ಪಾಕಿಸ್ತಾನದಲ್ಲಿ ಹಿಂದು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

Pakistan

“ಪಾಕಿಸ್ತಾನದಲ್ಲಿ, ಹಿಂದೂ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಮುಸ್ಲಿಮರು ವಿವಸ್ತ್ರಗೊಳಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದರು | ವೀಡಿಯೊವನ್ನು ತುಂಬಾ ಶೇರ್ ಮಾಡಿ, ಮೋದಿ ಸರ್ಕಾರವು ಸಿಎಎ-ಎನ್‌ಆರ್‌ಸಿಯನ್ನು ಆದಷ್ಟು ಬೇಗ ಜಾರಿಗೊಳಿಸುವ ಮೂಲಕ ಹಿಂದೂ ಸಿಖ್, ಜೈನ ಮತ್ತು ಬುದ್ಧನನ್ನು ಭಾರತಕ್ಕೆ ಕರೆತರಬೇಕು ಮತ್ತು 10 ಕೋಟಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನು ಓಡಿಸಬೇಕು ಭಾರತದಲ್ಲಿ ಕುಳಿತಿರುವ ಒಳನುಗ್ಗುವವರಿಗೆ ಸಹಾಯ ಮಾಡುತ್ತಿರುವವರನ್ನು ಬಗ್ಗುಬಡಿಯಬೇಕು ಹಂಚಿಕೊಳ್ಳುವುದನ್ನು ನಿಲ್ಲಿಸಬಾರದು ಸ್ನೇಹಿತರೇ” ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಇಬ್ಬರು ಮಹಿಳೆಯರು(ಅದರಲ್ಲಿ ಒಬ್ಬಾಕೆ ಬಾಲಕಿ) ವಿವಸ್ತ್ರವಾಗಿದ್ದು ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಅಳುತ್ತಿದ್ದಾರೆ ಮತ್ತು ಸುತ್ತಲು ನೆರದ ಜನರು ಅವರನ್ನು ರಕ್ಷಿಸಲು ಬಾರದೆ ನೋಡುತ್ತಾ ನಿಂತಿದ್ದಾರೆ.

ಇದೇ ವಿಡಿಯೋವನ್ನು ಹಲವು ಎಕ್ಸ್‌ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ಈ ಹಿಂದೆ ಇದೇ ವಿಡಿಯೋವನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಹಿಂದೂ ದಲಿತ ಸಮುದಾಯಕ್ಕೆ ಸೇರಿದ ತಾಯಿ ಮತ್ತು ಮಗಳು ಇಸ್ಲಾಂಗೆ ಮತಾಂತರವಾಗಲು ಒಪ್ಪದ ಕಾರಣಕ್ಕಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿತ್ತು.

ಫ್ಯಾಕ್ಟ್‌ಚೆಕ್: ಡಿಸೆಂಬರ್ 7, 2021 ರಂದು, ಪಾಕಿಸ್ತಾನದ ಮಾಧ್ಯಮ ‘DAWN’ ಈ ಕುರಿತು ಸುದ್ದಿ ಮಾಡಿದ್ದು ಈ ಘಟನೆ ಫೈಸಲಾಬಾದ್ ನಲ್ಲಿ ನಡೆದಿದ್ದು ನಾಲ್ವರು ಮಹಿಳೆಯರು ಕಸ ಸಂಗ್ರಹಿಸಲು ಮಾರುಕಟ್ಟೆಗೆ ಹೋಗಿದ್ದರು. ಎಲೆಕ್ಟ್ರಿಕ್ ಅಂಗಡಿಯೊಳಗೆ ಹೋಗಿ ಮಾಲೀಕರಿಗೆ ನೀರು ಕೇಳಿದರು, ಆದರೆ ಮಾಲೀಕರು ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಾರುಕಟ್ಟೆಯಲ್ಲಿ ನಾಲ್ವರು ಮಹಿಳೆಯರನ್ನು ಥಳಿಸಿ ಅವರನ್ನು ವಿವಸ್ತ್ರಗೊಳಿಸಿದ್ದಾರೆ ಎಂದು ವರದಿ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪಂಜಾಬ್ ಪೊಲೀಸರು ಅಂಗಡಿ ಮಾಲೀಕ ಸೇರಿದಂತೆ ಐದು ಜನರನ್ನು ಬಂಧಿಸಿದ್ದಾರೆ ಎಂದು ‘ಪಂಜಾಬ್ ಪೊಲೀಸ್ ಅಧಿಕಾರಿ’ ಟ್ವಿಟರ್ ಪೋಸ್ಟ್ ಮಾಡಿದ್ದಾರೆ. ಮಿಲ್ಲತ್ ಟೌನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು. ನಾಲ್ವರು ಶಂಕಿತ ಆರೋಪಿಗಳಾದ ಉಸ್ಮಾನ್ ಎಲೆಕ್ಟ್ರಿಕ್ ಸ್ಟೋರ್ ಮಾಲೀಕ ಸದ್ದಾಂ ಮತ್ತು ಅವರ ಉದ್ಯೋಗಿ ಫೈಸಲ್, ಜಹೀರ್ ಅನ್ವರ್ ಮತ್ತು ನೈರ್ಮಲ್ಯ ಉತ್ಪನ್ನಗಳ ಮಾಲೀಕ ಫಕೀರ್ ಹುಸೇನ್ ಅವರನ್ನು ಬಂಧಿಸಲಾಗಿದೆ.

ಈ ಘಟನೆಯ ಕುರಿತು ಪಾಕಿಸ್ತಾನ ಟುಡೆ, ಅರಬ್ ನ್ಯೂಸ್ ಪಿಕೆ, NDTV ವರ್ಲ್ಡ್ ಸೇರಿದಂತೆ ಅನೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಹೆಚ್ಚಿನ ಹುಡುಕಾಟದಲ್ಲಿ ಅಲ್ಲಿ ದೊರೆತ ಸಿಸಿಟಿವಿ ದೃಶ್ಯಗಳಿಂದ ಪ್ರಕರಣ ಬಯಲಾಗಿದ್ದು, ಅಂಗಡಿಗೆ ಪ್ರವೇಶಿಸಿದ ಮಹಿಳೆಯರು ಕಳ್ಳತನ ಎಸಗಲು ಪ್ರಯತ್ನಿಸಿದ್ದಾರೆ ಎಂಬು ಬಹಿರಂಗವಾಗಿದೆ.

ಅಂಗಡಿಯೊಳಗೆ ದಾಖಲಾದ ಸಿಸಿಟಿವಿ ದೃಶ್ಯಗಳಲ್ಲಿ, ಅಂಗಡಿಗೆ ಪ್ರವೇಶಿಸುವ ನಾಲ್ವರು ಮಹಿಳೆಯರಲ್ಲಿ ಒಬ್ಬರು ಒಳಗೆ ಹೋಗುತ್ತಾರೆ, ಅವರಲ್ಲಿ ಒಬ್ಬರು ಅಂಗಡಿಯಿಂದ ವಸ್ತುವನ್ನು ತೆಗೆದುಕೊಂಡು ಅದನ್ನು ತನ್ನ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದಾರೆ, ನಂತರ ಅಂಗಡಿ ಮಾಲೀಕರು ಓಡಿಹೋಗಿ ಬಾಗಿಲು ಮುಚ್ಚಲು ಪ್ರಯತ್ನಿಸಿದ್ದಾರೆ. ಆದರೆ, ಮಹಿಳೆಯರು ಹೊರಬಂದ ನಂತರ, ಮಾಲೀಕರು ಅವರನ್ನು ಹಿಡಿದು ಹೊಡೆಯುತ್ತಾರೆ. ಇಬ್ಬರು ಮಹಿಳೆಯರು ಅಲ್ಲಿಂದ ಓಡಿ ಹೋಗಿದ್ದು, ಮಾಲೀಕರು ಇನ್ನಿಬ್ಬರು ಮಹಿಳೆಯರನ್ನು ಹಿಡಿದಿದ್ದಾರೆ.

ನಂತರ ಮಹಿಳೆಯರೇ ತಾವು ಏನು ಕದ್ದಿಲ್ಲ ಎಂದು ಸಾಬೀತು ಪಡಿಸಲು ಬೆತ್ತಲಾಗಿದ್ದಾರೆ. ನಂತರ ಅಲ್ಲಿ ಸುತ್ತ ನೆರೆದಿದ್ದ ಜನ ಅವರನ್ನು ಹಿಡಿದು ಥಳಿಸಿ ಅವರಿಗೆ ಸುಮಾರು ಒಂದು ಗಂಟೆಗಳ ಕಾಲ ಕಿರುಕುಳ ನೀಡಿದ್ದಾರೆ.

ಆದ್ದರಿಂದ ಈ ವೈರಲ್ ಸಂದೇಶದಲ್ಲಿರುವಂತೆ ವಿಡಿಯೋದಲ್ಲಿರುವ ಮಹಿಳೆಯರು ಹಿಂದುಗಳು ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ ಮತ್ತು ಇದು 2021ರ ಹಲೆಯ ವಿಡಿಯೋ ಆಗಿದೆ.


ಇದನ್ನು ಓದಿ: ಕೇರಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ವೇಳೆ ಪಾಕಿಸ್ತಾನದ ಬಾವುಟ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check: ರಾಮಚಂದ್ರ ಕಲ್ಸಂಗ್ರ ರಾಮೇಶ್ವರ ಕೆಫೆ ಸ್ಪೋಟದ ಭಯೋತ್ಪಾದಕ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *