ಇಷ್ಟು ದಿನ ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದರೂ, ಅನ್ಯ ಕೋಮಿನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರು ಆದರೆ ಈಗ ಸುಪ್ರಿಂ ಕೋರ್ಟ್ ಕುರಿತು ಭಾರತದ ಮುಖ್ಯ ನ್ಯಾಯಾದೀಶರ ಕುರಿತು ಇದೇ ಮೊದಲ ಬಾರಿಗೆ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ.
“CJI ಈ ರೀತಿ ವರ್ತಿಸಬಹುದೇ? ವಕೀಲರು ಮಾತು ಮುಂದುವರೆಸುತ್ತಿರುವಾಗಲೇ ಚಂದ್ರಚೂಡ್ ಅವರು ಏನೂ ಮಾತನಾಡದೆ ಎದ್ದು ಹೋಗಿದ್ದಾರೆ. ಇದು ಭಾರತ ಸರ್ಕಾರಕ್ಕೆ ಘೋರ ಅವಮಾನ ಮತ್ತು ಅಪಮಾನ. CJI ಚಂದ್ರಚೂಡ್ ಸೇರಿದಂತೆ ಎಲ್ಲಾ ನ್ಯಾಯಾಧೀಶರನ್ನು ತರಬೇಕು ಮತ್ತು ಭಾರತದ ರಾಷ್ಟ್ರಪತಿಗಳು ರಾಜೀನಾಮೆ ನೀಡುವಂತೆ ಒತ್ತಾಯಿಸಬೇಕು. ಸಂಪೂರ್ಣವಾಗಿ ಶಿಷ್ಟಾಚಾರವಿಲ್ಲದ ಮತ್ತು ಆರೋಗೆಂಟ್ ಈ ವ್ಯಕ್ತಿ ಚಂದ್ರಚೂಡ್.. ಅವರು ಮತ್ತು ಇತರ ನ್ಯಾಯಾಧೀಶರು ಭಾರತ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ನ್ಯಾಯಾಧೀಶರ ಈ ವರ್ತನೆಯ ಹಿಂದಿನ ಕಾರಣಗಳನ್ನು ಪಟ್ಟಿ ಮಾಡುವ ಥ್ರೆಡ್ ಅನ್ನು ನಾನು ಶೀಘ್ರದಲ್ಲೇ ಪೋಸ್ಟ್ ಮಾಡುತ್ತೇನೆ.” ಎಂಬ ಬರಹದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಜಯೇಶ್ ಮೆಹ್ತಾ ಎಂಬುವವರು ಹಂಚಿಕೊಂಡಿದ್ದಾರೆ.
“ವಕೀಲರು ಮಾತು ಮುಂದುವರೆಸುತ್ತಿರುವಾಗಲೇ ಚಂದ್ರಚೂಡ್ ಅವರು ಏನೂ ಮಾತನಾಡದೆ ಎದ್ದು ಹೋದರು. ಕೌಟುಂಬಿಕ ಪ್ರತಿಭೆ ಮತ್ತು ನ್ಯಾಯಾಂಗದಲ್ಲಿ ಸರಿಯಾದ DNA ಅನುಕ್ರಮವನ್ನು ಹೊಂದಿರುವ ನ್ಯಾಯಾಧೀಶರ ದುರಹಂಕಾರವು ಎಷ್ಟು ಉನ್ನತ ಮತ್ತು ಅಶ್ಲೀಲವಾಗಿದೆ ಎಂಬುದನ್ನು ಈ ವೀಡಿಯೊ ತೋರಿಸುತ್ತದೆ. ಇದು ಸುಪ್ರೀಂ ಕೋರ್ಟ್. ಸರ್ವೋಚ್ಚ ನ್ಯಾಯಾಲಯ!” ಎಂದು ಸಹ ಬರೆದು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರ ಈ ವೈರಲ್ ವೀಡಿಯೊವನ್ನು ಕಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಇದರ ಸಂಪೂರ್ಣ ವಿಡಿಯೋ ಸುಪ್ರಿಂ ಕೋರ್ಟ್‌ನ ಅಧಿಕೃತ ಯೂಟೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಮೂಲ ಲೈವ್ ಸ್ಟ್ರೀಮ್‌ನಲ್ಲಿ, ಸಿಜೆಐ ಚಂದ್ರಚೂಡ್ ಅವರು ತಮ್ಮ ಕುರ್ಚಿಯನ್ನು ಸರಿಹೊಂದಿಸುತ್ತಿದ್ದಾರೆ ಮತ್ತು ನಂತರ ಎಸ್. ಜಿ ತುಷಾರ್ ಮೆಹ್ತಾ ಅವರ ವಾದಗಳನ್ನು ಆಲಿಸುವುದನ್ನು ಮುಂದುವರೆಸಿದ್ದಾರೆ. ಅವರು ತಮ್ಮ ಕುರ್ಚಿಯನ್ನು ಸರಿಹೊಂದಿಸಿದ ನಂತರದ ಭಾಗವನ್ನು ತಪ್ಪಾಗಿ ತಿರುಚುವ ಸಲುವಾಗಿ ಕ್ರಾಪ್ ಮಾಡಲಾಗಿದೆ.
ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯ ಆಯ್ದ ಬಹಿರಂಗಪಡಿಸುವಿಕೆಗಾಗಿ ಮಾರ್ಚ್ 18 ರಂದು ಸುಪ್ರೀಂ ಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿತು, ಇದನ್ನು ಇತ್ತೀಚೆಗೆ ನ್ಯಾಯಾಲಯಗಳು ಅಸಂವಿಧಾನಿಕ ಎಂದು ತೀರ್ಪುನೀಡಿವೆ. ಮಾರ್ಚ್ 21 ರೊಳಗೆ ಎಲ್ಲಾ ‘ಕಲ್ಪಿಸಬಹುದಾದ’ ವಿವರಗಳನ್ನು ಒದಗಿಸುವಂತೆ ದೇಶದ ಅತಿದೊಡ್ಡ ರಾಷ್ಟ್ರೀಯ ಬ್ಯಾಂಕ್‌ಗೆ ಪೀಠವು ನಿರ್ದೇಶನ ನೀಡಿದೆ. ಏಪ್ರಿಲ್ 2019 ರ ನಂತರದ ಮಾಹಿತಿಯನ್ನು ಮಾತ್ರ ಬಹಿರಂಗಪಡಿಸಬೇಕಾಗುತ್ತದೆ ಎಂದು ಸುಪ್ರಿಂ ಕೋರ್ಟ್ ಸ್ಪಷ್ಟಪಡಿಸಿದೆ.
ಇದರಿಂದಾಗಿ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರ ಮೇಲೆ ಸಿಟ್ಟಾಗಿರುವ ಬಲಪಂಥೀಯರು ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ಬೆಂಬಲಿಗರು ಈಗ ಚಂದ್ರಚೂಡ್ ಅವರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ಸದ್ಯ ಹರಿದಾಡುತ್ತಿರುವ ವೈರಲ್ ವಿಡಿಯೋ ಕ್ರಾಫ್ ಮಾಡಿದ ವಿಡಿಯೋ ಆಗಿದೆ.
ಇದನ್ನು ಓದಿ: ಬೆಂಗಳೂರಿನಲ್ಲಿ ನಮಾಜ್ ವೇಳೆ ಹನುಮಾನ್ ಚಾಲೀಸ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಎಂಬುದು ಸುಳ್ಳು
ವಿಡಿಯೋ ನೋಡಿ: Fact Check: ರಾಮಚಂದ್ರ ಕಲ್ಸಂಗ್ರ ರಾಮೇಶ್ವರ ಕೆಫೆ ಸ್ಪೋಟದ ಭಯೋತ್ಪಾದಕ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.