ಕೇರಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ವೇಳೆ ಪಾಕಿಸ್ತಾನದ ಬಾವುಟ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

Congress

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಇರುವ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಮಣಿಸುವ ಸಲುವಾಗಿ ಸುಳ್ಳು ಸುದ್ದಿಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಮತ್ತು ಪ್ರತೀದಿನವೂ ಒಂದೊಂದು ಸುಳ್ಳು ಆರೋಪಗಳನ್ನು ಹರಿಬಿಡುತ್ತಿದ್ದಾರೆ.

ಈಗ, “ಇಲ್ಲ! ಇದು ಪಾಕಿಸ್ತಾನವಲ್ಲ, ಆದರೆ ಕಾಂಗ್ರೆಸ್ ಅಭ್ಯರ್ಥಿ ಕೆ. ಮುರಳೀಧರನ್ ಅವರು ಕೇರಳದ ತಮ್ಮ ತ್ರಿಶೂರ್ ಕ್ಷೇತ್ರದ ಒಂದು ನಿರ್ದಿಷ್ಟ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನೀವು ಭಾರತದ ಯಾವುದಾದರೂ ಒಂದು ರಾಷ್ಟ್ರೀಯ ಧ್ವಜವನ್ನು ಗುರುತಿಸಬಹುದೇ? ಇದು ‘ಭಾರತ್ ಜೋಡೋ’ ಸಿದ್ಧಾಂತವೇ? ಮತ್ತು ಇದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನಲ್ಲಿ ಹರಿಯುತ್ತದೆಯೇ?” ಎಂದು ತೆಲಂಗಾಣ ರಾಜ್ಯದ ಬಿಜೆಪಿಯ ರಾಜ್ಯ ಖಜಾಂಚಿ ಶಾಂತಿ ಕುಮಾರ್ ಆರೋಪಿಸಿದ್ದಾರೆ. ಅವರು ಹಂಚಿಕೊಂಡಿರುವ ವೈರಲ್ ವಿಡಿಯೋದಲ್ಲಿ ಹಸಿರು ಬಾವುಟಗಳನ್ನು ನೋಡಬಹುದು. ಮತ್ತು ಈ ಹಸಿರು ಬಾವುಟವನ್ನು ಪಾಕಿಸ್ತಾನದ ಬಾವುಟ ಎಂದು ಪ್ರತಿಪಾದಿಸಲಾಗುತ್ತಿದೆ. 

ಇದೇ ವಿಡಿಯೋವನ್ನು ಅನೇಕ ಜನ ಬಿಜೆಪಿ ಕಾರ್ಯಕರ್ತರು ಮತ್ತು ಬಲಪಂಥೀಯರು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಈ ವೈರಲ್ ವಿಡಿಯೋ 2019 ರ ಲೋಕಸಭಾ ಚುನಾವಣೆ ಸಂದರ್ಭದ್ದಾಗಿದೆ. ಕೇರಳದಲ್ಲಿ 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಅನ್ನು ರಚಿಸಿತ್ತು. ವಿಡಿಯೋದಲ್ಲಿರುವ ಬಾವುಟ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಬಾವುಟವಾಗಿದ್ದು ಪಾಕಿಸ್ತಾನದ್ದಲ್ಲ.

ಈ ಕುರಿತು ಕೀವರ್ಡ್ ಮೂಲಕ ಹುಡುಕಾಟ ನಡೆಸಿದಾಗ “ಕೊಂಡೊಟ್ಟಿ ಪಚ್ಚಪದ” ಎಂಬ ರಾಜಕೀಯ ಸಂಘಟನೆಯ ಫೇಸ್‌ಬುಕ್ ಪುಟದಲ್ಲಿ ಇದೇ ವೀಡಿಯೊವನ್ನು ಅದರ ಪುಟದಲ್ಲಿ ಹಂಚಿಕೊಂಡಿರುವುದು ನಮಗೆ ಲಭ್ಯವಾಗಿದೆ. ವೀಡಿಯೊವನ್ನು ಮೂಲತಃ 19 ಏಪ್ರಿಲ್ 2019 ರಂದು ಪೋಸ್ಟ್ ಮಾಡಲಾಗಿದೆ. 2019 ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದ ಕೇರಳದ ವಡಕರದಲ್ಲಿ ಕೆ ಮುರಳೀಧರನ್ ಅವರ ಪ್ರಚಾರವನ್ನು ವೀಡಿಯೊದಲ್ಲಿ ದಾಖಲಿಸಲಾಗಿದೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿನ ಶೀರ್ಷಿಕೆ ವಿವರಿಸುತ್ತದೆ.

ಅಲ್ಲದೆ, ವೈರಲ್ ವೀಡಿಯೊದಲ್ಲಿ ಧ್ವಜಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಗೋಚರಿಸುವ ಹಸಿರು ಧ್ವಜಗಳು ಪಾಕಿಸ್ತಾನದ ಧ್ವಜಗಳಲ್ಲ ಎಂದು ಸ್ಪಷ್ಟಪಡಿಸುತ್ತದೆ. ಪಾಕಿಸ್ತಾನದ ಧ್ವಜವು ಹಸಿರು ಜೊತೆಗೆ ಬಿಳಿ ಭಾಗವನ್ನು ಹೊಂದಿದೆ, ಅದು ವೀಡಿಯೊದಲ್ಲಿರುವ ಧ್ವಜಗಳಲ್ಲಿ ಇಲ್ಲದಿರುವುದನ್ನು ನೀವು ನೋಡಬಹುದು.

ಈ ಧ್ವಜಗಳು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅನ್ನು ಪ್ರತಿನಿಧಿಸುತ್ತವೆ, ಕೇರಳ ಮೂಲದ ಈ ರಾಜಕೀಯ ಪಕ್ಷವು ಕೇರಳದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪಾಕಿಸ್ತಾನಿ ಧ್ವಜ ಮತ್ತು IUML ಧ್ವಜದ ನಡುವಿನ ವ್ಯತ್ಯಾಸವನ್ನು ಕೆಳಗಿನ ಗ್ರಾಫಿಕ್‌ನಲ್ಲಿ ಗಮನಿಸಬಹುದು.

ಆದ್ದರಿಂದ ಸಧ್ಯ ಹರಿದಾಡುತ್ತಿರುವ ವೈರಲ್ ವಿಡಿಯೋದಲ್ಲಿರುವ ಬಾವುಟ IUML ಧ್ವಜವೇ ಹೊರತು ಪಾಕಿಸ್ತಾನದ ಧ್ವಜವಲ್ಲ.


ಇದನ್ನು ಓದಿ: Fact Check: ಸಿಜೆಐ ಚಂದ್ರಚೂಡ್ ಅವರ ವಿಡಿಯೋ ಕಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ


ವಿಡಿಯೋ ನೋಡಿ: ಚುನಾವಣಾ ನೀತಿ ಸಂಹಿತೆ: ರಾಜಕೀಯ ಪಕ್ಷದ ವಿರುದ್ಧ ಪೋಸ್ಟ್‌ ಮಾಡಿದರೆ ಕಾನೂನು ಕ್ರಮ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *