Fact Check: ತುಮಕೂರಿನಲ್ಲಿ ರಥ ಸುಟ್ಟ ಆರೋಪಿ ಹಿಂದುವೇ ಹೊರತು ಮುಸ್ಲಿಂ ಅಲ್ಲ

ಇತ್ತೀಚೆಗೆ ಭಾರತದಲ್ಲಿ ಯಾವ ದುರ್ಘಟನೆ ಸಂಭವಿಸಿದರೂ ಪೂರ್ವಾಗ್ರಹಪೀಡಿತರಾಗಿ ಅದನ್ನು ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುವ ಚಾಳಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ಸಹ ಇದಕ್ಕೆ ಬೆಂಬಲವಿತ್ತು ಧರ್ಮ ಧರ್ಮಗಳ ನಡುವೆ ದ್ವೇಷ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ.

ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ, “ತುಮಕೂರು ಜಿಲ್ಲೆಯ ನಿಟ್ಟೂರಿನ 800 ವರ್ಷಗಳ ಇತಿಹಾಸ ಇರುವ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ರಥಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಹಿಂದುಗಳು ಮೌನವಾದಷ್ಟು ಅವರ ಅಟ್ಟಹಾಸ ಜಾಸ್ತಿಯಾಗುತ್ತದೆ.” ಎಂದು ಪ್ರತಿಪಾದಿಸಿ ಪೋಸ್ಟರ್ ಒಂದನ್ನು ಹರಿಬಿಡಲಾಗಿದೆ. ಇದನ್ನು ಕನ್ನಡದ ಬಲಪಂಥೀಯ ಮಾಧ್ಯಮವಾದ ಪೋಸ್ಟ್‌ಕಾರ್ಡ್‌ ಹಂಚಿಕೊಂಡಿದೆ. ಹೀಗಾಗಲೇ ಅನೇಕ ಸುಳ್ಳುಗಳನ್ನು ಹಂಚಿಕೊಂಡು ಕುಖ್ಯಾತಿ ಪಡೆದಿರುವ ಪೋಸ್ಟ್‌ ನಿರಂತರವಾಗಿ ಸುಳ್ಳುಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದೆ.

ಇದೇ ಪ್ರತಿಪಾದನೆಯನ್ನು ರಾಜ್ಯ ಬಿಜೆಪಿ ಮಾಡಿದ್ದು ತನ್ನ ಎಕ್ಸ್‌ ಖಾತೆಯಲ್ಲಿ “ಮತಾಂಧ ಖಿಲ್ಜಿ, ಘಜ್ನಿ, ಘೋರಿ ಕಾಲದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದ ಮಾದರಿಯಲ್ಲಿ ತುಮಕೂರಿನ ಗುಬ್ಬಿಯ ನಿಟ್ಟೂರುಪುರದ 800 ವರ್ಷಗಳ ಇತಿಹಾಸ ಹೊಂದಿರುವ ಕಲ್ಲೇಶ್ವರ ಸ್ವಾಮಿಯ ರಥಕ್ಕೆ ಮಟ ಮಟ ಮಧ್ಯಾಹ್ನವೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ, ಇದು ನಿಮ್ಮ ಓಲೈಕೆ ಹಾಗೂ ಅರಾಜಕತೆಯ ಆಡಳಿತದ ದುಷ್ಪರಿಣಾಮ. ಹಿಂದೂ ಧರ್ಮ, ಹಿಂದೂ ದೇವಾಲಯ, ಹಿಂದೂಗಳ ಮೇಲಿನ ನಿಮಗೇಕೆ ಈ ಪರಿ ಅಸಡ್ಡೆ . ಹಿಂದೂಗಳಿಗೆ ನಿಮ್ಮ ಆಡಳಿತದಲ್ಲಿ ರಕ್ಷಣೆ ಇಲ್ಲವೇ..? ಎಂದು ಕೋಮು ಮತ್ತು ರಾಜಕೀಯ ಬಣ್ಣ ಬಳಿದಿದ್ದಾರೆ. ಹಾಗಾದರೆ ಈ ಆರೋಪ ನಿಜವೇ ಎಂದು ಪರಿಶೀಲಿಸೋಣ ಬನ್ನಿ.

ಫ್ಯಾಕ್ಟ್‌ಚೆಕ್: 11 ಮಾರ್ಚ್ 2024ರಂದು ತುಮಕೂರಿನ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದ  ದೇವಾಲಯ ಶ್ರೀ ಕಲ್ಲೇಶ್ವರ ಸ್ವಾಮಿ ರಥಕ್ಕೆ ಉದಾರಿ ಬಿನ್ ರಾಧೇಶಾಂ ಘೋರಕಪುರ ಎಂಬ ವ್ಯಕ್ತಿಯು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆಯಿಂದಾಗಿ ರಥವು ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಹೋಗಿದೆ. ರಥವು ಇದ್ದ ಜಾಗದಲ್ಲೇ ಬೆಂಕಿ ಹಚ್ಚಿರುವ ಉದಾರಿ ಬಿನ್ ರಾಧೇಶಾಂ ಎಂಬ ವ್ಯಕ್ತಿಯು ಪುರ ಗ್ರಾಮಸ್ಥರು ಮತ್ತು ಭಕ್ತಾದಿಗಳ ವಶಕ್ಕೆ ಪಡಿದಿದ್ದಾರೆ ಮತ್ತು ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ರಥವು ಸುಟ್ಟಿರುವುದರಿಂದ 20 ಲಕ್ಷದಷ್ಟು ನಷ್ಟವಾಗಿದೆ ಎಂದು ಹೇಳಿದ್ದಾರೆ.

ಉದಾರಿ ಬಿನ್ ರಾಧೇಶಾಂ 35 ವಯಸ್ಸಿನವರಾಗಿದ್ದು ಉತ್ತರ ಪ್ರದೇಶದ ಘೋರಕಪುರದವರಾಗಿದ್ದಾರೆ. ಸಧ್ಯ ಪೋಲಿಸರು ಅವರನ್ನು ದಸ್ತಗಿರಿ ಮಾಡಿ ನ್ಯಾಯಲಯದ ಮುಂದೆ ಹಾಜರು ಪಡಿಸಿರುವುದಾಗಿ ತುಮಕೂರು ಜಿಲ್ಲಾ ಪೋಲಿಸ್ ಕಛೇರಿ ಸ್ಪಷ್ಟಪಡಿಸಿದೆ. ಮತ್ತು ಈ ಕುರಿತು ಸುಳ್ಳು ಸುದ್ದಿ ಹರಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.ಆದ್ದರಿಂದ ತುಮಕೂರಿನ ಕಲ್ಲೇಶ್ವರ ಸ್ವಾಮಿ ರಥವನ್ನು ಸುಟ್ಟಿರುವುದು ಹಿಂದುವೇ ಹೊರತು ಮುಸ್ಲೀಮರಲ್ಲ. ಪೋಸ್ಟ್‌ ಕಾರ್ಡ್‌ ಮತ್ತು ರಾಜ್ಯ ಬಿಜೆಪಿಯವರು ಮಾಡಿದ ಆರೋಪ ಸುಳ್ಳಾಗಿದೆ.


ಇದನ್ನು ಓದಿ: ಮೋದಿ ನಾಯಕತ್ವವನ್ನು ಮೆಚ್ಚಿ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check: ಸಿಂಗಾಪುರದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ರಾಹುಲ್ ಚಡಪಡಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *