ಬೆಂಗಳೂರಿನಲ್ಲಿ ನಮಾಜ್ ವೇಳೆ ಹನುಮಾನ್ ಚಾಲೀಸ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಎಂಬುದು ಸುಳ್ಳು

ಬೆಂಗಳೂರಿನ ನಗರತ್‌ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿ ನಮಾಝ್ ವೇಳೆ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಮೊಬೈಲ್ ಅಂಗಡಿ ಮಾಲೀಕನಿಗೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದೆ ಎಂದು ಆಡಿಯೋ ಇಲ್ಲದ ಸಿಸಿಟಿವಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ ಅಂಗಡಿ ಮಾಲೀಕನ ಮೇಲೆ ಕೆಲ ಯುವಕರು ಹಲ್ಲೆ ಮಾಡುವುದು ದಾಖಲಾಗಿದೆ.

ಈ ಕುರಿತು ಸುವರ್ಣ ನ್ಯೂಸ್, ‘ಸಂಜೆ ನಮಾಜ್ ಟೈಂನಲ್ಲಿ ಹನುಮಾನ್‌ ಚಾಲೀಸ್ ಹಾಕ್ತಿಯಾ ಅಂತಾ ಯುವಕನಿಗೆ ಥಳಿತ: ಎಫ್‌ಐಆರ್‌ಗೆ ಪೊಲೀಸರು ಹಿಂದೇಟು? ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದೆ. ‘ನಮಾಜ್‌ ವೇಳೆ ಹನುಮಾನ್‌ ಚಾಲೀಸ ಹಾಕಿದ ಆರೋಪ: ಮೊಬೈಲ್‌ ಅಂಗಡಿ ಮಾಲೀಕನಿಗೆ ಯುವಕರಿಂದ ಥಳಿತ, ಆರ್ ಅಶೋಕ್ ಕಿಡಿ’ ಎಂಬ ಶೀರ್ಷಿಕೆಯಲ್ಲಿ ಕನ್ನಡ ಪ್ರಭ ಸುದ್ದಿ ಪ್ರಕಟಿಸಿದೆ.

“ಕರ್ನಾಟಕದಲ್ಲಿ ಹನುಮಾನ್ ಚಲೀಸಾ ನಿಷೇಧ ಮಾಡಲಾಗಿದೆಯೇ ಸಿಎಂ ಸಿದ್ದರಾಮಯ್ಯನವರೇ? ಕರ್ನಾಟಕದ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣ, ಮಿತಿಮೀರಿದ ಓಲೈಕೆಯಿಂದ ಮೂಲಭೂತವಾದಿ ಮುಸ್ಲಿಮರಿಗೆ ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವ ಮೊಂಡು ಧೈರ್ಯ ಬಂದಿದ್ದು, ಬೆಂಗಳೂರಿನ ಶಿವಾಜಿನಗರದ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಮುಸ್ಲಿಂ ಯುವಕರ ಗುಂಪೊಂದು ಹಿಂದೂಗಳ ಮೇಲೆ ಹಲ್ಲೆ ನಡೆಸಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಆಶೋಕ್ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಬಿಜೆಪಿ ಎಕ್ಸ್‌ ಖಾತೆಯಲ್ಲಿಯೂ ಕಾಂಗ್ರೆಸ್ ಸರ್ಕಾರದ ಮೇಲೆ ಕಿಡಿಕಾರಲಾಗಿದೆ.

ಫ್ಯಾಕ್ಟ್ ಚೆಕ್

ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಘಟನೆಗೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಿನಾಂಕ 17 ಮಾರ್ಚ್‌ 2024ರಂದು FIR ದಾಖಲಾಗಿದ್ದು, ಆ ಪ್ರತಿ ನಮಗೆ ಲಭ್ಯವಾಗಿದೆ. ಎಫ್‌ಐಆರ್ ನಲ್ಲಿ ಮುಖೇಶ್ ಎಂಬುವವರು ಹಲ್ಲೆ ಘಟನೆ ಸಂಬಂಧ ದೂರು ನೀಡಿದ್ದು, ನಂ.65 ಕೃಷ್ಣ ಟೆಲಿಕಾಂ ಶಾಪ್ ಜುಮ್ಮಾ ಮಸೀದಿ ರಸ್ತೆ ಸಿದ್ದಣ್ಣಗಲ್ಲಿ ಬೆಂಗಳೂರು ನಗರ ಇಲ್ಲಿ, ಸಂಜೆ 6 ಗಂಟೆಯಿಂದ 6:40ರ ನಡುವೆ ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

‘ತಾನು ಕೃಷ್ಣ ಟೆಲಿಕಾಂ ಅಂಗಡಿಯಲ್ಲಿರುವಾಗ ಸುಲೇಮಾನ್, ಶಾನವಾಜ್, ರೋಹಿತ್, ಡ್ಯಾನಿಶ್, ತರುಣಾ ಹಾಗೂ ಇತರರು ಸೇರಿಕೊಂಡು ಅಂಗಡಿಯ ಬಳಿ ಬಂದು “ಜೋರಾಗಿ ಸ್ಪೀಕರ್ ಏಕೆ ಹಾಕಿದ್ದೀಯ? ನಮಗೆ ತೊಂದರೆಯಾಗುತ್ತಿದೆ” ಎಂದು ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮುಖೇಶ್ ಅವರು ಕೈ ಬರಹದಲ್ಲಿ ಕೊಟ್ಟಿರುವ ದೂರಿನಲ್ಲೂ “ಏಕೆ ಸೌಂಡ್ ಜೋರಾಗಿ ಹಾಕಿರುವೆ ನಮಗೆ ತೊಂದೆಯಾಗುತ್ತದೆ ಎಂದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ” ಎಂದು ಸ್ಪಷ್ಟವಾಗಿ ಬರೆದಿದ್ದಾರೆ.

ಎಫ್‌ಐಆರ್ ಪ್ರತಿ ಅಥವಾ ಮುಖೇಶ್ ಅವರು ಕೊಟ್ಟಿರುವ ಕೈ ಬರಹದ ದೂರಿನಲ್ಲಿ ಎಲ್ಲಿಯೂ ನಮಾಝ್ ಅಥವಾ ಆಝಾನ್ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿಲ್ಲ ಎಂಬುದು ಗಮನಾರ್ಹವಾಗಿದೆ.

ಅಲ್ಲದೆ, ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ ಪ್ರಕರಣದ ಆರೋಪಿಗಳಲ್ಲಿ ಮುಸ್ಲಿಮರು ಮಾತ್ರವಿಲ್ಲ. ಐದು ಆರೋಪಿಗಳ ಪೈಕಿ ರೋಹಿತ್ ಮತ್ತು ತರುಣಾ ಎಂಬ  ಹಿಂದೂ ಯುವಕರೂ ಸಹ ಸೇರಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಲೌಡ್ ಸ್ಪೀಕರ್ ಹಾಡಿನ ಕಾರಣಕ್ಕೆ ನಡೆದ ಹಲ್ಲೆಯೇ ಹೊರತು ಇದರಲ್ಲಿ ಎಲ್ಲಿಯೂ ಕೋಮು ಆಯಾಮವಿಲ್ಲ. ಘಟನೆಗೂ ನಮಾಜ್, ಆಜಾನ್, ಹನುಮಾನ್ ಚಾಲೀಸಾಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ: Fact Check | ಇಂಗ್ಲೀಷ್‌ ನಾಮಫಲಕ ತೆರವುಗೊಳಿಸಿದ್ದನ್ನು ಕೇಸರಿ ನಾಮಫಲಕ ಎಂದು ಸುಳ್ಳು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *