ಜಿಯೋ ವೆಬ್‌ಸೈಟ್‌ನಲ್ಲಿ ಯಾವುದೇ ವಿಶೇಷ ಪಾವತಿಸಿದ ರೀಚಾರ್ಜ್ ಆಯ್ಕೆಗಳಿಲ್ಲ. ಜಿಯೋದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಸಹ ಪರಿಶೀಲಿಸಿದಾಗ ಅಲ್ಲಿ ಇಂತಹ ಯಾವುದೇ ಆಫರ್‌ಗಳ ಕುರಿತು ಉಲ್ಲೇಖವಿಲ್ಲ.
ಮುಕೇಶ್ ಅಂಬಾನಿಯವರ ಜನ್ಮದಿನವು ಏಪ್ರಿಲ್ ತಿಂಗಳಲ್ಲಿ ಇದ್ದು, ಮಾರ್ಚ್‌ನಲ್ಲಿ ಅಲ್ಲ. ಅವರು 19 ಏಪ್ರಿಲ್ 1957 ರಂದು ಜನಿಸಿದ್ದಾರೆ. ಇನ್ನೂ ಅನಂತ್ ಅಂಬಾನಿ 12 ಜುಲೈ 2024 ರಂದು ವಿವಾಹವಾಗಲಿದ್ದಾರೆ.ಪೋಸ್ಟ್‌ನಲ್ಲಿ ಒದಗಿಸಲಾದ ಲಿಂಕ್ ಸಂಶಯಾಸ್ಪದ ವೆಬ್‌ಸೈಟ್‌ಗೆ ಕೊಡೊಯ್ಯುತ್ತಿದೆ. ಇದಲ್ಲದೆ, ವೆಬ್‌ಸೈಟ್ VI ಮತ್ತು ಏರ್‌ಟೆಲ್ ಬಳಕೆದಾರರಿಗೆ ಉಚಿತ ರೀಚಾರ್ಜ್‌ಗಳನ್ನು ನೀಡುವುದಾಗಿ ಹೇಳಿಕೊಂಡಿದೆ. ಇಂತಹ ಸಂಶಯಾಸ್ಪದ ವೆಬ್‌ಸೈಟ್‌ಗಳಿಗೆ ನಮ್ಮ ಮೊಬೈಲ್ ಸಂಖ್ಯೆಗಳನ್ನು ಒದಗಿಸುವುದರಿಂದ ಸ್ಪ್ಯಾಮ್ ಕರೆಗಳು, ಸಂದೇಶಗಳು ಮತ್ತು ಫಿಶಿಂಗ್ ಲಿಂಕ್‌ಗಳನ್ನು ಸ್ವೀಕರಿಸಲು ಕಾರಣವಾಗಬಹುದು. ಆದ್ದರಿಂದ, ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಮತ್ತು ಈ ರೀತಿಯ ಲಿಂಕ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ತೆರೆಯುವುದನ್ನು ತಪ್ಪಿಸಬೇಕು. ಇಂತಹ ನಕಲಿ ಸಂದೇಶಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಹ್ಯಾಕರ್ಸ್‌ಗಳು ಸೈಬರ್ ಅಪರಾಧಗಳನ್ನು ಎಸಗುವ ಸಾಧ್ಯತೆ ಇದೆ.
ಆದ್ದರಿಂದ ರಿಲಯನ್ಸ್ ಜಿಯೋ ಮುಖೇಶ್ ಅಂಬಾನಿ ಹುಟ್ಟುಹಬ್ಬ ಮತ್ತು ಅನಂತ್ ಅಂಬಾನಿ ಅವರ ವಿವಾಹದ ಪ್ರಯುಕ್ತ ಯಾವುದೇ ಉಚಿತ ರೀಚಾರ್ಜ್ ಅನ್ನು ನೀಡುತ್ತಿಲ್ಲ, ಈ ವೈರಲ್ ಸಂದೇಶ ಸುಳ್ಳಾಗಿದೆ.
ಇದನ್ನು ಓದಿ: ಬಿಜೆಪಿ ಸರ್ಕಾರ 3 ತಿಂಗಳ ಉಚಿತ ರೀಚಾರ್ಜ್ ಮಾಡಿಸುತ್ತಿದೆ ಎಂಬುದು ವಂಚನೆ
ವಿಡಿಯೋ ನೋಡಿ: ಉಳುವವನೇ ಹೊಲದೊಡೆಯ ಕಾನೂನು ಮತ್ತು ಇಂದಿರಾಗಾಂಧಿ ಕುರಿತು ತಪ್ಪು ಮಾಹಿತಿ ಹಂಚಿಕೆ | Indira Gandhi
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.